Maharashtra Assembly Election 2024: ಮಹಾರಾಷ್ಟ್ರ ಚುನಾವಣೆ, ಜನರಿಗೆ ಹಲವು ಭರವಸೆ ಕೊಟ್ಟ ಬಿಜೆಪಿ
ಮುಂಬೈ, ನವೆಂಬರ್ 10: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ಕ್ಕೆ 10 ದಿನ ಬಾಕಿ ಇದೆ. ಭಾನುವಾರ ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ರಾಜ್ಯದಲ್ಲಿ 'ಮಹಾಯತಿ' ಮೈತ್ರಿಕೂಟದ ಮೂಲಕ ಚುನಾವಣೆಯನ್ನು ಎದುರಿಸುತ್ತಿದೆ.
ಭಾನುವಾರ ಮುಂಬೈನಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಬಿಜೆಪಿ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದರು. ಕೇಂದ್ರ ಸಚಿವ ಪಿಯೂಷ್ ಘೋಯಲ್, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂಧ್ರ ಫಡ್ನವೀಸ್ ಮುಂತಾದ ನಾಯಕರು ಉಪಸ್ಥಿತರಿದ್ದರು.

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅಮಿತ್ ಶಾ, 'ವಿಧಾನಸಭೆ ಚುನಾವಣೆಗೆ ಇದು ಬಿಜೆಪಿಯ ಸಂಕಲ್ಪ ಪತ್ರ. ಮಹಾರಾಷ್ಟ್ರ ರಾಜ್ಯದ ಆಶಯಗಳ ನಿರ್ಣಯ ಪತ್ರ. ಪ್ರಣಾಳಿಕೆಯಲ್ಲಿ ರೈತರು, ಮಹಿಳೆಯರು ಮತ್ತು ಯುವಕರ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ. ಬಿಜೆಪಿ ಬಡವರ ಕಲ್ಯಾಣಕ್ಕೆ ಬದ್ಧವಾಗಿದೆ" ಎಂದು ಹೇಳಿದರು.
ಪ್ರಣಾಳಿಕೆಯ ಪ್ರಮುಖ ಅಂಶಗಳು: ಸದ್ಯ ಮಹಾರಾಷ್ಟ್ರ ರಾಜ್ಯದಲ್ಲಿ ಬಿಜೆಪಿ ಪಕ್ಷ ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಮೂಲಕ ಅಧಿಕಾರದಲ್ಲಿದೆ. ಈ ಬಾರಿಯ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನದಲ್ಲಿ ಜಯಗಳಿಸಿ ಪುನಃ ಅಧಕಾರ ಪಡೆಯುವ ಭರವಸೆಯಲ್ಲಿದೆ.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ, 25 ಲಕ್ಷ ಉದ್ಯೋಗ ಸೃಷ್ಟಿ, ವೃದ್ಧಾಪ್ಯ ವೇತನ 2,100 ರೂ. ನೀಡುವುದು, 25,000 ಮಹಿಳಾ ಪೊಲೀಸರ ನೇಮಕ, ಹಳ್ಳಿಗಳಿಗೆ ಉತ್ತಮ ರಸ್ತೆ ಸಂಪರ್ಕ, ಆಶಾ ಕಾರ್ಯಕರ್ತರಿಗೆ ಮಾಸಿಕ 15,000 ರೂ. ಗೌರವ ಧನ, ವಿದ್ಯುತ್ ಬಿಲ್‌ಗಳಲ್ಲಿ ಶೇ 30ರಷ್ಟು ರಿಯಾಯತಿ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.
ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮಹಾರಾಷ್ಟ್ರ ರಾಜ್ಯದಲ್ಲಿ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುತ್ತಿಲ್ಲ. ಬಿಜೆಪಿ 'ಮಹಾಯುತಿ' ಮೈತ್ರಿಕೂಟದ ಮೂಲಕ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆಗೆ ಹೋಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನದಲ್ಲಿ ಕಣಕ್ಕಿಳಿದಿರುವ ಪಕ್ಷ ಬಿಜೆಪಿಯಾಗಿದೆ.
ಮಹಾರಾಷ್ಟ್ರದ 228 ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ವಿವಿಧ ಪಕ್ಷಗಳ 4,140 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ, ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಪ್ರಮುಖ ಪಕ್ಷಗಳು. ಮುಂಬೈ ನಗರದ 36 ಸೀಟುಗಳಿಗೆ 420 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನವೆಂಬರ್ 20ರಂದು ಮತದಾನ ನಡೆಯಲಿದೆ.
'ಮಹಾಯತಿ' ಮೈತ್ರಿಕೂಟದಲ್ಲಿ ಬಿಜೆಪಿ 180 ಸೀಟು, ಮಿತ್ರಪಕ್ಷ ಎನ್‌ಸಿಪಿ 52, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 80 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿಯ ಕೆಲವು ನಾಯಕರನ್ನು ಶಿವಸೇನೆ ಮತ್ತು ಎನ್‌ಸಿಪಿ ಟಿಕೆಟ್‌ನಲ್ಲಿ ಕಣಕ್ಕಿಳಿಸುವ ಮೂಲಕ ಹೊಸ ಚುನಾವಣಾ ತಂತ್ರವನ್ನು ಬಿಜೆಪಿ ಅನುಸರಿಸಿದೆ.
ಅಚ್ಚರಿಯ ವಿಷಯ ಎಂದರೆ ಕಾಂಗ್ರೆಸ್ ಸಹ ಮಧ್ಯಾಹ್ನ 2 ಗಂಟೆಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಮೂಲಕ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳಿವೆ.












Click it and Unblock the Notifications