Madhya Pradesh: ಬುಡಕಟ್ಟು ಜನಾಂಗದ ವ್ಯಕ್ತಿ ಮೇಲೆ ಗುಂಡು ಹಾರಿಸಿದ ಮಧ್ಯ ಪ್ರದೇಶದ ಬಿಜೆಪಿ ಶಾಸಕನ ಪುತ್ರ
ಇಂದೋರ್, ಆಗಸ್ಟ್ 04: ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬರ ಮೇಲೆ ಬಿಜೆಪಿ ಸ್ಥಳೀಯ ಮುಖಂಡನೊಬ್ಬ ಮೂತ್ರ ವಿಸರ್ಜಸಿದ ಪ್ರಕರಣ ಹಸಿಯಾಗಿರುವಾಗಲೇ ಮಧ್ಯಪ್ರದೇಶದಲ್ಲಿ ಮತ್ತೊಂದು ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಬಿಜೆಪಿ ಶಾಸಕರ ಪುತ್ರ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಆರೋಪಿಯನ್ನು ಶಾಸಕ ರಾಮ್ ಲಲ್ಲು ವೈಶ್ಯ ಅವರ ಪುತ್ರ 40 ವರ್ಷದ ವಿವೇಕಾನಂದ ವೈಶ್ಯ ಎಂದು ಗುರುತಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಸಿಂಗ್ರೌಲಿ) ಶಿವಕುಮಾರ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಶಾಸಕರ ಪುತ್ರನಾಗಿರುವ ಆರೋಪಿ ಸದ್ಯ ಮತ್ತೊಬ್ಬನ ಜತೆ ಪರಾರಿಯಾಗಿದ್ದಾನೆ. ಅವರನ್ನು ಸೆರೆ ಹಿಡಿದು ಕೊಟ್ಟವರಿಗೆ ತಲಾ 10,000 ರೂಪಾಯಿ ಬಹುಮಾನ ಘೋಷಿಸಿದ್ದೇವೆ ಎಂದು ಕುಮಾರ್ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ ಗುರುವಾರ ನಡೆದಿದೆ. ಆರೋಪಿಯು ತನ್ನ ಕಾರಿನಲ್ಲಿದ್ದಾಗ ಕ್ಷುಲ್ಲಕ ವಿಚಾರವಾಗಿ ವ್ಯಕ್ತಿಗಳ ಗುಂಪಿನೊಂದಿಗೆ ವಾಗ್ವಾದ ನಡೆಸಿದ್ದನು ಎಂದು ತಿಳಿದುಬಂದಿದೆ.
ಗುಂಡೇಟು ತಿಂದ ಸೂರ್ಯ ಕುಮಾರ್ ಖೈರ್ವಾರ್ ಅವರು ಸಂಜೆ 5.30 ರ ಸುಮಾರಿಗೆ ದಿನಸಿ ಖರೀದಿಸಲು ಸ್ಥಳೀಯ ಕಿರಣ ಅಂಗಡಿಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಖೈರ್ವಾರ್ ಅವರನ್ನು ಅಡ್ಡಗಟ್ಟಿದ ಶಾಸಕರ ಪುತ್ರ ಗುಂಡು ಹಾರಿಸಿ ಪರಾರಿ ಆಗಿದ್ದಾನೆ. ಸೂರ್ಯ ಕುಮಾರ್ ಖೈರ್ವಾರ್ ಹಾಗೂ ಶಾಸಕರ ಪುತ್ರನ ನಡುವೆ ಬೆಳಗ್ಗೆ ವಾಗ್ವಾದಗಳಾಗಿದ್ದವು ಎಂದು ತಿಳಿದುಬಂದಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಕೋಲ್ ಇಂಡಿಯಾ ಉದ್ಯೋಗಿ ಖೈರ್ವಾರ್, 'ನನ್ನ ಸಹೋದರರು ಬೊಲೆರೊ ಕಾರಿನಲ್ಲಿ ಕುಳಿತಿದ್ದರು. ವಿವೇಕಾನಂದ ಸ್ವಿಫ್ಟ್ ಡಿಜೈರ್‌ನಲ್ಲಿದ್ದರು. ವಿವೇಕಾನಂದನ ಜೊತೆಯಲ್ಲಿದ್ದ ದೀಪಕ್ ಪಣಿಕ ಎಂಬಾತ ನನ್ನ ಸಹೋದರರೊಂದಿಗೆ ಜಗಳವಾಡಿದ್ದಾರೆ. ಕಾರುಗಳು ಹಾದುಹೋಗಲು ಸಾಧ್ಯವಾಗದೇ ಇರುವುದಕ್ಕೆ ಈ ಜಗಳ ಶುರುವಾಗಿದೆ. ಜಗಳ ಉಲ್ಬಣಗೊಂಡ ನಂತರ ನನ್ನ ಸಹೋದರರ ಮೇಲೆ ಹಲ್ಲೆ ಮಾಡಲಾಯಿತು. ನಾನು ಮಧ್ಯಪ್ರವೇಶಿಸಲು ಪ್ರಯತ್ನಿಸಿದೆ. ಆಗ ಅವರು ನನ್ನನ್ನು ಗುರುತಿಟ್ಟುಕೊಂಡು ಸ್ಥಳದಿಂದ ತೆರಳಿದರು' ಎಂದು ತಿಳಿಸಿದ್ದಾರೆ.
ಈ ಬಳಿಕ ಸಂಜೆ ನಾನು ಕಿರಾಣಿ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದೆ. ಶಾಸಕರ ಮಗ ವಿವೇಕಾನಂದ ಕಾರಿನಲ್ಲಿ ಬಂದು ನನ್ನನ್ನು ಅಡ್ಡಗಟ್ಟಿದ. ನನ್ನ ಮೇಲೆ ಗುಂಡು ಹಾರಿಸಿದ. ಕೆಟ್ಟ ಶಬ್ದಗಳಿಂದ ನನ್ನನ್ನು ನಿಂಧಿಸಿದ. ವಿವೇಕಾನಂದ ಬಂದೂಕು ಹಿಡಿದು ಕಾರಿನಲ್ಲಿ ಕುಳಿತಿರುವುದನ್ನು ನಾನು ಗಮನಿಸಿದೆ ಎಂದು ಹೇಳಿದ್ದಾರೆ.

ಗುಂಡು ಖೈರ್ವಾರ್ ಅವರ ಬಲಗೈಗೆ ತಗುಲಿದೆ. ಗುಂಡಿನ ಗಾಯದಿಂದ ರಕ್ತ ಸೋರುತ್ತಿದೆ ಎಂದು ಅವರು ಹೇಳಿದ್ದಾರೆ.
ನಾನೀಗ ಆಸ್ಪತ್ರೆಯಲ್ಲಿ ಇದ್ದೇನೆ. ಶಾಸಕರ ಮಗನಾಗಿರುವುದರಿಂದ ಪೊಲೀಸರು ನನ್ನ ಪ್ರಕರಣವನ್ನು ಪ್ರಾಮಾಣಿಕವಾಗಿ ತನಿಖೆ ಮಾಡುತ್ತಾರೆ ಎಂಬ ನಂಬಿಕೆ ನನಗಿಲ್ಲ ಎಂದು ಅವರು ನೋವು ಹಂಚಿಕೊಂಡಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‌ಗಳು ಮತ್ತು ಸೆಕ್ಷನ್ 25 (ಯಾವುದೇ ನಿಷೇಧಿತ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಅಥವಾ ಸಾಗಿಸುವುದು) ಮತ್ತು 27 (ಶಸ್ತ್ರಾಸ್ತ್ರಗಳ ಬಳಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಹೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಜುಲೈ 20 ರಂದು ವಿವೇಕಾನಂದ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಗುಂಡು ಹಾರಿಸಿದ್ದನೆಂದು ಎಎಸ್ಪಿ ತಿಳಿಸಿದ್ದಾರೆ.
ಈ ಮಧ್ಯೆ ರಾಜ್ಯದಲ್ಲಿ ಆದಿವಾಸಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಇತ್ತೀಚೆಗೆ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರ ಮೇಲೆ ಪಕ್ಷದೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆಯನ್ನು ಉಲ್ಲೇಖಿಸಿದೆ.












Click it and Unblock the Notifications