Maharashtra Assembly Election 2024: ಹರಿಯಾಣದಂತೆ ಬಿಜೆಪಿಗೆ ರಾಜ್ಯದಲ್ಲಿ ಸವಾಲು?
ಮುಂಬೈ, ಅಕ್ಟೋಬರ್ 16: ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ 2024ರ ದಿನಾಂಕ ಘೋಷಣೆಯಾಗಿದೆ. 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದ ಚುನಾವಣೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಮಹತ್ವದ್ದು. ಎರಡು ರಾಷ್ಟ್ರೀಯ ಪಕ್ಷಗಳು ಮೈತ್ರಿಕೂಟ ಮಾಡಿಕೊಂಡು ಚುನಾವಣೆ ಎದುರಿಸಲಿದೆ.
ಸದ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ಅಧಿಕಾರದಲ್ಲಿದೆ. ಈ ಬಾರಿಯ ಚುನಾವಣೆಯನ್ನು ಮೈತ್ರಿಕೂಟದ ಮೂಲಕವೇ ಎದುರಿಸಲಾಗುತ್ತದೆ. ಆದರೆ ಈ ಮೈತ್ರಿಕೂಟ ಹರಿಯಾಣ ಮಾದರಿಯಲ್ಲಿ ಆಡಳಿತ ವಿರೋಧಿ ಅಲೆಗೆ ಸಿಲುಕಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮೈತ್ರಿಕೂಟ 17 ಮತ್ತು ಇಂಡಿಯಾ ಮೈತ್ರಿಕೂಟ 30 ಸ್ಥಾನಗಳಲ್ಲಿ ಜಯಗಳಿಸಿವೆ. ಮಹಾಯತಿ ಮತ್ತು ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಶೇ 43ರಷ್ಟು ಮತಗಳನ್ನುಗಳಿಸಿವೆ. ಹರಿಯಾಣದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 5 ಸೀಟು ಗೆದ್ದಿದ್ದವು.
ಸವಾಲು ಇದೆ: ಮಹಾರಾಷ್ಟ್ರ ರಾಜಕೀಯವನ್ನು ಹತ್ತಿರದಿಂದ ಬಲ್ಲವರ ಪ್ರಕಾರ ಬಿಜೆಪಿಗೆ ಹರಿಯಾಣ ಮಾದರಿಯಲ್ಲಿಯೇ ಸವಾಲು ಎದುರಾಗಿದೆ. ಚುನಾವಣೆ ಗೆಲ್ಲಬೇಕಾದರೆ ಬಿಜೆಪಿ ಮತಗಳಿಕೆಯನ್ನು ಶೇ 10ರಷ್ಟು ಹೆಚ್ಚಿಸಿಕೊಳ್ಳಬೇಕು. ಅದರಲ್ಲಿಯೂ ಮರಾಠವಾಡ ಮತ್ತು ವಿದರ್ಭ ಪ್ರಾಂತ್ಯದಲ್ಲಿ ಜಯಭೇರಿ ಬಾರಿಸಬೇಕು.
2019ರ ವಿಧಾನಸಭೆ ಚುನಾವಣೆ ಬಳಿಕ ಮಹಾರಾಷ್ಟ್ರ ರಾಜ್ಯದ ರಾಜಕೀಯ ಚಿತ್ರಣ ಬದಲಾಗಿದೆ. ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಎರಡು ಭಾಗವಾಗಿ ಹೋಗಿದೆ. ಶಿವಸೇನೆ (ಏಕನಾಥ್ ಶಿಂಧೆ ಬಣ) ಅಧಿಕಾರದಲ್ಲಿದೆ, ಎನ್‌ಸಿಪಿ (ಅಜಿತ್ ಪವಾರ್ ಬಣ) ಜೊತೆಗಿದೆ. ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಬಣ ವಿರೋಧ ಪಕ್ಷದಲ್ಲಿದೆ.
ಮಹಾರಾಷ್ಟ್ರದ ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಜೊತೆಗಿದೆ.
ಸೀಟು ಹಂಚಿಕೆ ವಿಚಾರದಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿ ಅಸಮಾಧಾನ ಉಂಟಾದರೆ ಅದು ಬಿಜೆಪಿಗೆ ಲಾಭವಾಗಲಿದೆ. ಒಂದು ವೇಳೆ ಮಹಾರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗುತ್ತೇವೆ ಎಂದು ಶಿವಸೇನೆ, ಎನ್‌ಸಿಪಿ ಹೊರಟರೆ ಅದು ಬಿಜೆಪಿಗೆ ಸವಾಲಾಗಲಿದೆ.
ಮುಖ್ಯಮಂತ್ರಿ ಘೋಷಣೆ ವಿಚಾರದಲ್ಲಿ ಎಂವಿಎ ಮೈತ್ರಿಕೂಟದಲ್ಲಿ ಸಣ್ಣಪುಟ್ಟ ಅಸಮಾಧಾನವಿದೆ. ಜಮ್ಮು ಮತ್ತು ಕಾಶ್ಮೀರ ಮಾದರಿಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಮನ್ನಣೆ ಸಿಗುವ ನಿರೀಕ್ಷೆ ಇದ್ದು, ಶಿವಸೇನೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಮತ್ತೊಂದು ಕಡೆ ಮಹಾಯತಿ ಮೈತ್ರಿಕೂಟ ಮೊದಲು ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ ಎಂದು ಎಂವಿಎ ಕಾಯುತ್ತಿದೆ.
ಹರಿಯಾಣದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ, ಚುನಾವಣಾ ಪೂರ್ವ ಮತ್ತು ನಂತರದ ಸಮೀಕ್ಷೆಗಳು ಬಿಜೆಪಿ ಅಧಿಕಾರ ಕಳೆದುಕೊಳ್ಳಲಿವೆ ಎಂದು ಹೇಳಿದ್ದರೂ ಸಹ ಬಿಜೆಪಿ 3ನೇ ಬಾರಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಮಹಾರಾಷ್ಟ್ರದ ಚುನಾವಣಾ ಪೂರ್ವ ಸಮೀಕ್ಷೆಗಳು ಈಗ ಎಂವಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿವೆ ಎಂದು ಹೇಳುತ್ತಿವೆ. ಇದು ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಚಿಂತಗೆ ಕಾರಣವಾಗಿದೆ.












Click it and Unblock the Notifications