ಮಹಾರಾಷ್ಟ್ರ ಹೈಡ್ರಾಮಾ: 3ನೇ ಮಹಡಿಯಿಂದ ಜಿಗಿದ ಡೆಪ್ಯೂಟಿ ಸ್ಪೀಕರ್, ಶಾಸಕರು
ಮಹಾರಾಷ್ಟ್ರ ಚುನಾವಣೆ ದಿನಾಂಕ ಸಮೀಪಿಸುತ್ತಿರುವಂತೆ ಮಹಾರಾಷ್ಟ್ರ ರಾಜಕೀಯದಲ್ಲಿ ಹೈಡ್ರಾಮಾ ಹೆಚ್ಚಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇದೀಗ ಮಹಾರಾಷ್ಟ್ರದಲ್ಲೂ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಮಹಾರಾಷ್ಟ್ರದ ಜನತೆ ಮಹಾ ಹೈಡ್ರಾಮಾಕ್ಕೆ ಸಾಕ್ಷಿಯಾಗಿದ್ದಾರೆ. ಮಹಾರಾಷ್ಟ್ರದ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು ಮಹಾರಾಷ್ಟ್ರದ ಸಚಿವಾಲಯದ ಮೂರನೇ ಬಿಲ್ಡಿಂಗ್‌ನಿಂದ ಕೆಳಗೆ ಜಿಗಿದಿದ್ದು, ಕೂದಲೆಳೆ ಅಂತರದಲ್ಲಿ ಪ್ರಣಾಪಾಯದಿಂದ ಪಾರಾಗಿದ್ದಾರೆ.
ಮಹಾರಾಷ್ಟ್ರದ ಡೆಪ್ಯೂಟಿ ಸ್ಪೀಕರ್ ಶುಕ್ರವಾರ ಮಾಡಿದ ಹೈಡ್ರಾಮಾಗೆ ಜನ ಬೆಚ್ಚಿ ಬಿದ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಈಗ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿ ಇದೆ. ಶಿವಸೇನಾದ (ಏಕನಾಥ ಶಿಂಧೆ ಬಣ) ಏಕನಾಥ ಶಿಂಧೆ ಅವರು ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಎನ್‌ಸಿಪಿ ಹಾಗೂ ಬಿಜೆಪಿ ಪ್ರಮುಖ ವಹಿಸಿವೆ. ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದ (ಮಹಾಯುತಿ)ಲ್ಲಿ ಇದೀಗ ಕ್ರೆಡಿಟ್ ವಾರ್ ನಡೆದಿದೆ. ಸಮ್ಮಿಶ್ರ ಸರ್ಕಾರವಿದ್ದು, ಒಂದೊಂದು ಪಕ್ಷವು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ತಮ್ಮದೇ ತಂತ್ರವನ್ನು ಅನುಸರಿಸುತ್ತಿವೆ. ಈಚೆಗೆ ಎನ್‌ಸಿಪಿ ಎರಡು ಬಣವಾಗಿದ್ದು, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ ಅಜಿತ್ ಪವಾರ್ ಬಣ)ದ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಇದೇ ಪಕ್ಷದ ಮಹಾರಾಷ್ಟ್ರ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರು ಶುಕ್ರವಾರ ಮಹಡಿಯ ಮೇಲಿಂದ ಜಿಗಿದಿದ್ದಾರೆ. ಈ ವಿಷಯ ಇದೀಗ ರಾಷ್ಟ್ರಾದ್ಯಂತ ಸುದ್ದಿಗೆ ಗ್ರಾಸವಾಗಿದೆ.

ಡೆಪ್ಯೂಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರು ಮಹಾರಾಷ್ಟ್ರದ ಸಚಿವಾಲಯದ ಮೇಲಿಂದ ( ಮಂತ್ರಾಲಯ) ಕೆಳಗೆ ಜಿಗಿದಿದ್ದಾರೆ. ಆದರೆ, ಕೂದಲೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲಿ ಸಚಿವಾಲಯದ ಮೂರನೇ ಮಹಡಿಯಿಂದ ಅವರು ಜಿಗಿದಿದ್ದಾರೆ. ಆ ಬಿಲ್ಡಿಂಗ್‌ನಲ್ಲಿ ಸೇಫ್ಟಿ ನೆಟ್ ಹಾಕಿದ್ದರಿಂದ ಅವರು ನೆಲಕ್ಕೆ ಕುಸಿಯುವುದು ತಪ್ಪಿದೆ. ಮಹಾರಾಷ್ಟ್ರದ ಮುಂಬೈನಲ್ಲಿರುವ ಸರ್ಕಾರದ ಆಡಳಿತ ಕೇಂದ್ರದ ಕಚೇರಿಯ ಮೂರನೇ ಮಹಡಿಯಿಂದ ನರಹರಿ ಅವರು ಜಿಗಿದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿಯು ಅವರನ್ನು ರಕ್ಷಿಸಿ ಮೇಲೆಕ್ಕೆ ತೆಗೆದುಕೊಂಡು ಬಂದಿದ್ದಾರೆ. ಮೂರನೇ ಮಹಡಿಯಿಂದ ಕೆಳಗೆ ಜಿಗಿದಿದ್ದರೂ ಅಲ್ಲಿದ್ದ ನೆಟ್‌ನಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭದ್ರತಾ ಸಿಬ್ಬಂದಿಯೊಂದಿಗೆ ಕೆಲವು ಮಹಾರಾಷ್ಟ್ರದ ಕೆಲವು ಶಾಸಕರು ಸಹ ನೆಟ್‌ನಲ್ಲಿ ಜಿಗಿದು ಘೋಷಣೆ ಕೂಗಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೀಸಲಾತಿಗಾಗಿ ಹೋರಾಟ: ಈ ನಿರ್ಧಾರಕ್ಕೆ ಕಾರಣ
ಮಹಾರಾಷ್ಟ್ರದಲ್ಲಿ ವಿವಿಧ ಸಮುದಾಯಗಳು ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಕಳೆದ ವರ್ಷ ಮರಾಠ ಸಮುದಾಯವೂ ಸಹ ತೀವ್ರ ಪ್ರತಿಭಟನೆ ನಡೆಸಿತ್ತು. ಮಹಾರಾಷ್ಟ್ರದಲ್ಲಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿವಿಧ ಸಮುದಾಯಗಳು ಹೋರಾಟವನ್ನು ತೀವ್ರಗೊಳಿಸಿವೆ. ಇದೀಗ ಮಹಾರಾಷ್ಟ್ರದ ಧಂಗರ್ ಎನ್ನುವ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎನ್ನುವ ಆಗ್ರಹ ಹೆಚ್ಚಾಗಿದೆ. ಮಹಾರಾಷ್ಟ್ರದ ಧಂಗರ್ ಸಮುದಾಯ ಸದ್ಯ ಅಲ್ಲಿ ಒಬಿಸಿ ವರ್ಗದ ಅಡಿಯಲ್ಲಿ ಮೀಸಲಾತಿ ಹೊಂದಿದ್ದು, ಆ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದೇ ವಿಚಾರವಾಗಿ ಮಹಾರಾಷ್ಟ್ರದ ಡೆಪ್ಯೂಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರು ಸಹ ಇದಕ್ಕೆ ದನಿಗೂಡಿಸಿದ್ದಾರೆ.

ಮುಖ್ಯಮಂತ್ರಿ ಭೇಟಿಗೆ ಸಿಗದ ಅವಕಾಶ: ಮೀಸಲಾತಿ ವಿಚಾರವಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಮನವಿ ಸಲ್ಲಿಸಲು ಹಾಗೂ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುವುದಕ್ಕೆ ಮಹಾರಾಷ್ಟ್ರದ ಡೆಪ್ಯೂಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರು ಕಳೆದ ಎರಡು ಮೂರು ದಿನಗಳಿಂದ ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಮುಖ್ಯಮಂತ್ರಿ ಭೇಟಿಗೆ ಅವಕಾಶ ಸಿಕ್ಕಿಲ್ಲ. ಶುಕ್ರವಾರವೂ ಸಿ.ಎಂ ಏಕನಾಥ ಶಿಂಧೆ ಅವರನ್ನು ಭೇಟಿ ಮಾಡುವುದಕ್ಕೆ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಇದರಿಂದ ಆಕ್ರೋಶಗೊಂಡಿರುವ ಅವರು ಈ ರೀತಿ ಏಕಾಏಕಿ ಬಿಲ್ಡಿಂಗ್ ಮೇಲಿಂದ ಜಿಗಿದಿದ್ದಾರೆ ಎನ್ನಲಾಗಿದೆ.ಆದರೆ, ಪೊಲೀಸರು ಹಾಗೂ ಸ್ಥಳೀಯರ ಮುಂಜಾಗ್ರತಾ ಕ್ರಮದಿಂದ ಭಾರೀ ಅನಾಹುತ ತಪ್ಪಿದೆ.












Click it and Unblock the Notifications