ರಾಜೀನಾಮೆ ನಿರ್ಧಾರದಿಂದ ಉಪ ಮುಖ್ಯಮಂತ್ರಿ ಯು-ಟರ್ನ್!
ಮುಂಬೈ, ಜೂನ್ 08: ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾದ ಬಳಿಕ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ರಾಜ್ಯ ರಾಜಕೀಯದಲ್ಲಿ ಈ ಹೇಳಿಕೆ ಚರ್ಚೆಗೆ ಕಾರಣವಾಗಿತ್ತು.
ಶನಿವಾರ ಮುಂಬೈನಲ್ಲಿ ಮಾತನಾಡಿದ ದೇವೇಂದ್ರ ಫಡ್ನವಿಸ್, "ನಾನು ಓಡಿಹೋಗುವುದಿಲ್ಲ. ನಾನು ಮನಸ್ಸು ಬದಲಾವಣೆ ಮಾಡಿಕೊಂಡಿದ್ದೇನೆ" ಎಂದು ಹೇಳುವ ಮೂಲಕ ರಾಜೀನಾಮೆ ತೀರ್ಮಾನದಿಂದ ಹಿಂದೆ ಸರಿಯುವ ಕುರಿತು ಮಾತನಾಡಿದರು.

ಶುಕ್ರವಾರ ದೇವೇಂದ್ರ ಫಡ್ನವಿಸ್ ದೆಹಲಿ ಪ್ರವಾಸ ಕೈಗೊಂಡಿದ್ದರು. ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಭೇಟಿ ಮಾಡಿದ್ದರು. ಈ ಭೇಟಿ ಬಳಿಕ ದೇವೇಂದ್ರ ಫಡ್ನವಿಸ್ ರಾಜೀನಾಮೆ ತೀರ್ಮಾನ ವಾಪಸ್ ಪಡೆಯುವ ಕುರಿತು ಮಾತನಾಡಿದ್ದಾರೆ.
ಬಿಜೆಪಿಗೆ ಸೋಲು: ಲೋಕಸಭೆ ಚುನಾವಣೆ 2024ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿತ್ತು. ರಾಜ್ಯದಲ್ಲಿ 48 ಲೋಕಸಭಾ ಕ್ಷೇತ್ರಗಳಿವೆ. ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 9, ಶಿವಸೇನೆ (ಠಾಕ್ರೆ ಬಣ) 9 ಸ್ಥಾನಗಳಲ್ಲಿ ಜಯಗಳಿಸಿದ್ದವು.
ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷರು ಚಂದ್ರಶೇಖರ ಬಾವಾಂಕುಲೆ. ಆದರೆ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾದ ಕಾರಣ ಅವರು ಲೋಕಸಭೆ ಚುನಾವಣೆ ಸೋಲಿನ ಸಂಪೂರ್ಣ ಜವಾಬ್ದಾರಿ ಹೊರುತ್ತೇನೆ ಎಂದು ಹೇಳಿದ್ದರು.
"ರಾಜ್ಯದಲ್ಲಿ ಪಕ್ಷವನ್ನು ನಾನು ಮುನ್ನಡೆಸುತ್ತಿದ್ದೇನೆ. ಇಂತಹ ಫಲಿತಾಂಶದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ನಾನು ಪಕ್ಷದ ಹೈಕಮಾಂಡ್‌ಗೆ ನನ್ನ ಎಲ್ಲಾ ಸರ್ಕಾರದ ಜವಾಬ್ದಾರಿಯಿಂದ ಮುಕ್ತಗೊಳಿಸಿ ಎಂದು ಮನವಿ ಮಾಡುತ್ತೇನೆ. ಆಗ ನಾನು ಪಕ್ಷದ ಕೆಲಸಗಳನ್ನು ಮುಂದಿನ ಚುನಾವಣೆಗಾಗಿ ಪರಿಶ್ರಮದಿಂದ ಮಾಡಲು ಅನುಕೂಲವಾಗಲಿದೆ" ಎಂದು ತಿಳಿಸಿದ್ದರು.
ದೆಹಲಿಯಲ್ಲಿ ಅಮಿತ್ ಶಾ ಭೇಟಿಯ ವೇಳೆ ಅವರು ಮಹಾರಾಷ್ಟ್ರದ ಸರ್ಕಾರದಲ್ಲಿ ಮುಂದುವರೆಯಬೇಕು ಸಲಹೆ ನೀಡಿದ್ದು, ಆದ್ದರಿಂದ ದೇವೇಂದ್ರ ಫಡ್ನವಿಸ್ ತಮ್ಮ ರಾಜೀನಾಮೆ ತೀರ್ಮಾನ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.
"ನಾನು ಎಲ್ಲರ ಮುಖದಲ್ಲೂ ಸಂತೋಷವನ್ನು ನೋಡುತ್ತಿದ್ದೇನೆ, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಈಗ ಪ್ರಪಂಚದಾದ್ಯಂತ ಮೊಳಗುತ್ತಿದೆ. ಶುಕ್ರವಾರ ಎನ್‌ಡಿಎ ಮೈತ್ರಿಕೂಟ ಅವರ ಹೆಸರನ್ನು ಪ್ರಧಾನಿಯಾಗಿ ಒಪ್ಪಿಕೊಂಡಿದೆ" ಎಂದು ದೇವೇಂದ್ರ ಫಡ್ನವಿಸ್ ಹೇಳಿದರು.
"ರಾಜ್ಯದಲ್ಲಿ ನಾವು ಬಯಸಿದಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ನಾವು ನಮ್ಮ ಭವಿಷ್ಯದ ಕಾರ್ಯತಂತ್ರವನ್ನು ರೂಪಿಸಲು ಸಭೆಯನ್ನು ನಡೆಸಲಿದ್ದೇವೆ. ರಾಜ್ಯದ ಚುನಾವಣೆ ಬಗ್ಗೆ ನಮಗೆ ಸ್ಪಷ್ಟವಾದ ದಿಕ್ಸೂಚಿ ಇದೆ" ಎಂದು ತಿಳಿಸಿದರು.
"ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಾನು ಬಿಜೆಪಿಯನ್ನು ಮುನ್ನಡೆಸಿದ್ದೆ. ಆದ್ದರಿಂದ ಈ ಸೋಲಿಗೆ ನಾನೇ ಹೊಣೆ ಎಂದು ಹೇಳಿದೆ. ನನ್ನ ಸ್ಥಾನ ತೊರೆಯಲು ಅವಕಾಶ ನೀಡುವಂತೆ ನಾಯಕರನ್ನು ಕೇಳಿದ್ದೆ. ನಾಯಕರಿಗೆ ನನ್ನ ಮೇಲೆ ನಂಬಿಕೆ ಇದೆ. ನಾನು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದರು.
ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ರಾಜ್ಯದ ಮಾಜಿ ಮುಖ್ಯಮಂತ್ರಿ. ಗೋವಾ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಉಸ್ತುವಾರಿಯಾಗಿ ಕೆಲಸ ಮಾಡಿರುವ ಅನುಭವಿ ನಾಯಕ.
ಮಹಾರಾಷ್ಟ್ರದಲ್ಲಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರಿದರು. ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 2 ಜುಲೈ 2023ರಂದು ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜೂನ್ 4ರಂದು 2024ರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು. ಜೂನ್ 5ರ ಬುಧವಾರ ದೇವೇಂದ್ರ ಫಡ್ನವೀಸ್ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಮಾತು ಆಡಿದ್ದರು.












Click it and Unblock the Notifications