Maharashtra Assembly Election 2024: ಮಹಾರಾಷ್ಟ್ರ ಚುನಾವಣೆ ಚಿತ್ರಣ ಹೇಗಿದೆ?
ಮುಂಬೈ, ನವೆಂಬರ್ 13: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಬಗ್ಗೆ ಭಾರೀ ಚರ್ಚೆ ನಡೆಯತ್ತಿದೆ. ಈ ಚುನಾವಣೆಯ ಫಲಿತಾಂಶ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರ ಶನಿವಾರ ಫಲಿತಾಂಶ ಘೋಷಣೆಯಾಗಲಿದೆ. ಸದ್ಯ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾವು ಪಡೆದಿದೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಎದುರಾಳಿಗಳಲ್ಲ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿಲ್ಲ. ಬಿಜೆಪಿ ಆಡಳಿತ ಪಕ್ಷವಾದ 'ಮಹಾಯತಿ' ಮೈತ್ರಿಕೂಟ, ಕಾಂಗ್ರೆಸ್ ವಿರೋಧ ಪಕ್ಷವಾದ 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟದ ಜೊತೆ ಇದೆ. ಸೀಟು ಹಂಚಿಕೆ ಮಾಡಿಕೊಂಡು ಜನರ ಮುಂದೆ ಹೋಗಿವೆ.

ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಎದುರಾಳಿಗಳು.
ಚುನಾವಣಾ ಚಿತ್ರಣ ಹೇಗಿದೆ?: ಈ ಬಾರಿಯ ಚುನಾವಣೆ ವಿಶೇಷ ಎಂದರೆ ಶಿವಸೇನೆ, ಎನ್‌ಸಿಪಿ ಪಕ್ಷಗಳು ಎಷ್ಟು ಸ್ಥಾನಗಳಿಸಲಿವೆ ಎಂಬುದು?. ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಾನೊಬ್ಬ ಮರಾಠ ನಾಯಕ ಎಂಬ ಹಣೆಪಟ್ಟಿ ಕಳಚಿಕೊಂಡು ಹೊರಬರುತ್ತಿದ್ದಾರೆ. ಉಪ ಮುಖ್ಯಮಂತ್ರಿಯಾದ ಬಿಜೆಪಿಯ ದೇವೇಂದ್ರ ಫಡ್ನವೀಸ್ ಈ ಬಾರಿಯ ಚುನಾವಣೆಯಲ್ಲಿ ಮಹಾಯತಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪುನಃ ಮುಖ್ಯಮಂತ್ರಿಯಾಗಲಿದ್ದಾರೆಯೇ? ಎಂಬ ಚರ್ಚೆಗಳು ಸಾಗಿವೆ.
ಉಪ ಮುಖ್ಯಮಂತ್ರಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಮಹಾಯತಿ ಮೈತ್ರಿಕೂಟದಲ್ಲಿದ್ದಾರೆ. ಆದರೆ ಅವರು ಕೇಂದ್ರ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗಿನ ಪ್ರಚಾರದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಅಲ್ಲದೇ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ವೈಯಕ್ತಿಯವಾಗಿ ಶರದ್ ಪವಾರ್ ವಿರುದ್ಧ ಟೀಕೆಗಳನ್ನು ಮಾಡಬೇಡಿ ಎಂದು ಅಜಿತ್ ಪವಾರ್ ಕರೆ ನೀಡಿದ್ದಾರೆ.
ಎಂವಿಎ ಮೈತ್ರಿಕೂಟದಲ್ಲಿಯೂ ಇದೇ ಮಾದರಿ ಪರಿಸ್ಥಿತಿ ಇದೆ. ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಲೋಕಸಭೆ ಚುನಾವಣೆಯಲ್ಲಿ ಇದ್ದಷ್ಟು ಮೌನವಾಗಿ ಉಳಿದಿಲ್ಲ. ಒಂದು ವೇಳೆ ಎಂವಿಎ ಮೈತ್ರಿಕೂಟ ಬಹುಮತ ಪಡೆದರೆ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಮುಂದಿನ ನಡೆ ಏನು? ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಜಾತಿ, ಅಭ್ಯರ್ಥಿ, ಪ್ರಾದೇಶಿಕತೆ, ರೈತರ ವಿಚಾರ ಎಲ್ಲವೂ ಪ್ರಮುಖವಾಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೂ ಸಹ ವಿವಿಧ ಪಕ್ಷಗಳು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿವೆ.
2014ರ ಚುನಾವಣೆಯಲ್ಲಿ ಬಿಜೆಪಿ 122 ಸೀಟುಗಳಲ್ಲಿ ಜಯಗಳಿಸಿತ್ತು. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾದರು. ಅವರು ಮರಾಠ ಸಮುದಾಯದ ಬೆಂಬಲದ ಕಡೆ ಹೆಚ್ಚಿನ ಗಮನ ಹರಿಸಿದರು. ಒಬಿಸಿ ಸಮುದಾಯದ ಬೆಂಬಲವೂ ಸಿಕ್ಕಿತ್ತು.
2019ರಲ್ಲಿ ಒಂದಾಗಿಯೇ ಇದ್ದ ಎನ್‌ಸಿಪಿ, ಶಿವಸೇನೆ ಈ ಬಾರಿ ಎರಡು ಬಣಗಳಾಗಿವೆ. ಒಂದು ಆಡಳಿತ ಪಕ್ಷ, ಮತ್ತೊಂದು ಬಣ ವಿರೋಧ ಪಕ್ಷದ ಜೊತೆಗಿವೆ. ಆದ್ದರಿಂದ ಯಾವ ಬಣ ಹೆಚ್ಚು ಮತಗಳನ್ನು ಪಡೆಯಲಿದೆ? ಎಂಬುದು ಸದ್ಯದ ಲೆಕ್ಕಾಚಾರವಾಗಿದೆ.












Click it and Unblock the Notifications