Maharashtra Election Results: ಕಾಂಗ್ರೆಸ್ & ಬಿಜೆಪಿಗೆ ಮಿತ್ರ ಪಕ್ಷಗಳ ಜಿಗಿತ ತಡಿಯುವುದೇ ಚಾಲೆಂಜ್!
ಮಹಾರಾಷ್ಟ್ರ ಚುನಾವಣೆಗೆ ಬುಧವಾರ ನವೆಂಬರ್ 20ರಂದು ಮತದಾನ ಮುಕ್ತಾಯವಾಗುವುದರೊಂದಿಗೆ ಚುನಾವಣೆ ಪ್ರಕ್ರಿಯೆಗೆ ಬಹುತೇಕ ವಿದ್ಯುಕ್ತ ತೆರೆಬಿದ್ದಂತೆ ಆಗಿದೆ. ಮತದಾನೋತ್ತರ ಸಮೀಕ್ಷೆಗಳಿಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಮೈತ್ರಿಕೂಟದ ಯಾವುದೇ ಪಕ್ಷ ಗೆದ್ದರೂ, ಆ ಪಕ್ಷಗಳಿಗೆ ಇರುವ ಬಹುದೊಡ್ಡ ಸವಾಲು ಮಿತ್ರ (ಬಣ) ಪಕ್ಷಗಳನ್ನು ತಮ್ಮೊಂದಿಗೆ ಉಳಿಸಿಕೊಳ್ಳುವುದು. ಮಹಾಯುತಿ ಹಾಗೂ ಮಹಾ ವಿಕಾಸ್ ಅಘಾಡಿ ಮೈತ್ರಿ ಪಕ್ಷಗಳಲ್ಲಿ ಅಂತಹ ಹೇಳಿಕೊಳ್ಳುವಂತಹ ಹೊಂದಾಣಿಕೆ ಉಳಿದಿಲ್ಲ. ಸೀಟುಗಳ ಹಂಚಿಕೆಯಿಂದ ಹಿಡಿದು, ಪ್ರಚಾರದ ಸಮಯದಲ್ಲೂ ಹೊಂದಣೆಕೆ ಕೊರತೆಯಿಂದಾಗಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು. ಕೆಲವು ವಿವಾದಗಳು ಸಹ ಆಗಿದ್ದವು.
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಹಾಗೂ ಮಹಾಯುತಿಯ ನಡುವೆ ನೇರ ಹಣಾಹಣಿ ಇದೆ. ಆದರೆ, ಟ್ವಿಸ್ಟ್ ಇರುವುದು ಮಹಾರಾಷ್ಟ್ರದಲ್ಲಿ ಈ ಹಿಂದೆ ಇತಿಹಾಸ ಸೃಷ್ಟಿಸಿರುವ ಶಿವಸೇನೆ ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಗಳು ಇಬ್ಭಾಗವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿವೆ. ಆದರೆ, ಈ ಪಕ್ಷ (ಬಣ)ಗಳು ಯಾವುದೇ ಕ್ಷಣದಲ್ಲಾದರೂ, ಯಾವ ಕಡೆಯಾದರೂ ವಾಲುವ ಆತಂಕ ಇದೆ. ಹೀಗಾಗಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಯಾವುದೇ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಗೆದ್ದರೂ ಈ ಪಕ್ಷಗಳನ್ನು ಸೆಳೆಯುವುದು (ಹಿಡಿದು ಇಟ್ಟುಕೊಳ್ಳುವುದು) ಸವಾಲಿನ ಕೆಲಸವಾಗಿದೆ.

ಮಹಾಯುತಿಯಲ್ಲಿ ಬಿಜೆಪಿ, ನ್ಯಾಶನಲಿಸ್ಟ್ ಕಾಂಗ್ರೆಸ್ (ಅಜಿತ್ ಪವಾರ್) ಹಾಗೂ ಶಿವಸೇನೆ (ಏಕನಾಥ್ ಶಿಂಧೆ) ಇದ್ದಾರೆ. ಮಹಾ ವಿಕಾಸ್ ಅಘಾಡಿಯಲ್ಲಿ ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ (ಶರದ್ ಪವಾರ್) ಹಾಗೂ ಶಿವಸೇನೆ (ಉದ್ಧವ್ ಠಾಕ್ರೆ) ಇದ್ದಾರೆ.
ಆದರೆ, ಈ ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಚುನಾವಣೆಯ ಸಮಯದಲ್ಲೇ ಬಹಿರಂಗವಾಗಿದೆ. ಮಹಾರಾಷ್ಟ್ರದಲ್ಲಿ ಏನಾದರೂ ಅತಂತ್ರ ಚುನಾವಣೆ ಫಲಿತಾಂಶ ಪ್ರಕಟವಾದರೆ, ಯಾವ ಪಕ್ಷಗಳು ಯಾವ ಕಡೆ ವಾಲಲಿದೆಯೋ ಎನ್ನುವ ಆತಂಕ ದೊಡ್ಡ ಪಕ್ಷಗಳಿಗೆ ಇದ್ದೇ ಇದೆ.

ಅಜಿತ್ ಪವಾರ್ vs ದೇವೇಂದ್ರ ಫಡ್ನವಿಸ್ ತಿಕ್ಕಾಟ
ಮಹಾಯುತಿಯಲ್ಲಿ ಮಿತ್ರಪಕ್ಷಗಳ ನಡುವೆ ಭಾರೀ ಭಿನ್ನಾಭಿಪ್ರಾಯ ಇದೆ. ಮಹಾರಾಷ್ಟ್ರದಲ್ಲಿ ಮಹಾಯಿತಿ ಮೈತ್ರಿಕೂಟ ಆಡಳಿತ ನಡೆಸುತ್ತಿದೆ. ಅಜಿತ್ ಪವಾರ್ ಹಾಗೂ ದೇವೇಂದ್ರ ಫಡ್ನವಿಸ್ ಅವರು ನಡುವೆ ಈಚೆಗೆ ಭಾರೀ ಭಿನ್ನಾಭಿಪ್ರಾಯ ತಲೆದೂರಿತ್ತು. ಅಲ್ಲದೇ ಅಜಿತ್ ಪವಾರ್ ಅವರ ಪಕ್ಷವು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈ ಅಭ್ಯರ್ಥಿಗಳು (ಶಾಸಕರು) ಹೇಗೆ ಬಿಜೆಪಿ ಮೈತ್ರಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ಪಟ್ಟು
ಇನ್ನು ಮಹಾ ವಿಕಾಸ್ ಅಘಾಡಿಯೂ ಇದರಿಂದ ಹೊರತಾಗಿಲ್ಲ. ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ಚುನಾವಣೆಗೆ ಮೊದಲೇ ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದರು. ಮಹಾರಾಷ್ಟ್ರದಲ್ಲಿ ಅವರು ಪೂರ್ಣ ಅವಧಿಯ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದರಿಂದ ವಂಚಿತರಾಗಿದ್ದರು. ಹೀಗಾಗಿ, ಈ ಬಾರಿ ಮಹಾ ವಿಕಾಸ್ ಅಘಾಡಿ ಜಯಿಸಿದರೆ, ಮತ್ತೆ ತಾವೇ ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆ ಅವರಲ್ಲಿ ಇದೆ. ಹೀಗಾಗಿ ಅವರು ಸೀಟು ಹಂಚಿಕೆ ಮಾಡುವ ಸಂದರ್ಭದಲ್ಲೇ ಮುಖ್ಯಮಂತ್ರಿ ಯಾರು ಎನ್ನುವುದನ್ನು ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದರು.
ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶ
ಮಹಾರಾಷ್ಟ್ರದ ಜೊತೆ ಜೊತೆಗೆ ಜಾರ್ಖಂಡ್‌ನಲ್ಲೂ ಚುನಾವಣೆ ನಡೆದಿದೆ. ಜಾರ್ಖಂಡ್ ಹಾಗೂ ಮಹಾರಾಷ್ಟ್ರದ ಚುನಾವಣೆ ಫಲಿತಾಂಶ ನವೆಂಬರ್ 23ಕ್ಕೆ ಪ್ರಕಟವಾಗಲಿದೆ. ಮಹಾರಾಷ್ಟ್ರಕ್ಕೆ ಹೋಲಿಕೆ ಮಾಡಿದರೆ ಜಾರ್ಖಂಡ್ ಸಣ್ಣ ರಾಜ್ಯವಾಗಿದೆ. ಆದರೆ, ಇಲ್ಲಿ ನಕ್ಸಲ್‌ರ ದಾಳಿ ಆತಂಕದ ಹಿನ್ನೆಲೆಯಲ್ಲಿ ಹಾಗೂ ಹೆಚ್ಚಿನ ಭದ್ರತೆಯ ದೃಷ್ಟಿಯಿಂದ ಎರಡು ಹಂತದಲ್ಲಿ ಮತದಾನ ನಡೆದಿತ್ತು. ಈ ರಾಜ್ಯದಲ್ಲೂ ವಿವಿಧ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ.












Click it and Unblock the Notifications