Maharashtra election: 'ಮಹಾ'ಯುದ್ಧಕ್ಕೆ ಸಿಎಂ ಏಕನಾಥ್ ಶಿಂಧೆ ನಾಮಪತ್ರ ಸಲ್ಲಿಕೆ
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಮಹಾರಾಷ್ಟ್ರ ಸಿಎಂ ಮತ್ತು ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ಅವರು ಕೊಪ್ರಿ-ಪಚ್ಪಖಾಡಿ ವಿಧಾನಸಭಾ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ಥಾಣೆಯಲ್ಲಿರುವ ಅವರ ನಿವಾಸದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶಿಂಧೆ ಕುಟುಂಬಸ್ಥರು ಹಣೆಗೆ ತಿಲಕವಿಟ್ಟು ಆರತಿ ಮಾಡುವ ಮೂಲಕ ನಾಮಪತ್ರ ಸಲ್ಲಿಕೆಗೆ ಕಳುಹಿಸಿಕೊಟ್ಟರು.
ಥಾಣೆ ಯಾವಾಗಲೂ ಕೇಸರಿ ಬಣ್ಣದ್ದಾಗಿದೆ ಮತ್ತು ಅದು ಒಂದೇ ಆಗಿರುತ್ತೆ. ಸಿಎಂ ಏಕನಾಥ್ ಶಿಂಧೆ ನಾಮಪತ್ರ ಸಲ್ಲಿಸಿದ್ದಾರೆ. ಅವರು ಈ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಮತಗಳಿಂದ ಗೆಲ್ಲುತ್ತಾರೆ ಜೊತೆಗೆ ತಮ್ಮದೇ ದಾಖಲೆಯನ್ನು ಮುರಿಯುತ್ತಾರೆ. ಥಾಣೆ ಜನರು ಮಹಾಯುತಿ ಜೊತೆಗೆ ಇರುತ್ತಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಡಾಲ್ ವಿಧಾನಸಭಾ ಕ್ಷೇತ್ರದ ಶಿವಸೇನೆ ಅಭ್ಯರ್ಥಿ ನೀಲೇಶ್ ರಾಣೆ ಕೂಡ ನಾಮಪತ್ರ ಸಲ್ಲಿಸಿದರು. ನಾನು ಕಳೆದ 10 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಕ್ಷೇತ್ರದಲ್ಲಿ ಭಾರಿ ಆಡಳಿತ ವಿರೋಧಿ ವಾತಾವರಣವಿದೆ. ಇಲ್ಲಿನ ಶಾಸಕರು ವಿಫಲರಾಗಿದ್ದಾರೆ. ಇಲ್ಲಿನ ಜನರಿಗಾಗಿ ದುಡಿಯುವ ಭಾಗ್ಯ ಸಿಕ್ಕರೆ, ಈ ಜಿಲ್ಲೆ ನನ್ನ ಭಾಗ್ಯ ಎಂದಿದ್ದಾರೆ.
ಎಂವಿಎ ಎಂದರೆ ಅವಿಶ್ವಾಸ ಅಘಾಡಿ, ಇದು ಮಹಾರಾಷ್ಟ್ರದ ಹೊಸ ಚಿತ್ರ. ಅವರು ತಮ್ಮ ನಡುವೆ ಸೌಹಾರ್ದಯುತವಾಗಿಲ್ಲ. ನಾನಾ ಪಟೋಲೆ ಮತ್ತು ಸಂಜಯ್ ರಾವತ್ ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರಕ್ಕೆ ಮನರಂಜನೆ ನೀಡುತ್ತಿದ್ದಾರೆ ಎಂದು ಮಹಾರಾಷ್ಟ್ರದ ಬಿಜೆಪಿ ಮುಖ್ಯ ವಕ್ತಾರ ಕೇಶವ್ ಉಪಾಧ್ಯೆ ವಾಗ್ದಾಳಿ ನಡೆಸಿದ್ದಾರೆ.

ಸನಾ ಸಂತಸ: ಇಂದು ಬಹಳ ಮುಖ್ಯವಾದ ದಿನವಾಗಿದೆ. ಇದು ನನಗೆ ತುಂಬಾ ಭಾವನಾತ್ಮಕವಾಗಿದೆ. ಏಕೆಂದರೆ ನಾನು ಹೊಸ ಆರಂಭವನ್ನು ಮಾಡುತ್ತಿದ್ದೇನೆ. ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನನ್ನ ತಂದೆ ಈಗಾಗಲೇ ಶಾಸಕರಾಗಿರುವ ಸ್ಥಳದಿಂದ ನಾನು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದೇನೆ ಎಂದು ಅನುಶಕ್ತಿ ನಗರ ವಿಧಾನಸಭಾ ಕ್ಷೇತ್ರದ ಎನ್‌ಸಿಪಿ ಅಭ್ಯರ್ಥಿ ಸನಾ ಮಲಿಕ್ ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮ ಕುಟುಂಬವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವಾಗ ನನಗೆ ಈ ಕ್ಷಣ ತುಂಬಾ ಭಾವನಾತ್ಮಕವಾಗಿದೆ. ನಾವು ಎಷ್ಟು ಧೈರ್ಯಶಾಲಿಗಳು ಎಂದು ಜನರಿಗೂ ತಿಳಿದಿದೆ. ನಮ್ಮ ಕುಟುಂಬದ ಸಮಸ್ಯೆಗಳು ಜನರ ಮುಂದೆ ಬರಲು ಬಿಡುವುದಿಲ್ಲ. ಅದನ್ನು ಬದಿಗಿಟ್ಟು ಅನುಶಕ್ತಿನಗರದ ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ಹುಡುಗಿ ತನ್ನ ತಂದೆಯೊಂದಿಗೆ ಕೆಲಸ ಮಾಡುತ್ತಿದ್ದಾಳೆ ಎಂದು ಅವರಿಗೆ ತಿಳಿದಿದೆ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಮಾತನಾಡಿ, ಸಮಾಜವಾದಿ ಪಕ್ಷದ ನಾಯಕ ಅಬು ಅಸಿಮ್ ಅಜ್ಮಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಬಲವನ್ನು ತೋರಿಸಿದ್ದೇವೆ. ನಾವು 37 ಸ್ಥಾನಗಳನ್ನು ಗೆದ್ದಿದ್ದೇವೆ. 2027ರಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆದಾಗ ಬಿಜೆಪಿಯು ಯುಪಿಯಿಂದ ನಿರ್ನಾಮವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.












Click it and Unblock the Notifications