Madhya Pradesh; ಮಧ್ಯಪ್ರದೇಶ ಸಿಎಂ ಚೌವ್ಹಾಣ್ ಗೆಲುವಿನ ಅಂತರ ಎಷ್ಟು?
ಭೋಪಾಲ್, ಡಿಸೆಂಬರ್ 03; ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆ 2023ರ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರ ಪಡೆದಿದೆ. ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಬುಧ್ನಿ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಭಾನುವಾರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ ನಡೆಯಿತು. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಸಂಜೆ 5.40ರ ವೇಳೆಗೆ ಬಿಜೆಪಿ 166, ಕಾಂಗ್ರೆಸ್ 63, ಇತರರು 1 ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ.

ರಾಜ್ಯದ ಆಡಳಿತ ಪಕ್ಷ ಬಿಜೆಪಿ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ 5ನೇ ಬಾರಿಗೆ ಸರ್ಕಾರ ರಚನೆ ಮಾಡಲಿದೆ. 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 116.
ಚೌವ್ಹಾಣ್ ಗೆಲುವು; ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಬುಧ್ನಿ ಕ್ಷೇತ್ರದಲ್ಲಿ 1,64,951 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 104974 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎದುರಾಳಿಯಾದ ಕಾಂಗ್ರೆಸ್‌ನ ವಿಕ್ರಂ ಮಸ್ತಲ್ ಶರ್ಮಾ 59,997 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ಮೊದಲು ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ ಒಂದಾಗಿತ್ತು. ಈ ಬಾರಿ ರಾಜ್ಯದಲ್ಲಿ ದಾಖಲೆಯ 76.22ರಷ್ಟು ಮತದಾನವಾಗಿತ್ತು. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷ ಬಿಜೆಪಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಸುಳ್ಳಾಗಿಸಿ, ಸರ್ಕಾರ ರಚನೆ ಮಾಡಲಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಬುಧ್ನಿ ಕ್ಷೇತ್ರದಲ್ಲಿ 2ನೇ ಸುತ್ತಿನಲ್ಲಿ 7388, ಮೂರನೇ ಸುತ್ತಿನಲ್ಲಿ 17181, 4ನೇ ಸುತ್ತಿನಲ್ಲಿ 26452, 8ನೇ ಸುತ್ತಿನಲ್ಲಿ 61569, 10ನೇ ಸುತ್ತಿನಲ್ಲಿ 77688, 13ನೇ ಸುತ್ತಿನಲ್ಲಿ 100578, 17ನೇ ಸುತ್ತಿನಲ್ಲಿ 126899 ಮತಗಳ ಅಂತರವನ್ನು ಕಾಯ್ದುಕೊಂಡರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರು ಸಹ ಶಿವರಾಜ್ ಸಿಂಗ್ ಚೌವ್ಹಾಣ್ ಮುಖ್ಯಮಂತ್ರಿಯಾಗಲಿದ್ದಾರೆಯೇ? ಎಂಬುದನ್ನು ಕಾದು ನೋಡಬೇಕು. ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಹೆಸರು ಸಹ ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿದೆ.
ಶಿವರಾಜ್ ಸಿಂಗ್ ಚೌವ್ಹಾಣ್ ವಿರುದ್ಧ ಪಕ್ಷದಲ್ಲಿಯೇ ಅಸಮಾಧಾನವಿದೆ ಎಂಬ ಮಾತಿದೆ. ಅಲ್ಲದೇ ಬಿಜೆಪಿ ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಚುನಾವಣೆ ಎದುರಿಸಿದೆ. ಆದ್ದರಿಂದ ಮತ್ತೆ ಅವರನ್ನು ಸಿಎಂ ಮಾಡುವುದಿಲ್ಲ ಎಂಬ ಮಾತಿದೆ.












Click it and Unblock the Notifications