Maharashtra Assembly Election 2024: ಲೆಕ್ಕಾಚಾರಗಳು ಉಲ್ಟಾ, ಅತಂತ್ರ ಫಲಿತಾಂಶ
ಮುಂಬೈ, ನವೆಂಬರ್ 03: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024 ಕುತೂಹಲಕ್ಕೆ ಕಾರಣವಾಗಿದೆ. ನವೆಂಬರ್ 20ರಂದು ನಡೆಯುವ ಚುನಾವಣೆಗೆ ಒಟ್ಟು 10,905 ನಾಮಪತ್ರಗಳು ಸಲ್ಲಿಕೆಯಾಗಿವೆ. ನವೆಂಬರ್ 4ರ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಬಳಿಕ ಚುನಾವಣಾ ಚಿತ್ರಣ ಅಂತಿಮವಾಗಲಿದೆ. ಚುನಾವಣೆ ಕುರಿತು ಚುನಾವಣಾ ಪೂರ್ವ ಸಮೀಕ್ಷೆಗಳು ನಡೆಯುತ್ತಿದ್ದು, ವರದಿ ಬಿಡುಗಡೆಯಾಗಿದೆ.
ಮಹಾರಾಷ್ಟ್ರದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುತ್ತಿಲ್ಲ. ಮೈತ್ರಿಕೂಟ ಮಾಡಿಕೊಂಡು ಜನರ ಮುಂದೆ ಹೋಗಿವೆ.

ಅತಂತ್ರ ಫಲಿತಾಂಶ: Janmat polls ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಕುರಿತು ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದೆ. ಸಮೀಕ್ಷೆಯ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಈಗ ಚುನಾವಣೆ ನಡೆದರೆ ಮಹಾರಾಷ್ಟ್ರ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.
ಈಗ ಚುನಾವಣೆ ನಡೆದರೆ ರಾಜ್ಯದಲ್ಲಿ ಬಿಜೆಪಿ 83-85 ಮತ್ತು ಕಾಂಗ್ರೆಸ್ 48-50 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಬಿಜೆಪಿ ಮಹಾಯತಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ಎಂವಿಎ ಮೈತ್ರಿಕೂಟ ರಚನೆ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146.
Janmat polls ಸಮೀಕ್ಷೆಯ ಪ್ರಕಾರ ಎನ್‌ಡಿಎ ಮೈತ್ರಿಕೂಟ 132-135, ಇಂಡಿಯಾ ಮೈತ್ರಿಕೂಟ 135-138 ಮತ್ತು ಇತರರು 16-18 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146 ಪಡೆಯಲು ಎಲ್ಲಾ ಪಕ್ಷಗಳು ವಿಫಲವಾಗಲಿವೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024 ಎದುರಿಸಲು ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ರಚನೆಯಾಗಿದೆ. ಹಾಲಿ ರಾಜ್ಯದಲ್ಲಿ ಇದೇ ಮೈತ್ರಿಕೂಟ ಅಧಿಕಾರದಲ್ಲಿದ್ದು, ಏಕನಾಥ್ ಶಿಂಧೆ ಮುಖ್ಯಮಂತ್ರಿಗಳು.
ರಾಜ್ಯದ ವಿರೋಧ ಪಕ್ಷಗಳು ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟವಿದು. ಚುನಾವಣೆ ಎರಡೂ ಮೈತ್ರಿಕೂಟಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರವಲ್ಲ ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳಿಗೂ ಚುನಾವಣೆ ಪ್ರತಿಷ್ಠೆಯಾಗಿದೆ. 2019ರ ಚುನಾವಣೆಯ ಸಂದರ್ಭದಲ್ಲಿ ಎರಡೂ ಪಕ್ಷಗಳು ಒಂದಾಗಿದ್ದವು. ಆದರೆ ಈಗ ಶಿವಸೇನೆ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಶಿವಸೇನೆ (ಏಕನಾಥ್ ಶಿಂಧೆ ಬಣ)ವಾಗಿ ಎರಡು ಭಾಗವಾಗಿದೆ. ಎನ್‌ಸಿಪಿ ಎನ್‌ಸಿಪಿ (ಶರದ್ ಪವಾರ್), ಎನ್‌ಸಿಪಿ (ಅಜಿತ್ ಪವಾರ್ ಬಣ) ಎಂದು ಎರಡು ಭಾಗವಾಗಿದೆ. ಚುನಾವಣೆಯಲ್ಲಿ ಯಾರಿಗೆ ಹೆಚ್ಚು ಸ್ಥಾನ? ಎಂದು ಲೆಕ್ಕಾಚಾರ ನಡೆಯುತ್ತಿದೆ.
ಎರಡೂವರೆ ವರ್ಷಗಳ ಹಿಂದೆ ಶಿವಸೇನೆ ವಿಭಜನೆಗೊಂಡಿತು. ಈ ಬಾರಿಯ ಚುನಾವಣೆಯಲ್ಲಿ 53 ಕ್ಷೇತ್ರಗಳಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಶಿವಸೇನೆ (ಏಕನಾಥ್ ಶಿಂಧೆ ಬಣ) ನೇರ ಎದುರಾಳಿಗಳು. ನೇರ ಹಣಾಹಣಿ ನಡೆಯುವ 53 ಕ್ಷೇತ್ರಗಳ ಪೈಕಿ 44 ಕ್ಷೇತ್ರದಲ್ಲಿ ಈಗ ಶಿವಸೇನೆ ಶಾಸಕರೇ ಇದ್ದಾರೆ. ಕೊಪ್ರಿ ಕ್ಷೇತ್ರದಿಂದ ಏಕನಾಥ್ ಶಿಂಧೆ ವಿರುದ್ಧ ಉದ್ಧವ್ ಠಾಕ್ರೆ ಬಣ ಕೇದಾರ್ ದಿಘೆಯನ್ನು ಕಣಕ್ಕಿಳಿಸಿದೆ.












Click it and Unblock the Notifications