ಮಧ್ಯಪ್ರದೇಶ; ನ.17ರಂದು ಮತದಾನ, 5 ಪ್ರಮುಖ ಕ್ಷೇತ್ರಗಳು
ಭೋಪಾಲ್, ನವೆಂಬರ್ 16: ಮಧ್ಯಪ್ರದೇಶ ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಒಟ್ಟು ಮತದಾರರು 5,60,60,925. ಮತ ಎಣಿಕೆ ಡಿಸೆಂಬರ್ 3ರಂದು ನಡೆಯಲಿದೆ.
ಶುಕ್ರವಾರ ಬೆಳಗ್ಗೆ 7 ಗಂಟೆಗೆ 230 ವಿಧಾಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗುತ್ತಿದೆ. ಚುನಾವಣ ಆಯೋಗ ಶಾಂತಿಯುತ ಮತದಾನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಂದು ಮತಗಟ್ಟೆಗೆ ನಾಲ್ವರು ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಗುರುವಾರ ಸಂಜೆಯೇ ಸಿಬ್ಬಂದಿ ಮತಗಟ್ಟೆ ತಲುಪಲಿದ್ದಾರೆ.

ಮಧ್ಯಪ್ರದೇಶ ರಾಜ್ಯದ ಒಟ್ಟು ಮತದಾರರು 5,60,60,925. ಇವರಲ್ಲಿ ಪುರುಷರು 2,88,25,607. ಮಹಿಳೆಯರು 2,72,33,945 ಮತ್ತು ಇತರ ಮತದಾರರು 1,373. ಹಿರಿಯ ನಾಗರಿಕ ಮತದಾರರು 6,53,640 ಮತ್ತು ದಿವ್ಯಾಂಗ ಮತದಾರರು 5,05,146. 99 ಎನ್‌ಆರ್‌ಐ ಮತದಾರರು ಸಹ ಈ ಬಾರಿಯ ಚುನಾವಣೆಯಲ್ಲಿ ಹಕ್ಕು ಚಲಾಯಿಸುವ ಅಧಿಕಾರ ಹೊಂದಿದ್ದಾರೆ. ಚುನಾವಣೆಯಲ್ಲಿ ಈ ಬಾರಿ 22.36 ಲಕ್ಷ ಹೊಸ ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ.
5 ಪ್ರಮುಖ ಕ್ಷೇತ್ರಗಳು; ಈ ಬಾರಿಯ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 5 ಕ್ಷೇತ್ರಗಳ ಫಲಿತಾಂಶ ವಿವಿಧ ಕಾರಣಗಳಿಗೆ ಕುತೂಹಲಕ್ಕೆ ಕಾರಣವಾಗಿದೆ. ಚಿಂದ್ವಾರಾ, ಇಂಧೋರ್-1, ಬುಧ್ನಿ, ನರ್‌ಸಿಂಗ್‌ಪುರ್, ಲಾಹರ್ ಮತ್ತು ದಾಟಿಯಾ ಕ್ಷೇತ್ರಗಳು ಚುನಾವಣೆಯಲ್ಲಿ ದೇಶದ ಗಮನ ಸೆಳೆದಿವೆ.
ಚಿಂದ್ವಾರಾ ಕ್ಷೇತ್ರವನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್ ನಾಥ್ ಪ್ರತಿನಿಧಿಸುತ್ತಾರೆ. ಬಿಜೆಪಿಯ ವಿವೇಕ್ ಬಂಟಿ ಸಾಹೂ ಇಲ್ಲಿ ಬಿಜೆಪಿ ಅಭ್ಯರ್ಥಿ. 2018ರಲ್ಲಿ ಕಮಲ್ ನಾಥ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಕ್ಷೇತ್ರವಿದು.
ಇಂಧೋರ್-1 ಕ್ಷೇತ್ರದಲ್ಲಿ ಬಿಜೆಪಿಯ ಕೈಲಾಶ್ ವಿಜಯವರ್ಗೀಯಾ ಮತ್ತು ಕಾಂಗ್ರೆಸ್‌ನ ಸಂಜಯ್ ಶುಕ್ಲಾ ಎದುರಾಳಿಗಳು. ಮೊದಲು ಬಿಜೆಪಿಯ ವಶದಲ್ಲಿದ್ದ ಕ್ಷೇತ್ರವನ್ನು 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಂಜಯ್ ಶುಕ್ಲಾ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಬುಧ್ನಿ ಕ್ಷೇತ್ರ ರಾಜ್ಯದ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಪ್ರತಿನಿಧಿಸುವ ಕ್ಷೇತ್ರವಾಗಿದೆ. ಕಾಂಗ್ರೆಸ್‌ನ ವಿಕ್ರಂ ಮಸ್ತಲ್ ಇಲ್ಲಿ ಮುಖ್ಯಮಂತ್ರಿಗಳಿಗೆ ಎದುರಾಳಿ. 2008ರಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ್ ಗೆಲುವು ಕಂಡಿದ್ದಾರೆ.
ನರ್‌ಸಿಂಗ್‌ಪುರ್ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅಭ್ಯರ್ಥಿ. ಬಿಜೆಪಿ ಕೇಂದ್ರ ಸಚಿವರನ್ನು ಏಕೆ ವಿಧಾನಸಭೆ ಚುನಾವಣಾ ಕಣಕ್ಕೆ ಇಳಿಸಿದೆ? ಎಂಬುದು ಕುತೂಹಲ. ಲಖನ್ ಸಿಂಗ್ ಪಟೇಲ್ ಕಾಂಗ್ರೆಸ್‌ನಿಂದ ಎದುರಾಳಿ. ಈ ಮೊದಲು ಕ್ಷೇತ್ರವನ್ನು ಪ್ರಹ್ಲಾದ್ ಸಿಂಗ್ ಪಟೇಲ್ ಸಹೋದರ ಜಲಮ್ ಸಿಂಗ್ ಪಟೇಲ್ ಪ್ರತಿನಿಧಿಸುತ್ತಿದ್ದರು.
ಲಾಹರ್ ಕ್ಷೇತ್ರ ಕಾಂಗ್ರೆಸ್‌ನ ಗೋವಿಂದ್ ಸಿಂಗ್ ಅವರ ವಶದಲ್ಲಿದೆ. 2018ರ ಚುನಾವಣೆಯಲ್ಲಿ ಅವರು ಜಯಗಳಿಸಿದ್ದಾರೆ. ಅಂಬರೀಶ್ ಶರ್ಮಾ ಬಿಜೆಪಿಯ ಅಭ್ಯರ್ಥಿ. ವಿವಿಧ ಕಾರಣಕ್ಕಾಗಿ ಇಲ್ಲಿನ ಚುನಾವಣೆ ಗಮನ ಸೆಳೆದಿದೆ.
ದಾಟಿಯಾ ಕ್ಷೇತ್ರವನ್ನು ಬಿಜೆಪಿಯ ನರೋತ್ತಮ್ ಶರ್ಮಾ ಪ್ರತಿನಿಧಿಸುತ್ತಾರೆ. 2018ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಅವದೇಶ್ ನಾಯಕ್ ಸೋಲಿಸಿದ್ದರು. ಈ ಚುನಾವಣೆಯಲ್ಲಿಯೂ ಸಹ ಇಬ್ಬರೂ ಎದುರಾಳಿಗಳು.












Click it and Unblock the Notifications