Maharashtra Assembly Election 2024: ಮಹಾರಾಷ್ಟ್ರ ಚುನಾವಣೆ, ಏಕನಾಥ್ ಶಿಂಧೆ ಸಿಎಂ ಅಭ್ಯರ್ಥಿ?
ಮುಂಬೈ, ನವೆಂಬರ್ 02: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ಕ್ಕೆ ನಾಮಪತ್ರ ಸಲ್ಲಿಕೆ ಅಂತ್ಯಗೊಂಡಿದೆ. ನವೆಂಬರ್ 4 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡು ನಾಮಪತ್ರ ಸಲ್ಲಿಕೆ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯ ಚರ್ಚೆಗಳು ಆರಂಭವಾಗಿದೆ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬುದು ಸದ್ಯದ ಪ್ರಶ್ನೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನವೆಂಬರ್ 20ರಂದು ಒಂದೇ ಹಂತದಲ್ಲಿ ನಡೆಯಲಿದೆ. ನವೆಂಬರ್ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ವಿಧಾನಸಭೆ ಚುನಾವಣೆಗೆ ಒಟ್ಟು 10,905 ನಾಮಪತ್ರಗಳು ಸಲ್ಲಿಕೆಯಾಗಿವೆ. ಎರಡು ಮೈತ್ರಿಕೂಟದ ಮೂರು ಪ್ರಮುಖ ಪಕ್ಷಗಳ ಕಾರಣಕ್ಕೆ ಚುನಾವಣೆಯ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಹಾಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಅಧಿಕಾರದಲ್ಲಿದೆ. ಏಕನಾಥ್ ಶಿಂಧೆ ಮುಖ್ಯಮಂತ್ರಿಗಳು. ಬಿಜೆಪಿಯ ದೇವೇಂದ್ರ ಫಡ್ನವೀಸ್, ಎನ್‌ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳು. ಆದರೆ 2024ರ ಚುನಾವಣೆಯಲ್ಲಿ ಮೈತ್ರಿಕೂಟ ಗೆಲುವು ಸಾಧಿಸಿದರೆ ಮುಖ್ಯಮಂತ್ರಿ ಯಾರು?.
ಏಕನಾಥ್ ಶಿಂಧೆ ಸಿಎಂ ಅಭ್ಯರ್ಥಿ: ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಏಕನಾಥ್ ಶಿಂಧೆ ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಜೂನ್ 30, 2022ರಲ್ಲಿ ಏಕನಾಥ್ ಶಿಂಧೆ ಮಹಾರಾಷ್ಟ್ರದ 20ನೇ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡರು. ಶಿವಸೇನೆ, ಉದ್ಧವ್ ಠಾಕ್ರೆ ಬಿಟ್ಟು ಹೊರಬಂದ ಅವರು ಬಿಜೆಪಿ ಜೊತೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಿದರು. ಮುಖ್ಯಮಂತ್ರಿಯೂ ಆದರು.
ತಮ್ಮನ್ನು 'ಕಾಮನ್ ಮ್ಯಾನ್' ಸಿಎಂ ಎಂದು ಕರೆದುಕೊಳ್ಳುವ ಏಕನಾಥ್ ಶಿಂಧೆ 2024ರಲ್ಲಿ ಮಹಾಯತಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮತ್ತೆ ಸಿಎಂ ಆಗುತ್ತಾರೆಯೇ? ಎಂಬ ಪ್ರಶ್ನೆ ಈಗ ಚರ್ಚೆಗೆ ಕಾರಣವಾಗಿದೆ. ಆದರೆ ಚುನಾವಣಾ ಫಲಿತಾಂಶದ ಬಳಿಕ ಈ ಕುರಿತು ಚರ್ಚಿಸೋಣ ಎಂದು ಮಹಾಯತಿ ಮೈತ್ರಿಕೂಟದ ನಾಯಕರು ಹೇಳುತ್ತಿದ್ದಾರೆ.
ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಏಕನಾಥ್ ಶಿಂಧೆ, "ನಾನು ನನ್ನನ್ನು ಸಿಎಂ ಕಾಮನ್ ಮ್ಯಾನ್ ಎಂದೇ ಪರಿಗಣಿಸುತ್ತೇನೆ. ನನ್ನ ಶಿಷ್ಟಾಚಾರ ಜನರನ್ನು ಭೇಟಿ ಮಾಡಲು, ಅವರ ಸಮಸ್ಯೆ ಆಲಿಸಲು ಯಾವುದೇ ತಡೆ ಒಡ್ಡುವುದಿಲ್ಲ" ಎಂದು ಹೇಳಿದರು.
ಏಕನಾಥ್ ಶಿಂಧೆ ಮಹಾಯತಿ ಮೈತ್ರಿಕೂಟ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ ಎಂಬ ವರದಿಗಳನ್ನು ತಳ್ಳಿ ಹಾಕಿದರು. "ಕೆಲಸ ಮಾಡಿ, ರಾಜ್ಯದ ಅಭಿವೃದ್ಧಿ ಮಾಡಿ, ಜನರ ಜೀವನ ಮಟ್ಟ ಸುಧಾರಿಸಿ ಎಂಬುದು ನಮ್ಮ ನಿಲುವು. ಇದನ್ನೇ ನಮ್ಮ ಸರ್ಕಾರ ಇಲ್ಲಿಯ ತನಕ ಮಾಡಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಮತಗಳು ಬೇರೆ ಪಕ್ಷದ ಕಡೆ ಹೋದವು. ಆದರೆ ವಿಧಾನಸಭೆ ಚುನಾವಣೆ ಇದಕ್ಕಿಂತ ಭಿನ್ನ" ಎಂದರು.
"ನಾನು ಚುನಾವಣೆಯಲ್ಲಿಯೂ ಇದೇ ಸಂದೇಶವನ್ನು ಜನರಿಗೆ ನೀಡುತ್ತೇನೆ. ನಾನು ಈಗ ಟೀಮ್ ಲೀಡರ್. ನಮ್ಮ ತಂಡ ಕೆಲಸ ಮಾಡುತ್ತಿದೆ. ನಮ್ಮ ತಂಡದಲ್ಲಿ ಎಲ್ಲರೂ ಒಂದೇ. ನಮ್ಮ ಗುರಿ ಮಹಾಯತಿ ಮೈತ್ರಿಕೂಟದ ಸರ್ಕಾರವನ್ನು ಅಧಿಕಾರಕ್ಕೆ ತರುವುದು. ಅದರ ಕಡೆಗೆ ಮಾತ್ರ ನಮ್ಮ ಗಮನವಿದೆ" ಎಂದು ಏಕನಾಥ್ ಶಿಂಧೆ ಹೇಳಿದರು.
"ಲೋಕಸಭೆ ಚುನಾವಣೆ 2024ರಂತೆ ಮಹಾಯತಿ ಮೈತ್ರಿಕೂಟ ಒಂದಾಗಿ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿದೆ. ಎಂವಿಎ ಮೈತ್ರಿಕೂಟದ ನಾಯಕರು ಏನು ಬೇಕಾದರೂ ಹೇಳಲಿ. ಚುನಾವಣೆ ಫಲಿತಾಂಶದ ಬಳಿಕ ನಾವು ನಮ್ಮ ಮೈತ್ರಿಕೂಟದ ಮುಂದಿನ ತೀರ್ಮಾನ ಮಾಡುತ್ತೇವೆ" ಎಂದು ಏಕನಾಥ್ ಶಿಂಧೆ ಸ್ಪಷ್ಟಪಡಿಸಿದರು.












Click it and Unblock the Notifications