Madhya Pradesh: ಕೊಲೆ ಮಾಡಿ ಶವ ಫ್ರಿಡ್ಜ್‌ನಲ್ಲಿ ಇಟ್ಟ ಸೈಕೋ
ಮಧ್ಯಪ್ರದೇಶದ ದೇವಾಸ್‌ನಲ್ಲಿ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಲಿವ್-ಇನ್ ಸಂಗಾತಿಯನ್ನು ಕೊಲೆ ಮಾಡಿ ಶವವನ್ನು ಸುಮಾರು 6 ತಿಂಗಳ ಕಾಲ ಫ್ರಿಡ್ಜ್‌ನಲ್ಲಿ ಅಡಗಿಸಿಟ್ಟಿದ್ದಾನೆ. ಮಧ್ಯಪ್ರದೇಶದ ದೇವಾಸ್‌ನಲ್ಲಿರುವ ಬಾಡಿಗೆ ಕೋಣೆಯ ಫ್ರಿಡ್ಜ್‌ನಲ್ಲಿ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕೋಣೆಯ ಪಕ್ಕದಲ್ಲೇ ಇನ್ನೊಂದು ಕುಟುಂಬ ವಾಸಿಸುತ್ತಿದ್ದು ಇಂತಹ ಭಯಾನಕ ಘಟನೆಯ ಬಗ್ಗೆ ಅವರಿಗೆ ಯಾವುದೇ ಸುಳಿವು ಕೂಡ ಸಿಕ್ಕಿಲ್ಲ. ಜನವರಿ 10 ಶುಕ್ರವಾರ ಈ ವಿಷಯ ಬಹಿರಂಗವಾದಾಗ ಎಲ್ಲರೂ ಭಯಭೀತರಾಗಿದ್ದಾರೆ.
ಕೊಲೆ ಮಾಡಿ ಶವ ಫ್ರಿಡ್ಜ್‌ನಲ್ಲಿ ಇಟ್ಟ ಸೈಕೋ
ಹೌದು... ಪಿಂಕಿ ಪ್ರಜಾಪತಿ ಎಂಬುವವರೊಂದಿಗೆ ಸಂಜಯ್ ಪಾಟಿದಾರ್ ಎಂಬಾತ ಕಳೆದ ಐದು ವರ್ಷಗಳಿಂದ ಲಿವ್-ಇನ್ ಪಾರ್ಟ್‌ನರ್ ಆಗಿದ್ದ. ಕಳೆದ ವರ್ಷ ಪಿಂಕಿ ಮದುವೆ ಮಾಡಿಕೊಳ್ಳಲು ಪಾಟಿದಾರ್‌ನನ್ನು ಒತ್ತಾಯಿಸಿದಾಗ ಕೋಪಗೊಂಡ ಪಾಟಿದಾರ್ ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ಬಾಡಿಗೆ ಪಡೆದಿದ್ದ ಮನೆಯ ಫ್ರಿಡ್ಜ್‌ನಲ್ಲಿ ಸೀರೆ ಹಾಗೂ ಆಭರಣ ಧರಿಸಿದ ಫಿಂಕಿ ಶವವನ್ನು ಸುಮಾರು ಆರು ತಿಂಗಳ ಕಾಲ ಆರೋಪಿ ಪಾಟಿದಾರ್ ಬಚ್ಚಿಟ್ಟಿದ್ದಾನೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.

ಶವ ಸಿಕ್ಕಿದ್ದು ಹೇಗೆ?
ಉದ್ಯಮಿ ಧೀರೇಂದ್ರ ಶ್ರೀವಾಸ್ತವ ಅವರು ದೇವಾಸ್‌ನ ವೃಂದಾವನ ಧಾಮದಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ವಾಸವಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಅವರು ಕಳೆದ ಆರು ತಿಂಗಳಿನಿಂದ ದೇವಾಸ್್ನ ತಮ್ಮ ಮನೆ ತೊರೆದು ದುಬೈನಲ್ಲಿದ್ದಾರೆ. ಖಾಲಿಯಿಂದ ತಮ್ಮ ದೇವಾಸ್ ಮನೆಯನ್ನು ಬಾಡಿಗೆ ನೀಡಿದ್ದರು. ಧೀರೇಂದ್ರ ಶ್ರೀವಾಸ್ತವ ವಾಸವಿದ್ದ ದೇವಾಸ್ ಮನೆಯಲ್ಲಿ ಉಜ್ಜಯಿನಿಯ ಇಂಗೋರಿಯಾ ನಿವಾಸಿ ಬಲ್ವೀರ್ ರಜಪೂತ್ ಜುಲೈ 2024ರಲ್ಲಿ ನೆಲಮಹಡಿಯನ್ನು ಬಾಡಿಗೆಗೆ ಪಡೆದಿದ್ದರು.
ಇದಕ್ಕೂ ಮೊದಲು ಅಂದರೆ ಬಲ್ವೀರ್ ರಜಪೂತ್ ಅವರಿಗಿಂತ ಮೊದಲು ಸಂಜಯ್ ಪಾಟಿದಾರ್ ಎಂಬಾತ ಈ ಮನೆಯಲ್ಲಿ ವಾಸವಿದ್ದನು. ಈ ವ್ಯಕ್ತಿ ಜೂನ್ 2024ರಲ್ಲಿ ಈ ಮನೆಯನ್ನು ಖಾಲಿ ಮಾಡಿದ್ದನು. ಸಂಜಯ್ ಪಾಟಿದಾರ್ ತಾನು ಮನೆಯನ್ನು ಬಿಟ್ಟು ಹೋಗುವಾಗ ತಮ್ಮ ಫ್ರಿಡ್ಜ್ ಸೇರಿದಂತೆ ಕೆಲವು ವಸ್ತುಗಳನ್ನು ಕೋಣೆಯೊಂದರಲ್ಲಿ ಬಿಟ್ಟು ಹೋಗಿದ್ದರು. ಜೊತೆಗೆ ಆ ಕೋಣೆಗೆ ಮಾತ್ರ ಬೀಗ ಹಾಕಿ ಮನೆ ಖಾಲಿ ಮಾಡಿದ್ದರು. ಕೋಣೆ ಬೀಗ ಹಾಕಿದ್ದರಿಂದ ಹಾಗೂ ಫ್ರಿಡ್ಜ್ ಪವರ್ ಆನ್ ಆಗಿದ್ದರಿಂದ ಇಲ್ಲಿಯವರೆಗೆ ಫ್ರಿಡ್ಜ್‌ನಿಂದ ವಾಸನೆ ಬಂದಿರಲಿಲ್ಲ. ಕೋಣೆ ಬೀಗ ಹಾಕಿದ್ದರಿಂದ ಒಳಗೆ ಹೋಗಲು ಯಾರಿಗೂ ಕೂಡ ಸಾಧ್ಯವಾಗಿರಲಿಲ್ಲ.
ಸಂಜಯ್ ಪಾಟಿದಾರ್ ಮನೆ ಮಾಲೀಕನಿಗೆ ತನ್ನ ವಸ್ತುಗಳನ್ನು ಶೀಘ್ರದಲ್ಲೇ ವಾಪಸ್ ತೆಗೆದುಕೊಂಡು ಹೋಗುವುದಾಗಿ ಹೇಳುತ್ತಲೇ ಇದ್ದರು. ಅಲ್ಲದೆ ಕೊಳೆಯುತ್ತಿರುವ ಶವವನ್ನು ನೋಡಲು ಸಂಜಯ್ ಪಾಟಿದಾರ್ ಪ್ರತಿ 15 ದಿನಗಳಿಗೊಮ್ಮೆ ಮನೆಗೆ ಭೇಟಿ ನೀಡುತ್ತಿದ್ದರು. ಕೆಲವು ದಿನಗಳ ನಂತರ ಹೊಸ ಬಾಡಿಗೆದಾರ ಬಲ್ವೀರ್ ರಜಪೂತ್ ತನ್ನ ಕುಟುಂಬಕ್ಕೆ ಬೇರೆ ಕೊಠಡಿಗಳನ್ನು ಬಳಸಲು ಅವಕಾಶ ನೀಡುವಂತೆ ಮನೆಮಾಲೀಕರನ್ನು ವಿನಂತಿಸಿದರು.
ಫ್ರಿಡ್ಜ್‌ನಲ್ಲಿತ್ತು ಕೊಳೆತ ಶವ
ಭೂಮಾಲೀಕ ಧೀರೇಂದ್ರ ಶ್ರೀವಾಸ್ತವ ಇದಕ್ಕೆ ಒಪ್ಪಿಕೊಂಡರು. ಗುರುವಾರ ಜನವರಿ 9ರಂದು ಬಲ್ವೀರ್ ಕೋಣೆಯ ಬೀಗವನ್ನು ಒಡೆದು ನೋಡಿದಾಗ ಫ್ರಿಡ್ಜ್ ಕಾರ್ಯನಿರ್ವಹಿಸುತ್ತಿರುವುದನ್ನು ಕಂಡುಕೊಂಡರು. ಬಲ್ವೀರ್ ಫ್ರಿಡ್ಜ್ ಅನ್ನು ಬೆಳಿಗ್ಗೆ ತೆಗೆದು ಹಾಕಲು ಯೋಜನೆಯನ್ನು ಮಾಡಿ ಫ್ರಿಡ್ಜ್ ಪವರ್ ಆಫ್ ಮಾಡಿದ್ದಾರೆ. ಫ್ರಿಡ್ಜ್ ಪವರ್ ಬಟನ್ ಆಫ್ ಮಾಡಿದ್ದರಿಂದ ಶುಕ್ರವಾರ ಬೆಳಗಿನ ಹೊತ್ತಿಗೆ ತುಂಬಾ ಕೆಟ್ಟ ದುರ್ವಾಸನೆ ಬರಲು ಆರಂಭಿಸಿದೆ. ಇದರಿಂದ ಅನುಮಾನ ಬಂದ ಬಲ್ವೀರ್ ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ಫ್ರಿಡ್ಜ್ ಅನ್ನು ತೆಗೆದು ನೋಡಿದಾಗ ಕೊಳೆತ ಶವವೊಂದು ಕಂಡು ಬಂದಿದೆ.
ಮೃತ ದೇಹವನ್ನು ಹಾಳೆಯಲ್ಲಿ ಸುತ್ತಿಡಲಾಗಿತ್ತು. ಈ ಫ್ರಿಡ್ಜ್ ಸಂಜಯ್ ಪಾಟಿದಾರ್‌ಗೆ ಸಂಬಂಧಿಸಿದೆ ಎಂದು ತಿಳಿದ ಪೊಲೀಸರು ಶಂಕಿತ ಸಂಜಯ್ ಪಾಟಿದಾರ್‌ನಿಗೆ ಕರೆ ಮಾಡಿ ಬರಲು ಹೇಳಿದ್ದಾರೆ.
ಪಾಟಿದಾರ್ ಕೊಲೆ ರಹಸ್ಯ
ಪೊಲೀಸರು ನೆರೆಹೊರೆಯವರನ್ನು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಇದೇ ವೇಳೆ ನೆರೆಹೊರೆಯವರು ಅವನೊಂದಿಗೆ ಒಬ್ಬ ಮಹಿಳೆ ವಾಸಿಸುತ್ತಿದ್ದಳು. ಆದರೆ ಆ ಮಹಿಳೆ ಮಾರ್ಚ್ 2024ರಿಂದ ಕಾಣಿಸಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಪೊಲೀಸರಿಗೆ ಕೊಲೆ ಅನುಮಾನದ ಶಂಕೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಇದೇ ಮಾಹಿತಿ ಆಧಾರದ ಮೇಲೆ ಪೊಲೀಸರು ಸಂಜಯ್ ಪಾಟಿದಾರ್‌ನನ್ನು ಕರೆಸಿದ್ದಾರೆ. ಪಾಟಿದಾರ್ ಕರೆಸಿ ವಿಚಾರಿಸಿದಾಗ ಪಾಟಿದಾರ್ ಆಕೆ ತನ್ನ ಹೆತ್ತವರ ಮನೆಗೆ ಹೋಗಿರುವುದಾಗಿ ಹೇಳಿದ್ದಳು ಎಂದು ಸುಳ್ಳು ಹೇಳಿಕೆಯನ್ನು ನೀಡಿದ್ದನು.
ಪೊಲೀಸರು ತಮ್ಮದೇ ಶೈಲಿಯಲ್ಲಿ ಬಾಯಿ ಬಿಡಿಸಿದಾಗ ಪಾಟಿದಾರ್ ಬಾಯಿ ಬಿಟ್ಟಿದ್ದಾನೆ. ಕಳೆದ ಐದು ವರ್ಷಗಳಿಂದ ಪಾಟಿದಾರ್ ಆಕೆಯೊಂದಿಗೆ ಲಿವ್-ಇನ್ ಪಾರ್ಟ್‌ನರ್ ಆಗಿದ್ದರು. ಆಕೆ ಮದುವೆಗಾಗಿ ಒತ್ತಾಯಿಸಿದಾಗ ಆಕೆಯನ್ನು ಕೊಲೆ ಮಾಡಿರುವುದಾಗಿ ಪಾಟಿದಾರ್ ಒಪ್ಪಿಕೊಂಡಿದ್ದಾರೆ. ಈತನ ಗೆಳತಿಯನ್ನು ಪಿಂಕಿ ಪ್ರಜಾಪತಿ ಎಂದು ಗುರುತಿಸಲಾಗಿದೆ.
ಇಂತಹ ಘಟನೆಗಳು ದೇಶದಲ್ಲಿ ನಡೆದಿರುವುದು ಇದೇ ಮೊದಲು ಅಲ್ಲ. ಈ ಹಿಂದೆ ಕೂಡ ಇಂತಹ ಘಟನೆಗಳು ನಡೆದಿರುವುದು ಇದೆ. ಆದರೆ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಜನರನ್ನ ಬೆಚ್ಚಿಬೀಳಿಸಿದೆ.












Click it and Unblock the Notifications