Maharashtra Assembly Elections: ಅಸ್ತಿತ್ವದ ಹೋರಾಟದಲ್ಲಿ 4 ಪಕ್ಷಗಳು, 15 ಸಣ್ಣ ಪಕ್ಷಗಳ ಪೈಪೋಟಿ!
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರೀ ಹೈಡ್ರಾಮ ನಡೆದಿತ್ತು. ಈ ಹೈಡ್ರಾಮಾಗಳ ನಂತರ ಪ್ರಮುಖ ಪಕ್ಷಗಳು ಇದೀಗ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಮಹಾರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷಗಳೇ ಇಬ್ಭಾಗವಾಗಿದ್ದು, ಈ ಪಕ್ಷಗಳಿಗೆ ಈ ಬಾರಿಯ ಚುನಾವಣೆ ನಿರ್ಣಾಯಕವಾಗಿದೆ. ಅಷ್ಟೇ ಅಲ್ಲ, ಶಿವಸೇನಾ ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಗಳು ಇಬ್ಭಾಗವಾಗಿದ್ದು, ಇದೇ ಮೊದಲ ಬಾರಿ ಚುನಾವಣೆ ಎದುರಿಸುತ್ತಿವೆ. ಚುನಾವಣೆ ಕಣದಲ್ಲಿ 15ಕ್ಕೂ ಹೆಚ್ಚು ಸಣ್ಣ ಪಕ್ಷಗಳು ಸ್ಪರ್ಧೆ ಮಾಡಿವೆ.
ಮಹಾರಾಷ್ಟ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಹಲವು ರಾಜಕೀಯ ಪ್ರಯೋಗಗಳು ನಡೆದಿದ್ದವು. ಬೆಳಿಗ್ಗೆ ಜನ ಎದ್ದೇಳುವುದರ ಒಳಗೆ ಮುಖ್ಯಮಂತ್ರಿ ಹಾಗೂ ಮೈತ್ರಿ ಪಕ್ಷಗಳೇ ಅದಲು ಬದಲಾಗಿದ್ದವು. ಅಷ್ಟೇ ಅಲ್ಲ ಬೆಂಬಲ ಕೊಟ್ಟ ಪಕ್ಷಗಳು ಬೆಂಬಲ ವಾಪಸ್ ತೆಗೆದುಕೊಂಡು ಸರ್ಕಾರ ಬೀಳುವಂತೆ ಮಾಡಿದ್ದವು. ನ್ಯಾಶನಲಿಸ್ಟ್ ಕಾಂಗ್ರೆಸ್ ಹಾಗೂ ಶಿವಸೇನಾ ಪಾರ್ಟಿಯ ಪ್ರಮುಖ ನಾಯಕರು ಅವರ ಬೆಂಬಲಿಗರೊಂದಿಗೆ ಮತ್ತೊಂದು ಪಕ್ಷ(ಬಣ)ವನ್ನೇ ಸೃಷ್ಟಿ ಮಾಡಿದ್ದಾರೆ. ವಿಚಿತ್ರವೆಂದರೆ ಈ ಇಬ್ಭಾಗವಾಗಿರುವ ಪಕ್ಷಗಳು ಮಹಾಯುತಿ ಮೈತ್ರಿಕೂಟದೊಂದಿಗೆ ಹಾಗೂ ಮಹಾ ವಿಕಾಸ್ ಅಘಾಡಿಯೊಂದಿಗೆ ಗುರುತಿಸಿಕೊಂಡಿವೆ.

ನಾಲ್ಕು ಪಕ್ಷಗಳಿಗೆ ಅಸ್ತಿತ್ವದ ಪ್ರಶ್ನೆ: ಮಹಾರಾಷ್ಟ್ರದಲ್ಲಿ ಈ ಬಾರಿ 15ಕ್ಕೂ ಹೆಚ್ಚು ಸಣ್ಣ ಪಕ್ಷಗಳು ಹಾಗೂ ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿದಂತೆ ಹಲವು ದೊಡ್ಡ ಪಕ್ಷಗಳು ಸಹ ಚುನಾವಣೆ ಕಣದಲ್ಲಿ ಇವೆ. ಆದರೆ, ಪ್ರಮುಖವಾಗಿ ಈ ಬಾರಿ ನಾಲ್ಕು ಪಕ್ಷಗಳಿಗೆ ಈ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ ಎಂದೇ ಹೇಳಲಾಗುತ್ತಿದೆ.
ಮಹಾದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯು ಇಬ್ಭಾಗವಾಗಿದೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್ ಪವಾರ್ ಬಣ)ವಾಗಿದೆ. ಇದರಲ್ಲಿ ಅಜಿತ್ ಪವಾರ್ ಬಣ ಮಹಾಯುತಿ ಮೈತ್ರಿ ಪಕ್ಷದೊಂದಿಗೂ, ಶರದ್ ಪವಾರ್ ಬಣವು ಮಹಾ ವಿಕಾಸ್ ಅಘಾಡಿಯೊಂದಿಗೆ ಗುರುತಿಸಿಕೊಂಡಿದೆ. ಈ ಪಕ್ಷಗಳಿಗೆ ಈ ಬಾರಿಯ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ.
ಅಲ್ಲದೇ ಶಿವಸೇನಾ ಪಕ್ಷದ ಕಥೆಯೂ ಸಹ ಇದೇ ಕಥೆಯಾಗಿದೆ. ಶಿವಸೇನಾದ ಉದ್ಧವ್ ಠಾಕ್ರೆ ಬಣ ಹಾಗೂ ಏಕನಾಥ್ ಶಿಂಧೆ ಬಣ ಇಬ್ಭಾಗವಾಗಿದ್ದು. ಉದ್ಧವ್ ಠಾಕ್ರೆ ಬಣ ಮಹಾ ವಿಕಾಸ್ ಅಘಾಡಿಯಲ್ಲೂ, ಏಕನಾಥ್ ಶಿಂಧೆ ಬಣ ಮಹಾಯುತಿಯಲ್ಲೂ ಇದೆ. ಈ ಪಕ್ಷಗಳಿಗೆ ಈ ಬಾರಿಯ ಚುನಾವಣೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ.
ಪಕ್ಷ ವಿಭಜನೆಯ ನಂತರ ಜನ ಯಾವ ಬಣವನ್ನು ಜನ ಬೆಂಬಲಿಸಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಪಕ್ಷಗಳ ಸಿದ್ಧಾಂತಗಳೇ ಬದಲಾಗಿ ಹೋಗಿವೆ. ಕಳೆದ ಐದು ವರ್ಷಗಳಲ್ಲಿ ಈ ಪಕ್ಷಗಳು ಬಿಜೆಪಿ ಹಾಗೂ ಕಾಂಗ್ರೆಸ್ (ಶಿವಸೇನಾ) ದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಎರಡಕ್ಕೂ ಪಕ್ಷಗಳ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಜನ ಇದಕ್ಕೆ ಯಾವ ರೀತಿ ಉತ್ತರಿಸಲಿದ್ದಾರೆ ಎನ್ನುವುದು ನವೆಂಬರ್ 23ಕ್ಕೆ ತಿಳಿಯಲಿದೆ.
15ಕ್ಕೂ ಹೆಚ್ಚು ಸಣ್ಣ ಪಕ್ಷಗಳು: ಇನ್ನು ಮಹಾರಾಷ್ಟ್ರದ ಚುನಾವಣೆಯಲ್ಲಿ ಈ ಬಾರಿ 15ಕ್ಕೂ ಹೆಚ್ಚು ಸಣ್ಣ ಪಕ್ಷಗಳು ಚುನಾವಣೆಗೆ ಸ್ಪರ್ಧೆ ಮಾಡಿವೆ. ಭಾರೀ ಪ್ರಮಾಣದಲ್ಲಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದರಿಂದ ಮತಗಳ ವಿಭಜನೆಯಾಗುವ ಸಾಧ್ಯತೆಯೂ ಇದೆ. ಅಲ್ಲದೇ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಂಡಾಯ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಇದ್ದಾರೆ. 1995ರ ನಂತರ ಇದೇ ಮೊದಲ ಬಾರಿ ಈ ರೀತಿಯ ಮಹತ್ವದ ಬದಲಾವಣೆ ಆಗುತ್ತಿದೆ ಎಂದು ಹೇಳಲಾಗಿದೆ.
ಜಾರ್ಖಂಡ್ ವಿಧಾನಸಭೆ ಚುನಾವಣೆ: ಮಹಾರಾಷ್ಟ್ರದ ಜೊತೆ ಜೊತೆಗೆ ಜಾರ್ಖಂಡ್ ವಿಧಾನಸಭೆ ಚುನಾವಣೆಯೂ ನಡೆದಿದೆ. ಜಾರ್ಖಂಡ್‌ನಲ್ಲಿ ಎರಡು ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು. ಈಗಾಗಲೇ ಒಂದು ಹಂತದ ಚುನಾವಣೆ ಮುಕ್ತಾಯವಾಗಿದೆ. ಬುಧವಾರ ಎರಡನೇ ಹಂತದ ಚುನಾವಣೆ ನಡೆದಿದೆ. ಎರಡೂ ಪಕ್ಷಗಳ ಫಲಿತಾಂಶವು ನವೆಂಬರ್ 23ಕ್ಕೆ ಪ್ರಕಟವಾಗಲಿದೆ.












Click it and Unblock the Notifications