Maharashtra Assembly Election 2024: ನಿವೃತ್ತಿ ಸುಳಿವು ಕೊಟ್ಟ ಶರದ್ ಪವಾರ್!
ಮುಂಬೈ, ನವೆಂಬರ್ 06: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ಕ್ಕೆ ಕೆಲವೇ ದಿನಗಳು ಇರುವಾಗ ಹಿರಿಯ ನಾಯಕರೊಬ್ಬರು ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ. ರಾಜ್ಯದ 288 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ಫಲಿತಾಂಶ ನವೆಂಬರ್ 23ರಂದು ಘೋಷಣೆಯಾಗಲಿದೆ. ಚುನಾವಣೆಯ ಕಣದಲ್ಲಿ 4,140 ಅಭ್ಯರ್ಥಿಗಳಿದ್ದಾರೆ.
ಎನ್‌ಸಿಪಿ ಮುಖ್ಯಸ್ಥ 83 ವರ್ಷದ ಶರದ್ ಪವಾರ್ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಸೀಟು ಹಂಚಿಕೆಯಲ್ಲಿ ಪವಾರ್ ಪ್ರಮುಖ ಪಾತ್ರ ವಹಿಸಿದ್ದರು. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳಿವೆ.

ಮೊಮ್ಮಗ ಯುಗೇಂದ್ರ ಪವಾರ್ ಪರವಾಗಿ ಚುನಾವಣಾ ಪ್ರಚಾರವನ್ನು ಮಾಡುವಾಗ ಶರದ್ ಪವಾರ್, "ಪಕ್ಷ ನಾಯಕರನ್ನು ಬೆಳೆಸಬೇಕು. ಅದು ಮುಂದಿನ 30 ವರ್ಷಗಳ ಕಾಲ ಪಕ್ಷಕ್ಕೆ ಸಹಾಯಕವಾಗಲಿದೆ" ಎಂದು ಹೇಳುವ ಮೂಲಕ ಎನ್‌ಸಿಪಿ (ಶರದ್ ಪವಾರ್) ಪಕ್ಷಕ್ಕೆ ಹೊಸ ನಾಯಕರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
14 ಬಾರಿ ಚುನಾವಣೆ: ಶರದ್ ಪವಾರ್ ಬಾರಾಮತಿಯಲ್ಲಿ ಪ್ರಚಾರದ ಸಂದರ್ಭದಲ್ಲಿ ಮಾತನಾಡಿ, "ನಾನು 14 ಬಾರಿ ಚುನಾವಣೆ ಎದುರಿಸಿದ್ದೇನೆ. ಈಗ ಹೊಸ ಪೀಳಿಗೆಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಬೇಕಾಗಿದೆ. ರಾಜ್ಯಸಭೆಯ ಅವಧಿ ಮುಗಿದ ಬಳಿಕ ಸಂವಿಧಾನಿಕ ಹುದ್ದೆಗಳನ್ನು ತೊರೆಯುವ ಕುರಿತು ತೀರ್ಮಾನ ಕೈಗೊಳ್ಳುತ್ತೇನೆ" ಎಂದರು.
"ನಾನು ಅಧಿಕಾರದಲ್ಲಿ ಇಲ್ಲ. ರಾಜ್ಯಸಭೆಯ ಸದಸ್ಯನಾಗಿದ್ದೇನೆ. ನನ್ನ ಅವಧಿ ಇನ್ನೂ ಒಂದೂವರೆ ವರ್ಷ ಉಳಿದಿದೆ. ನಾನು ಈಗಾಗಲೇ 14 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಇನ್ನೆಷ್ಟು ಚುನಾವಣೆಗೆ ಸ್ಪರ್ಧಿಸಲಿ?" ಎಂದು ಪವಾರ್ ಪ್ರಶ್ನೆ ಮಾಡಿದರು.
"ಪ್ರತಿ ಬಾರಿಯು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದೇನೆ. ನಾನು ಎಲ್ಲಿಯಾದರೂ ನಿಲ್ಲಲೇಬೇಕಲ್ಲ. ಹೊಸ ಪೀಳಿಗೆಯನ್ನು ಕರೆತರಬೇಕಲ್ಲ" ಎಂದು ಶರದ್ ಪವಾರ್ ಹೇಳುವ ಮೂಲಕ ಚುನಾವಣಾ ರಾಜಕೀಯದಿಂದ ನಿವೃತ್ತರಾಗುವ ಸುಳಿವು ನೀಡಿದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಶರದ್ ಪವಾರ್, "ನಾನು ಸಮಾಜ ಸೇವೆಯನ್ನು ಮುಂದುವರೆಸುತ್ತೇನೆ. ಅದಕ್ಕಾಗಿ ನನಗೆ ಚುನಾವಣೆಯ ಅಗತ್ಯವಿಲ್ಲ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಯಾವ ಚುನಾವಣಾ ಕಣಕ್ಕೂ ಇಳಿಯುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.
ಎನ್‌ಸಿಪಿ (ಶರದ್ ಪವಾರ್) ಬಣದಿಂದ ಪವಾರ್ ಮೊಮ್ಮಗ ಯುಗೇಂದ್ರ ಪವಾರ್ ತಮ್ಮ ಚಿಕ್ಕಪ್ಪ ಮತ್ತು ಏಳು ಬಾರಿ ಶಾಸಕರಾಗಿರುವ ಅಜಿತ್ ಪವಾರ್ ವಿರುದ್ಧ ಬಾರಾಮತಿಯಿಂದ ವಿಧಾನಸಭೆ ಚುನಾವಣೆ 2024ಕ್ಕೆ ಸ್ಪರ್ಧೆ ಮಾಡಿದ್ದಾರೆ. ಮೊಮ್ಮಗನ ಪರವಾಗಿ ಪ್ರಚಾರ ನಡೆಸಲು ಆಗಮಿಸಿದ್ದ ಶರದ್ ಪವಾರ್ ರಾಜಕೀಯ ನಿವೃತ್ತಿಯ ಮಾತನಾಡಿದರು.
ಈ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಸೀಟು ಹಂಚಿಕೆಯಲ್ಲಿ ಶರದ್ ಪವಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಜೊತೆ ಸೀಟು ಹಂಚಿಕೆ ಕುರಿತು ಚರ್ಚೆ ನಡೆಸುವುದಿಲ್ಲ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಪಟ್ಟು ಹಿಡಿದಿತ್ತು. ಆಗ ಈ ಬಿಕ್ಕಟ್ಟನ್ನು ಅನುಭವಿ ರಾಜಕಾರಣ ಪವಾರ್ ಬಗೆಹರಿಸಿದ್ದರು.
ಮೊದಲು ಹಂತದಲ್ಲಿ ಮೈತ್ರಿಕೂಟದ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳಿಗೆ ತಲಾ 85 ಸೀಟು ಹಂಚಿಕೆ ಮಾಡುವುದರಲ್ಲಿ ಪ್ರವಾರ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ರಾಜ್ಯಸಭೆ ನಾಯಕರಾಗಿರುವ ಶರದ್ ಪವಾರ್ ಚುನಾವಣಾ ರಾಜಕೀಯದಿಂದ ದೂರವಾಗುವ ಮಾತುಗಳನ್ನಾಡಿದ್ದಾರೆ.












Click it and Unblock the Notifications