Madhya Pradesh; ಕಾಂಗ್ರೆಸ್ ಸೋಲು ಮತ್ತು ಕಮಲ್ ನಾಥ್ ನಾಯಕತ್ವ!
ಭೋಪಾಲ್, ಡಿಸೆಂಬರ್ 05; ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. 230 ಸದಸ್ಯ ಬಲದ ವಿಧಾನಸಭೆಯಲ್ಲಿ 163 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮರಳಿ ಅಧಿಕಾರವನ್ನು ಪಡೆದಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿದ್ದವು. ನವೆಂಬರ್ 17ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಶೇ 76.22ರಷ್ಟು ದಾಖಲೆಯ ಮತದಾನವಾಗಿತ್ತು. ಚುನಾವಣೆಯಲ್ಲಿ ಬಿಜೆಪಿ 163, ಕಾಂಗ್ರೆಸ್ 66 ಮತ್ತು ಬಿಎಪಿ ಪಕ್ಷ 1 ಸ್ಥಾನದಲ್ಲಿ ಜಯಗಳಿಸಿದೆ.

ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಎಲ್ಲರೂ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಕಮಲ್ ನಾಥ್ ನಾಯಕತ್ವ ಕಾರಣ ಎಂದು ದೂರುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಅವರು ತಳ ಮಟ್ಟದ ಅಲೆಯನ್ನು ಅರಿಯಲು ವಿಫಲವಾದರೆ?. ಸದ್ಯದ ಮಾಹಿತಿ ಪ್ರಕಾರ ಪಕ್ಷದ ಹೈಕಮಾಂಡ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದೆ.
ಮೈತ್ರಿ ಮಾತುಕತೆ, ಸೀಟು ಹಂಚಿಕೆ; ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ದಿನವಾದ ಭಾನುವಾರವೇ ಹಲವು ನಾಯಕರು, ಕೆಲವು ರಾಷ್ಟ್ರೀಯ ನಾಯಕರು ಕಮಲ್ ನಾಥ್ ನೇತೃತ್ವದ ನಾಯಕತ್ವವನ್ನು ಟೀಕಿಸಿದ್ದರು.
ಶಿವಸೇನೆ (ಉದ್ಭವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಸಹ ಕಮಲ್ ನಾಥ್ ನೇತೃತ್ವದ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಚುನಾವಣೆಯಲ್ಲಿ INDIA ಮೈತ್ರಿಕೂಟದ ಪಕ್ಷಗಳು ಸೀಟು ಹಂಚಿಕೆಗೆ ಮನವಿ ಮಾಡಿದ್ದವು. ಆದರೆ ಕಮಲ್ ನಾಥ್ ಒಪ್ಪಿಗೆ ಕೊಡಲಿಲ್ಲ ಎಂಬುದು ಪ್ರಮುಖ ಆರೋಪವಾಗಿದೆ.
ರಾಷ್ಟ್ರಮಟ್ಟದ ಮೈತ್ರಿಕೂಟದ ಜೊತೆ ಕೆಲವು ಸೀಟುಗಳನ್ನು ಹಂಚಿಕೆ ಮಾಡಿಕೊಂಡಿದ್ದರೆ ಮಧ್ಯಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಇನ್ನೂ ಹೆಚ್ಚಿನ ಸ್ಥಾನಗಳನ್ನುಗಳಿಸುತ್ತಿತ್ತು ಎಂದು ಸಂಜಯ್ ರಾವತ್ ಹೇಳಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಸಮಾಜವಾದಿ ಪಕ್ಷದ ಜೊತೆ ಸೀಟು ಹಂಚಿಕೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ.
ರಾಜ್ಯದ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರಚಾರ ನಡೆಸಿದರು. ಆದರೆ ಕಾಂಗ್ರೆಸ್ ಸೋಲಿಗೆ ಕಮಲ್ ನಾಥ್ ಮುಖ್ಯವಾದ ಕಾರಣ ಎಂದು ಆರೋಪಿಸಲಾಗಿದೆ. ಮೈತ್ರಿಕೂಟದ ಅಡಿ ಸ್ಪರ್ಧೆ ಮಾಡಿದ್ದರೆ ಫಲಿತಾಂಶವೇ ಬೇರೆ ಇರುತ್ತಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
ಮಧ್ಯಪ್ರದೇಶದ ಸುಮಾರು 10-12 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಬಹಳಷ್ಟು ಪ್ರಭಾವ ಹೊಂದಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಪಕ್ಷಗಳ ಜೊತೆ ಸೀಟು ಹಂಚಿಕೊಳ್ಳಬಹುದಿತ್ತು. ಆದರೆ ಕಮಲ್‌ನಾಥ್ ಸೀಟು ಹಂಚಿಕೆ ಮಾಡಿಕೊಳ್ಳಲು ನಿರಾಕರಿಸಿದರು ಎಂಬುದು ಮೈತ್ರಿಕೂಟದ ಪ್ರಮುಖ ಪಕ್ಷಗಳ ಆರೋಪ.
ರಾಜ್ಯದಲ್ಲಿ ಆಡಳಿತ ಪಕ್ಷವಾಗಿದ್ದ ಬಿಜೆಪಿ ಚುನಾವಣೆಯಲ್ಲಿ ಸೋಲು ಕಾಣಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದವು. ಆದರೆ ಕಮಲ್ ನಾಥ್ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟ ರೂಪಿಸಲಿಲ್ಲ, ಜನರ ನಾಡಿ ಮಿಡಿತ ತಿಳಿಯುವಲ್ಲಿ ವಿಫಲರಾದರು ಎಂಬುದು ರಾಜ್ಯ ಕಾಂಗ್ರೆಸ್ ನಾಯಕರ ಆರೋಪವಾಗಿದೆ.












Click it and Unblock the Notifications