Maharashtra Assembly Elections 2024: ಒಂದೇ ಹಂತದಲ್ಲಿ 228 ಕ್ಷೇತ್ರಗಳಿಗೆ ಚುನಾವಣೆ?
ಮುಂಬೈ, ಸೆಪ್ಟೆಂಬರ್ 28: ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ ಕುರಿತು ಪರಿಶೀಲನೆ ನಡೆಸಲು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ತಂಡ ರಾಜ್ಯ ಪ್ರವಾಸದಲ್ಲಿದೆ. ಮುಂಬೈನಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆಗೆ ತಂಡ ಸಭೆಯನ್ನು ಸಹ ನಡೆಸಿದೆ. ಈ ವರ್ಷದ ನವೆಂಬರ್‌ನಲ್ಲಿ 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ರಾಜಕೀಯ ಪಕ್ಷಗಳು ಸಹ ಈಗಾಗಲೇ ಚುನಾವಣೆ ಎದುರಿಸುವ ತಯಾರಿ ಆರಂಭಿಸಿದ್ದೇವೆ.
ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಮಹಾರಾಷ್ಟ್ರ ರಾಜ್ಯದ ಮೂರು ದಿನದ ಪ್ರವಾಸದಲ್ಲಿದ್ದಾರೆ. ಮುಂಬೈನಲ್ಲಿ ಅಧಿಕಾರಿಗಳ ತಂಡ ರಾಜ್ಯ ಚುನಾವಣಾ ಆಯೋಗ, ಪೊಲೀಸರು, ರಾಜಕೀಯ ಪಕ್ಷಗಳ ಜೊತೆ ಸಭೆಗಳನ್ನು ನಡೆಸಿ, ಚುನಾವಣಾ ತಯಾರಿಯ ಕುರಿತು ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ. ರಾಜಕೀಯ ಪಕ್ಷಗಳು ಆಯೋಗದ ತಂಡಕ್ಕೆ ಹಲವು ಮನವಿಗಳನ್ನು ಸಲ್ಲಿಕೆ ಮಾಡಿವೆ.

ಹಬ್ಬಗಳ ರಜೆಗಳು ಮುಗಿದ ಬಳಿಕ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸುವಂತೆ ರಾಜಕೀಯ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ತಂಡಕ್ಕೆ ಮನವಿ ಮಾಡಿವೆ. ಒಂದೇ ಹಂತದಲ್ಲಿ ಮತದಾನ ನಡೆಸುವುದರಿಂದ ಆಗುವ ಲಾಭಗಳ ಕುರಿತು ಸಹ ಮನವರಿಕೆ ಮಾಡಿಕೊಟ್ಟಿವೆ. ಈ ಕುರಿತು ಆಯೋಗ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.
ಪೊಲೀಸರು ಸಿದ್ಧವಿದ್ದಾರೆ: ಮಹಾರಾಷ್ಟ್ರ ರಾಜ್ಯದ ಪೊಲೀಸ್ ಆಯುಕ್ತೆ ರಶ್ಮಿ ಶುಕ್ಲಾ ಸಹ ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನವನ್ನು ನಡೆಸಿದರೆ ಅಗತ್ಯ ಭದ್ರತೆ ಕಲ್ಪಿಸಲು ಇಲಾಖೆ ಸಿದ್ಧವಿದೆ ಎಂದು ಸಭೆಯಲ್ಲಿ ರಾಜೀವ್ ಕುಮಾರ್ ನೇತೃತ್ವದ ತಂಡಕ್ಕೆ ಭರವಸೆ ನೀಡಿದ್ದಾರೆ. ತಿಂಗಳ ಮಧ್ಯದಲ್ಲಿ ಮತದಾನ ನಡೆಸಬೇಕು ಮೊದಲ ಅಥವ ಕೊನೆಯ ವಾರ ಮತದಾನದ ದಿನಾಂಕ ನಿಗದಿ ಮಾಡಬಾರದು ಎಂದು ವಿವಿಧ ಇಲಾಖೆಗಳು ಆಯೋಗಕ್ಕೆ ಮನವಿ ಮಾಡಿವೆ.
ಸಭೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಮುಂಬೈ ನಗರದಲ್ಲಿ ಮತದಾನ ಪ್ರಮಾಣ ಕಡಿಮೆ ಆಗುತ್ತಿರುವ ಕುರಿತು ಗಮನ ಸೆಳೆದರು. ರಾಜ್ಯ ಚುನಾವಣಾ ಆಯೋಗ, ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಮತದಾನದ ಪ್ರಮಾಣ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆಗಳನ್ನು ನೀಡಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಮುಂಬೈ ನಗರದಲ್ಲಿ ಶೇ 52.4ರಷ್ಟು ಮತದಾನವಾಗಿದೆ. ಆದರೆ 2019ರಲ್ಲಿ 55.4ರಷ್ಟು ಮತದಾನವಾಗಿತ್ತು. ನಗರದಲ್ಲಿ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಕಡಿಮೆ ಮತದಾನಕ್ಕೆ ಇದೇ ಪ್ರಮುಖ ಕಾರಣವಾಗಿದೆ ಎಂದು ಚುನಾವಣಾ ಆಯೋಗಕ್ಕೆ ಮನವಿಯನ್ನು ಸಲ್ಲಿಕೆ ಮಾಡಿದವು.
ಅಕ್ಟೋಬರ್ 31 ರಿಂದ ನವೆಂಬರ್ 3ರ ತನಕ ದೀಪಾವಳಿ ಹಬ್ಬವಿದೆ. ಹಬ್ಬದ ಸಾಲು ಸಾಲು ರಜೆಗಳು ಮುಗಿದ ಬಳಿಕ ಚುನಾವಣೆ ದಿನಾಂಕವನ್ನು ನಿಗದಿ ಮಾಡಬೇಕು ಎಂದು ಬಿಜೆಪಿ ನಾಯಕರ ನಿಯೋಗ ಚುನಾವಣಾ ಆಯೋಗಕ್ಕೆ ಮನವಿಯನ್ನು ಸಲ್ಲಿಕೆ ಮಾಡಿತು. ಅಕ್ಟೋಬರ್‌ನಲ್ಲಿ ವೇಳಾಪಟ್ಟಿ ಘೋಷಣೆಯಾದರೆ ತಕ್ಷಣದಿಂದಲೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ನವೆಂಬರ್ 10ರ ಬಳಿಕ ಚುನಾವಣೆ ನಡೆಯಬಹುದು ಎಂಬುದು ಸದ್ಯದ ಮಾಹಿತಿ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ತಂಡ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಜಾತಾ ಸುನಿಕ್ ಮತ್ತು ಡಿಜಿಪಿ ರಶ್ಮಿ ಶುಕ್ಲಾ ಜೊತೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿ, ಅಧಿಕಾರಿಗಳ ವರ್ಗಾವಣೆಯ ಕುರಿತು ಸಹ ಮಾಹಿತಿಯನ್ನು ಪಡೆಯಿತು. ಸೋಮವಾರದಿಂದ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಸದ್ಯ ರಾಜ್ಯದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಸರ್ಕಾರವಿದೆ. ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿ. ಈ ಸರ್ಕಾರದ ಅವಧಿ ನವೆಂಬರ್ 26ಕ್ಕೆ ಅಂತ್ಯಗೊಳ್ಳಲಿದೆ. ಅಷ್ಟರೊಗಳಗೆ ಚುನಾವಣೆ ನಡೆದು, ಹೊಸ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ಶನಿವಾರ ಚುನಾವಣಾ ಆಯುಕ್ತರ ತಂಡ ಜಿಲ್ಲಾಧಿಕಾರಿಗಳ ಜೊತೆಯೂ ಮತದಾನದ ಸಿದ್ಧತೆಗಳ ಕುರಿತು ಸಭೆಯನ್ನು ನಡೆಸುತ್ತಿದೆ.












Click it and Unblock the Notifications