ಮಹಾರಾಷ್ಟ್ರ: 'ಶಿಂಧೆ ಸರ್ಕಾರಕ್ಕೆ ಡೆತ್ ವಾರೆಂಟ್ ಹೊರಡಿಸಲಾಗಿದೆ' - ಸಂಜಯ್ ರಾವುತ್
ಮುಂಬೈ ಏಪ್ರಿಲ್ 23: ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಡೆತ್ ವಾರೆಂಟ್ ಹೊರಡಿಸಲಾಗಿದೆ. ಮುಂದಿನ 15-20 ದಿನಗಳಲ್ಲಿ ಶಿಂಧೆ ಸರ್ಕಾರ ಬೀಳಲಿದೆ ಎಂದು ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವುತ್, ನ್ಯಾಯಾಲಯದ ಆದೇಶಕ್ಕಾಗಿ ತಮ್ಮ ಪಕ್ಷವು ಕಾಯುತ್ತಿದೆ. ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು. ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆಯ 16 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸುಪ್ರೀಂ ಕೋರ್ಟ್ ಬಾಕಿ ಉಳಿದಿರುವ ತೀರ್ಪನ್ನು ಉಲ್ಲೇಖಿಸಿಸಂಜಯ್ ರಾವತ್ ಕಿಡಿ ಕಾರಿದ್ದಾರೆ.

ಈಗಿನ ಮುಖ್ಯಮಂತ್ರಿ ಮತ್ತು ಅವರ 40 ಶಾಸಕರ ಸರ್ಕಾರ 15-20 ದಿನಗಳಲ್ಲಿ ಪತನವಾಗಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಈ ಸರ್ಕಾರದ ಡೆತ್ ವಾರಂಟ್ ಹೊರಡಿಸಲಾಗಿದೆ. ಅದಕ್ಕೆ ಯಾರು ಸಹಿ ಹಾಕುತ್ತಾರೆ ಎನ್ನುವುದನ್ನು ಈಗ ನಿರ್ಧರಿಸಬೇಕಿದೆ. ಫೆಬ್ರವರಿಯಲ್ಲಿ ಶಿಂಧೆ ಸರ್ಕಾರ ಪತನವಾಗಲಿದೆ ಎಂದು ಸಂಜಯ್ ರಾವತ್ ಈ ಹಿಂದೆ ಹೇಳಿಕೊಂಡಿದ್ದರು. ಈಗಲೂ ಇದೇ ಮಾತನ್ನು ಹೇಳಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ, ಶಿಂಧೆ ಮತ್ತು 39 ಶಾಸಕರು ಶಿವಸೇನೆ ನಾಯಕತ್ವದ ವಿರುದ್ಧ ಬಂಡಾಯವೆದ್ದರು. ಇದರ ಪರಿಣಾಮವಾಗಿ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು (ಎನ್‌ಸಿಪಿ ಮತ್ತು ಕಾಂಗ್ರೆಸ್ ಅನ್ನು ಸಹ ಒಳಗೊಂಡಿದೆ) ವಿಭಜನೆ ಮತ್ತು ಪತನಕ್ಕೆ ಕಾರಣವಾಯಿತು.
ನಂತರ ಏಕನಾಥ್ ಶಿಂಧೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು. ಶಿಂಧೆ ಅವರು ಜೂನ್ 30, 2022 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಗಮನಾರ್ಹವೆಂದರೆ, ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಮತ್ತು ಸಿಎಂ ಏಕನಾಥ್ ಶಿಂಧೆ ಬಣಗಳು ಸಲ್ಲಿಸಿದ್ದ ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಕಾಯ್ದಿರಿಸಿತ್ತು.












Click it and Unblock the Notifications