Maharashtra Assembly Election 2024: ಮಹಾರಾಷ್ಟ್ರ ಚುನಾವಣೆ, ಒಂದು ವಾರದಲ್ಲಿ ಮೋದಿ 9 ಸಮಾವೇಶ
ಮುಂಬೈ, ನವೆಂಬರ್ 09: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಪ್ರಚಾರವನ್ನು ಬಿಜೆಪಿ ಚುರುಕುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರವನ್ನು ಆರಂಭಿಸಿದ್ದಾರೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ಚುನಾವಣೆಯನ್ನು 'ಮಹಾಯತಿ' ಮೈತ್ರಿಕೂಟದ ಮೂಲಕ ಎದುರಿಸುತ್ತಿದೆ.
ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಮೂಲಕ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಸದ್ಯ ರಾಜ್ಯದಲ್ಲಿ ಇದೇ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದೆ. ಈ ಬಾರಿಯೂ ಗೆದ್ದು ಅಧಿಕ ಸೀಟುಗಳನ್ನು ಗೆದ್ದು ಅಧಿಕಾರ ಹಿಡಿಯಬೇಕು ಎಂದು ಬಿಜೆಪಿ ತಂತ್ರ ರೂಪಿಸಿದೆ.

ಶುಕ್ರವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಒಂದು ವಾರದಲ್ಲಿ ಅವರು 9 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಪಕ್ಷ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಲಿದ್ದಾರೆ.
150 ಅಧಿಕ ಸೀಟುಗಳಲ್ಲಿ ಸ್ಪರ್ಧೆ: ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಸೀಟು ಹಂಚಿಕೆ ಸೂತ್ರದಂತೆ ಬಿಜೆಪಿ 150ಕ್ಕೂ ಅಧಿಕ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146.
ಶುಕ್ರವಾರ ನರೇಂದ್ರ ಮೋದಿ ಮೊದಲ ಸಮಾವೇಶವನ್ನು ಧುಲೆಯಲ್ಲಿ ನಡೆಸಿದರು. ಬಳಿಕ ನಾಸಿಕ್‌ನಲ್ಲಿ ಪ್ರಚಾರ ಭಾಷಣ ಮಾಡಿದರು. ನವೆಂಬರ್ 12ರಂದು ಪುಣೆಯಲ್ಲಿ ನರೇಂದ್ರ ಮೋದಿ ರೋಡ್ ಶೋ ನಡೆಸಿ ಸಹ ಪ್ರಚಾರವನ್ನು ನಡೆಸಲಿದ್ದಾರೆ.
ನವೆಂಬರ್ 9ರಂದು ಅಕೋಲ ಮತ್ತು ನಾಂದೇಡ್‌ನಲ್ಲಿ ಮೋದಿ ಸಮಾವೇಶ ನಿಗದಿಯಾಗಿದೆ. ನವೆಂಬರ್ 12ರಂದು ಚಿಮುರ್, ಸೋಲ್ಹಾಪುರದಲ್ಲಿ ನರೇಂದ್ರ ಮೋದಿ ಎರಡು ಸಮಾವೇಶ ಮುಗಿಸಿ, ಸಂಜೆ ಪುಣೆಯಲ್ಲಿ ರೋಡ್ ಶೋ ಮಾಡಲಿದ್ದಾರೆ.
ಪ್ರಧಾನಿ ಮೋದಿ ನವೆಂಬರ್ 14ರಂದು ಛತ್ರಪತಿ ಸಂಭಾಜಿ ನಗರ, ರಾಯಗಢ, ಮುಂಬೈನಲ್ಲಿ ಪ್ರಚಾರವನ್ನು ನಡೆಸಲಿದ್ದಾರೆ. ಮಹಾರಾಷ್ಟ್ರದ ಜೊತೆಗೆ ಜಾರ್ಖಂಡ್ ವಿಧಾನಸಭೆಗೆ ಸಹ ಮತದಾನ ನಡೆಯುತ್ತಿದ್ದು, ಮೋದಿ ಅಲ್ಲಿಯೂ ಸಹ ಪ್ರಚಾರವನ್ನು ನಡೆಸಲಿದ್ದಾರೆ.
ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದಲ್ಲಿ ಬಿಜೆಪಿ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದೆ. ಆದರೆ ಈ ಬಾರಿಯ ಚುನಾವಣೆಗೆ ಮೈತ್ರಿಕೂಟ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಚುನಾವಣೆಯಲ್ಲಿ ಮಹಾಯತಿ ಮೈತ್ರಿಕೂಟಕ್ಕೆ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಎದುರಾಳಿ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟವಿದು. ಈ ಮೈತ್ರಿಕೂಟ ಸಹ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಹರಿಯಾಣ ಮತ್ತು ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯ ಉತ್ಸಾಹ ಹೆಚ್ಚಾಗಿದೆ. ಹರಿಯಾಣದಲ್ಲಿ ಬಿಜೆಪಿಗೆ ಸೋಲಾಗಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿದ್ದವು. ಆದರೆ ಬಿಜೆಪಿ ಮೂರನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದೆ.












Click it and Unblock the Notifications