Maharashtra Assembly Elections 2024: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ ಸಂದರ್ಶನ
ಮುಂಬೈ, ಅಕ್ಟೋಬರ್ 01: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ಕ್ಕೆ ರಾಜಕೀಯ ಪಕ್ಷಗಳ ತಯಾರಿ ಜೋರಾಗಿದೆ. 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಲೋಕಸಭೆಯ ವಿರೋಧ ಪಕ್ಷವಾದ ಕಾಂಗ್ರೆಸ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್, ಅಭ್ಯರ್ಥಿಗಳ ಆಯ್ಕೆಗೆ ಹೊಸ ಮಾನದಂಡವನ್ನು ನಿಗದಿಗೊಳಿಸಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 146.
ಮಹಾರಾಷ್ಟ್ರದಲ್ಲಿ ಸದ್ಯ ಕಾಂಗ್ರೆಸ್ ವಿರೋಧ ಪಕ್ಷ. ರಾಜ್ಯದ ವಿರೋಧ ಪಕ್ಷಗಳು ಸೇರಿಕೊಂಡು ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಈ ಬಾರಿಯ ಚುನಾವಣೆಯನ್ನು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಸೀಟು ಹಂಚಿಕೆ ಮಾಡಿಕೊಂಡು ಎದುರಿಸಲಿವೆ.

ಚುನಾವಣೆ ತಯಾರಿ ಆರಂಭಿಸಿರುವ ಎಂವಿಎ ಮೈತ್ರಿಕೂಟ ಇನ್ನೂ ಸೀಟು ಹಂಚಿಕೆ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ. ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಇದುವರೆಗೂ 1,688 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್‌ಗೆ ಎಷ್ಟು ಸೀಟು? ಎಂಬುದು ಇನ್ನೂ ಸಹ ಅಂತಿಮವಾಗಿಲ್ಲ.
ಅಭ್ಯರ್ಥಿಗಳ ಸಂದರ್ಶನ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಟಿಕೆಟ್ ಆಕಾಂಕ್ಷಿಗಳ ಸಂದರ್ಶನ ನಡೆಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಇದಕ್ಕಾಗಿ ಮುಂಬೈನಲ್ಲಿ ಶಾಸಕ ಸಂಗ್ರಾಮ್ ತೊಪಾಟೆ ಮತ್ತು ಎಂಎಲ್‌ಸಿ ಸತೇಜ್ ಪಾಟೀಲ್ ನೇಮಕ ಮಾಡಿದೆ. ಉಳಿದಂತೆ ರಾಜ್ಯದ ವಿವಿಧ ಭಾಗದಲ್ಲಿ 34 ಪಕ್ಷದ ಪದಾಧಿಕಾರಿಗಳು ಈ ಸಂದರ್ಶನಗಳನ್ನು ನಡೆಸಲಿದ್ದಾರೆ.
ಅಕ್ಟೋಬರ್ 8ರೊಳಗೆ ಸಂದರ್ಶನಗಳನ್ನು ಮುಗಿಸಿ ರಾಜ್ಯ ಘಟಕಕ್ಕೆ ವರದಿಗಳನ್ನು ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಎಂಬುದು ಪಕ್ಷದ ಪ್ರಮುಖ ಮಾನದಂಡವಾಗಿದೆ. ಟಿಕೆಟ್ ಬಯಸುವ ಅಭ್ಯರ್ಥಿ, ತನಗೆ ಏಕೆ ಟಿಕೆಟ್ ನೀಡಬೇಕು ಎಂದು ಸಂದರ್ಶನದಲ್ಲಿ ವಿವರಣೆ ನೀಡಲಿದ್ದಾರೆ.
ಎಂವಿಎ ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ಸೋಮವಾರ ಸುಮಾರು 7 ಗಂಟೆಗಳ ಕಾಲ ಮಹತ್ವದ ಸಭೆ ನಡೆದಿದೆ. ಮತ್ತೊಂದು ಸಭೆಯನ್ನು ಮಂಗಳವಾರಕ್ಕೆ ನಿಗದಿಗೊಳಿಸಲಾಗಿದೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಸೋಮವಾರ ನಡೆದ ಸಭೆ ಆಶಾದಾಯಕವಾಗಿದೆ, ಶೀಘ್ರವೇ ಸೀಟು ಹಂಚಿಕೆ ಅಂತಿಮಗೊಳ್ಳಲಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 12ಕ್ಕೂ ಮೊದಲು 200 ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಮಾಧ್ಯಮಗಳ ವರದಿಯಂತೆ ಎಂವಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕುರಿತು ಯಾವುದೇ ಅಸಮಾಧಾನವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಶಿವಸೇನೆ ಮತ್ತು ಕಾಂಗ್ರೆಸ್ ನಡುವೆ ರಾಜ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ನೇರ ಪೈಪೋಟಿ ನಡೆಯಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಜೊತೆಗೆ ಎಸ್ಪಿ, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸೀಟು ಹಂಚಿಕೆ ಮಾಡಿಕೊಂಡಿದ್ದವು. ಚುನಾವಣೆಯಲ್ಲಿ 38 ಲೋಕಸಭಾ ಕ್ಷೇತ್ರಗಳ ಪೈಕಿ ಎಂವಿಎ ಮೈತ್ರಿಕೂಟ 30ರಲ್ಲಿ ಗೆಲುವು ಸಾಧಿಸಿತ್ತು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 13 ಸೀಟುಗಳಲ್ಲಿ ಜಯಗಳಿಸಿದೆ. ಆದ್ದರಿಂದ ವಿಧಾನಸಭೆ ಚುನಾವಣೆಯ ಮೇಲೆ ಪಕ್ಷ ಹೆಚ್ಚು ಗಮನ ಹರಿಸಿದೆ. ಅಲ್ಲದೇ ಚುನಾವಣಾ ಪೂರ್ವ ಸಮೀಕ್ಷೆಗಳು ರಾಜ್ಯದಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಹೆಚ್ಚಿನ ಕ್ಷೇತ್ರದಲ್ಲಿ ಗೆದ್ದು ಸರ್ಕಾರ ರಚನೆ ಮಾಡಲಿವೆ ಎಂದು ಅಂದಾಜಿಸಿದ್ದು, ಪಕ್ಷದ ನಾಯಕರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.












Click it and Unblock the Notifications