Maharashtra Assembly Election 2024: ಶಿವಸೇನೆ V/S ಶಿವಸೇನೆ 53 ಕ್ಷೇತ್ರಗಳಲ್ಲಿ ನೇರ ಪೈಪೋಟಿ
ಮುಂಬೈ, ನವೆಂಬರ್ 04: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024 ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮಾತ್ರ ಮುಖ್ಯವಲ್ಲ. ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳಿಗೂ ಸಹ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ನವೆಂಬರ್ 4ರ ಸೋಮವಾರ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಚುನಾವಣಾ ಚಿತ್ರಣ ಇಂದು ಸಂಜೆ ಅಂತಿಮವಾಗಲಿದೆ. 53 ಕ್ಷೇತ್ರಗಳಲ್ಲಿ ಶಿವಸೇನೆ v/s ಶಿವಸೇನೆ ನಡುವೆ ನೇರ ಪೈಪೋಟಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಶಿವಸೇನೆ, ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ.

ಶಿವಸೇನೆಯ ಒಂದು ಬಣ ಬಿಜೆಪಿ ಜೊತೆಗಿದೆ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ರಚನೆಯಾಗಿದೆ. ಸದ್ಯ ರಾಜ್ಯದಲ್ಲಿ ಇದೇ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದೆ.
ರಾಜ್ಯದ ವಿರೋಧ ಪಕ್ಷಗಳು ಮಹಾವಿಕಾಸ್ ಅಘಾಡಿ ಮೈತ್ರಿಕೂಟ (ಎಂವಿಎ) ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್ ನೇತೃತ್ವದ ಈ ಮೈತ್ರಿಕೂಟದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳಿವೆ. ಆದ್ದರಿಂದ ಚುನಾವಣೆ ಏಕನಾಥ್ ಶಿಂಧೆ ಬಣ ಮತ್ತು ಉದ್ಧವ್ ಠಾಕ್ರೆ ಬಣಕ್ಕೆ ಪ್ರತಿಷ್ಠೆಯಾಗಿದೆ.
ಶಿವಸೇನೆ v/s ಶಿವಸೇನೆ: ರಾಜ್ಯದ 53 ಕ್ಷೇತ್ರಗಳಲ್ಲಿ ಶಿವಸೇನೆ v/s ಶಿವಸೇನೆ ಏಕನಾಥ್ ಶಿಂಧೆ ಬಣ ಮತ್ತು ಉದ್ಧವ್ ಠಾಕ್ರೆ ಬಣ ನೇರ ಪೈಪೋಟಿಯನ್ನು ನಡೆಸಲಿವೆ. ಎರಡೂವರೆ ವರ್ಷಗಳ ಹಿಂದೆ ಶಿವಸೇನೆ ಎರಡು ಭಾಗವಾಯಿತು. ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದು, ಬಿಜೆಪಿ ಜೊತೆ ಕೈ ಜೋಡಿಸಿದರು. ಇದರಿಂದಾಗಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು, ಎಂವಿಎ ಮೈತ್ರಿಕೂಟದ ಸರ್ಕಾರ ಪತನವಾಯಿತು.
ಏಕನಾಥ್ ಶಿಂಧೆ, ಎನ್‌ಸಿಪಿ ಜೊತೆ ಸೇರಿ ಬಿಜೆಪಿ ರಾಜ್ಯದಲ್ಲಿ ಮಹಾಯತಿ ಮೈತ್ರಿಕೂಟ ಮಾಡಿಕೊಂಡು ಸರ್ಕಾರ ರಚನೆ ಮಾಡಿತು. ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಈಗ ಮತ್ತೆ ಚುನಾವಣೆ ಎದುರಾಗಿದ್ದು, ಏಕನಾಥ್ ಶಿಂಧೆ ಬಣ ಮತ್ತು ಉದ್ಧವ್ ಠಾಕ್ರೆ ನಡುವೆ ಯಾರಿಗೆ ಹೆಚ್ಚಿನ ಸೀಟು? ಎಂಬ ಲೆಕ್ಕಾಚಾರ ಸಾಗಿದೆ.
ಈ ಬಾರಿಯ ಚುನಾವಣೆಯಲ್ಲಿ 53 ಕ್ಷೇತ್ರಗಳಲ್ಲಿ ಶಿವಸೇನೆ v/s ಶಿವಸೇನೆ ನೇರ ಹಣಾಹಣಿ ಇದೆ. ಇದರಲ್ಲಿ 44 ಕ್ಷೇತ್ರಗಳಲ್ಲಿ ಹಾಲಿ ಶಿವಸೇನೆಯ ಶಾಸಕರೇ ಇದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೊಪ್ರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಉದ್ಧವ್ ಠಾಕ್ರೆ ಬಣ ಶಿಂಧೆಗೆ ಎದುರಾಳಿಯಾಗಿ ಕೇದಾರ್ ದಿಘೆ ಕಣಕ್ಕಿಳಿಸಿದೆ. ಶಿವಸೇನೆಯ ಮಾಜಿ ನಾಯಕ ಆನಂದ್ ದಿಘೆ ಅವರ ಸಂಬಂಧಿಯಾದ ಕೇದಾರ್ ದಿಘೆಪ್ರಬ ಅಭ್ಯರ್ಥಿ.
ಇನ್ನು ವರ್ಲಿ ಕ್ಷೇತ್ರದಲ್ಲಿಯೂ ಭಾರೀ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಆದಿತ್ಯ ಠಾಕ್ರೆ ಉದ್ಧವ್ ಠಾಕ್ರೆ ಬಣದಿಂದ ಕ್ಷೇತ್ರದಲ್ಲಿ ಅಭ್ಯರ್ಥಿ. ಏಕನಾಥ್ ಶಿಂಧೆ ಬಣದಿಂದ ಮಿಲಿಂದ್ ದಿಯೋರಾ ಅಭ್ಯರ್ಥಿ. ಹಾಲಿ ರಾಜ್ಯಸಭಾ ಸದಸ್ಯರಾಗಿರುವ, ಕೇಂದ್ರದ ಮಾಜಿ ಸಚಿವ ಮಿಲಿಂದ್ ದಿಯೋರಾ ಪ್ರಬಲ ಅಭ್ಯರ್ಥಿಯಾಗಿದ್ದು, ವರ್ಲಿಯ ಕದನ ಕುತೂಹಲ ಮೂಡಿಸಿದೆ.
2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಒಗ್ಗಟ್ಟಾಗಿದ್ದ ಶಿವಸೇನೆ ಒಂದಾಗಿ ಚುನಾವಣೆ ಎದುರಿಸಿದ್ದವು. ಬಿಜೆಪಿ 105, ಶಿವಸೇನೆ 56 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಮುಖ್ಯಮಂತ್ರಿ ಹುದ್ದೆಯ ಕುರಿತು ಉಂಟಾದ ಗೊಂದಲದಿಂದ ಬಿಜೆಪಿ, ಶಿವಸೇನೆ ಮೈತ್ರಿ ಮುರಿದು ಬಿತ್ತು. ಉದ್ಧವ್ ಠಾಕ್ರೆ ಕಾಂಗ್ರೆಸ್ ಜೊತೆ ಕೈ ಜೋಡಿಸಿ, ಮುಖ್ಯಮಂತ್ರಿಯಾದರು.
ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದರು. 41 ಶಾಸಕರು ಅವರಿಗೆ ಬೆಂಬಲ ನೀಡಿದರು. ಎಂವಿಎ ಮೈತ್ರಿಕೂಟ 2022ರಲ್ಲಿ ಪತನಗೊಂಡಿತು. ಬಿಜೆಪಿ ಜೊತೆ ಕೈ ಜೋಡಿಸಿದ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದರು.












Click it and Unblock the Notifications