Maharashtra Assembly Election 2024: ಮಹಾರಾಷ್ಟ್ರ ಚುನಾವಣೆ, ಅಂತಿಮ ಹಂತಕ್ಕೆ ಬಂದ ಪ್ರಚಾರ
ಮುಂಬೈ, ನವೆಂಬರ್ 17: ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಮತದಾನ ನವೆಂಬರ್ 20ರ ಬುಧವಾರ ನಡೆಯಲಿದೆ. ವಿವಿಧ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ಕೊನೆಯ ಹಂತಕ್ಕೆ ತಲುಪಿದೆ. ನವೆಂಬರ್ 18ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರ ಶನಿವಾರ ಫಲಿತಾಂಶ ಘೋಷಣೆಯಾಗಲಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಎದುರಾಳಿಗಳು. ಮೈತ್ರಿಕೂಟದ ಜೊತೆ ಇತರ ಪಕ್ಷಗಳು ಸಹ ಚುನಾವಣಾ ಕಣದಲ್ಲಿದ್ದು, ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.

ಅಂತಿಮ ಹಂತದಲ್ಲಿ ಪ್ರಚಾರ: 'ಮಹಾಯುತಿ' ಮೈತ್ರಿಕೂಟದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಪೂರ್ಣಗೊಳಿಸಿದ್ದಾರೆ. ವಿವಿಧ ಕೇಂದ್ರ ಸಚಿವರು ಭಾನುವಾರ ಮತ್ತು ಸೋಮವಾರ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ನಡೆಸಲಿದ್ದಾರೆ. ರಾಜ್ಯ ಸರ್ಕಾರದ 'ಲಡ್ಕಿ ಬಹಿನ್ ಯೋಜನೆ' ಚುನಾವಣಾ ಪ್ರಚಾರದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದು ಮಹಾಯತಿ ಮೈತ್ರಿಕೂಟಕ್ಕೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದಕ್ಕೆ ಪ್ರತಿಯಾಗಿ ಎಂವಿಎ ಮೈತ್ರಿಕೂಟ ಮಹಿಳೆಯರಿಗೆ ಮಾಸಿಕ 3 ಸಾವಿರ ರೂ. ನೀಡುವ ಭವರಸೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದೆ. ರೈತರು, ಯುವಕರು, ಮಹಿಳೆಯರನ್ನು ಗುರಿಯಾಗಿಸಿಕೊಂಡು ಚುನಾವಣಾ ಪ್ರಚಾರವನ್ನು ನಡೆಸಲಾಗುತ್ತಿದೆ.
ವಿದರ್ಭ ಪ್ರಾಂತ್ಯದಲ್ಲಿರುವ ರೈತರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳು, ಮುಂಬೈನ ನಗರವಾಸಿಗಳು, ಮರಾಠಿಗರ ಮೀಸಲಾತಿ ಮುಂತಾದ ವಿಚಾರಗಳು ಚುನಾವಣಾ ಪ್ರಚಾರದಲ್ಲಿ ಕೇಳಿಬಂದಿವೆ. ಅಂತಿಮವಾಗಿ ಬುಧವಾರ ಮತದಾರ ತನ್ನ ಬೆಂಬಲ ಯಾರಿಗೆ? ಎಂದು ತೀರ್ಪು ನೀಡಲಿದ್ದಾನೆ.
ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ಮೈತ್ರಿಕೂಟದ ಮೂಲಕ ಚುನಾವಣೆಯನ್ನು ಎದುರಿಸುತ್ತಿವೆ. ಮಹಾಯತಿ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ 2022ರಲ್ಲಿ ಶಿವಸೇನೆಯ ಏಕನಾಥ ಶಿಂಧೆಗೆ ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟುಕೊಟ್ಟಿತ್ತು. ಆದರೆ ಈ ಬಾರಿ 150ಕ್ಕೂ ಅಧಿಕ ಸ್ಥಾನಗಳಲ್ಲಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ.
2019ರ ಚುನಾವಣೆಯಲ್ಲಿ ಒಟ್ಟಾಗಿದ್ದ ಎನ್‌ಸಿಪಿ, ಶಿವಸೇನೆ ಈ ಬಾರಿ ಎರಡು ಭಾಗವಾಗಿದೆ. ಒಂದು ಬಣ ಆಡಳಿತ ಪಕ್ಷದ ಜೊತೆಗೆ ಮತ್ತೊಂದು ಬಣ ವಿರೋಧ ಪಕ್ಷದ ಜೊತೆಗಿದ್ದು, ರಾಷ್ಟ್ರೀಯ ಪಕ್ಷಗಳ ಜೊತೆಗೆ ಈ ಪಕ್ಷಗಳಿಗೆ ಎಷ್ಟು ಸೀಟು ಸಿಗಲಿದೆ?, ಯಾವ ಬಣಕ್ಕೆ ಹೆಚ್ಚು ಸೀಟುಗಳು ಲಭ್ಯವಾಗಲಿದೆ? ಎಂದು ಲೆಕ್ಕಾಚಾರವನ್ನು ಹಾಕಲಾಗುತ್ತಿದೆ.
ಸೋಮವಾರ ಸಂಜೆ 6 ಗಂಟೆಗೆ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದೆ. ವಿವಿಧ ಪಕ್ಷಗಳ ರಾಷ್ಟ್ರೀಯ ನಾಯಕರು, ಬೇರೆ ಬೇರೆ ರಾಜ್ಯಗಳ ಪಕ್ಷಗಳ ನಾಯಕರು, ಕಾರ್ಯಕರ್ತರು ಕ್ಷೇತ್ರವನ್ನು ಬಿಟ್ಟು ವಾಪಸ್ ಆಗಲಿದ್ದಾರೆ. ಅಭ್ಯರ್ಥಿಗಳು ಮನೆ-ಮನೆಗೆ ತೆರಳಿ ಪ್ರಚಾರವನ್ನು ನಡೆಸಬಹುದಾಗಿದೆ.
ಮಹಾಯತಿ ಮತ್ತು ಎಂವಿಎ ಎರಡೂ ಮೈತ್ರಿಕೂಟಗಳು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಚುನಾವಣೆಗೆ ಹೋಗುತ್ತಿವೆ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಮುಖ್ಯಮಂತ್ರಿ ಹುದ್ದೆ ಯಾರಿಗೆ? ಎಂದು ತೀರ್ಮಾನವನ್ನು ಮಾಡಲಿವೆ.











Click it and Unblock the Notifications