Maharashtra Elections: 'ಮಹಾ' ಸೀಟು ಹಂಚಿಕೆ ಬಗ್ಗೆ ಸಿಎಂ ಶಿಂಧೆ ಮಹತ್ವದ ಮಾಹಿತಿ
ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಉಭಯ ಪಕ್ಷಗಳ ತಯಾರಿ ಗರಿಗೆದರಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ನಿನ್ನೆ ದೆಹಲಿಗೆ ತೆರಳಿ ಸೀಟು ಹಂಚಿಕೆ ಸಂಬಂಧ ಬಿಜೆಪಿ ಜೊತೆಗೆ ಮಹತ್ವದ ಚರ್ಚೆ ನಡೆಸಿ ಬಂದಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ರಾಜ್ಯದ ಜನತೆಗೆ ಒಳ್ಳೆಯ ಸುದ್ದಿಯನ್ನೇ ಕೊಡುತ್ತೇವೆ ಎಂದು ಸುಳಿವು ನೀಡಿದ್ದಾರೆ.
ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದೆವು. ನಮ್ಮ ಮಹಾಯುತಿಯ (ಮೈತ್ರಿಕೂಟ) ಸೀಟು ಹಂಚಿಕೆ ಕುರಿತು ಸಕಾರಾತ್ಮಕ ಚರ್ಚೆಗಳೇ ನಡೆದವು. ಚರ್ಚೆಗಳು ಎಲ್ಲವೂ ಅಂತಿಮ ಹಂತದಲ್ಲಿವೆ. ಸೀಟು ಹಂಚಿಕೆಯನ್ನು ಶೀಘ್ರದಲ್ಲೇ ಅಂತಿಮಗೊಳಿಸಿ ಜನರಿಗೆ ಒಳ್ಳೆಯ ಸುದ್ದಿ ನೀಡುತ್ತೇವೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಒಕ್ಕೂಟವು ಭಾರಿ ಬಹುಮತ ಪಡೆಯಲಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹರಿಯಾಣದಲ್ಲಿ ಇತ್ತೀಚೆಗೆ ಆದ ಬಿಜೆಪಿ ಗೆಲುವನ್ನು ಮಹಾರಾಷ್ಟ್ರದ ಪೂರಕವಾದ ಸಂಕೇತ ಎಂದೂ ಶಿಂಧೆ ಕರೆದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮೈತ್ರಿಕೂಟದ ಸೀಟು ಹಂಚಿಕೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ಇನ್ನೇನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಒಂದು ತಿಂಗಳು ಬಾಕಿ ಇದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಅವರನ್ನು ಶಿವಸೇನೆ, ಬಿಜೆಪಿ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣ ಒಳಗೊಂಡಿರುವ ಮಹಾಯುತಿ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ಬಿಂಬಿಸಲು ಈಗಾಗಲೇ ತೀವ್ರ ಕಸರತ್ತು ನಡೆಸುತ್ತಿದೆ ಎಂದು ಹೇಳಲಾಗಿದೆ.

ಸೀಟು ಹಂಚಿಕೆ ಸಂಬಂಧಿಸಿದಂತೆ ನಮ್ಮ ಚರ್ಚೆ ಅಂತಿಮ ಹಂತದಲ್ಲಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಪುನರುಚ್ಚರಿಸಿದ್ದಾರೆ. ನಿನ್ನೆ ನಾವು ಸಕಾರಾತ್ಮಕ ಚರ್ಚೆಯ ಮೂಲಕ ಸ್ಥಾನಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಇನ್ನೆರಡು ದಿನಗಳಲ್ಲಿ ಇದು ಅಂತಿಮಗೊಳ್ಳಲಿದೆ ಎಂದು ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೊದಲು ತನ್ನ ಪಕ್ಷದಿಂದ ಸೀಟುಗಳನ್ನು ಘೋಷಿಸಬೇಕು. ಚುನಾವಣಾ ಸಮಿತಿ ಮತ್ತು ಸಂಸದೀಯ ಮಂಡಳಿಯಂತಹ ಪ್ರಕ್ರಿಯೆಗಳು ನಡೆಯುತ್ತಿದ್ದು, ನಮ್ಮ ಮೊದಲ ಪಟ್ಟಿ ಯಾವಾಗ ಬೇಕಾದರೂ ಬರಬಹುದು ಎಂದು ಫಡ್ನವಿಸ್ ಹೇಳಿದ್ದಾರೆ.
ಶಿವಸೇನಾ ಮತ್ತೊಂದು ಬಣದ ಸಂಸದ ಸಂಜಯ್ ರಾವತ್ ಮಾತನಾಡಿ, ಮಹಾಯುತಿ ಮತ್ತು ಸಂವಿಧಾನವು ಅವರಿಗೆ ವಿಶೇಷ ಹಕ್ಕುಗಳನ್ನು ನೀಡಿದೆ. ಇವರಿಂದ ಜನರು ಹಕ್ಕುಗಳು ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಎಂವಿಎ ನಾಯಕರು ನಿನ್ನೆ ಚುನಾವಣಾ ಆಯೋಗವನ್ನು ಭೇಟಿ ಮಾಡಿದರು.
ಆ್ಯಪ್ ತಯಾರಿಸಿ ಜನರ ಮತಗಳನ್ನು ಕಡಿಮೆ ಮಾಡಿ ಬೋಗಸ್ ವೋಟ್ ಸೇರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಸುಮಾರು 10,000 ಬೋಗಸ್ ಮತಗಳು ಸೇರ್ಪಡೆಯಾಗುತ್ತಿವೆ. ಇದು ಮಹಾರಾಷ್ಟ್ರದ ಭವಿಷ್ಯದ ಸಮಸ್ಯೆ. ಅಗತ್ಯ ಬಿದ್ದರೆ ನಾವು ಚುನಾವಣಾ ಆಯೋಗದ ವಿರುದ್ಧವೇ ದೊಡ್ಡ ರ್ಯಾಲಿ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.












Click it and Unblock the Notifications