ಮಧ್ಯಪ್ರದೇಶ ಚುನಾವಣೆ; ಕಣದಲ್ಲಿರುವ ಮಾಜಿ ಸಿಎಂಗಳ ಮಕ್ಕಳು!
ಭೋಪಾಲ್, ನವೆಂಬರ್ 14: ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರಂದು ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆಯಲ್ಲಿ ನೇರ ಎದುರಾಳಿಗಳು. ಎರಡೂ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ.
ಈ ಬಾರಿಯ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಚುನಾವಣೆಯಲ್ಲಿ ಯಾರ ಅದೃಷ್ಟ ಖುಲಾಯಿಸಿದೆ? ಎಂಬುದು ತಿಳಿಯಲಿದೆ.

ಯಾರು, ಯಾರು ಕಣದಲ್ಲಿ?; ಗುಣ ಜಿಲ್ಲೆಯ ರಘೋಗಢ್ ಕ್ಷೇತ್ರದಿಂದ ಕಾಂಗ್ರೆಸ್‌ನ ಜೈವರ್ಧನ್ ಸಿಂಗ್ ಅಭ್ಯರ್ಥಿ. ಈ ಕ್ಷೇತ್ರ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಕುಟುಂಬದ ಪ್ರಭಾವ ಇರುವ ಕ್ಷೇತ್ರ. ಕಾಂಗ್ರೆಸ್ ಪಕ್ಷ ದಿಗ್ವಿಜಯ್ ಸಿಂಗ್ ಪುತ್ರ ಜೈವರ್ಧನ್ ಸಿಂಗ್‌ಗೆ ಮತ್ತೆ ಚುನಾವಣೆಯ ಟಿಕೆಟ್ ನೀಡಿದೆ. ಬಿಜೆಪಿಯ ಹಿರೇಂದರ್ ಸಿಂಗ್ ಎದುರಾಳಿ. ಜೈವರ್ಧನ್ ಸಿಂಗ್ 2013ರಲ್ಲಿ 46,697 ಮತಗಳ ಅಂತರದಲ್ಲಿ ಗೆದ್ದಿದ್ದರು. 2018ರ ಚುನಾವಣೆಯಲ್ಲಿ 64,000 ಮತಗಳನ್ನು ಪಡೆದು ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆದಿದ್ದರು.
ಧ್ರುವ ನಾರಾಯಣ್ ಸಿಂಗ್ (ಬಿಜೆಪಿ). ಭೋಪಾಲ್ ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. 1967 ರಿಂದ 1969ರ ತನಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗೋವಿಂದ ನಾರಾಯಣ್ ಸಿಂಗ್ ಪುತ್ರ. 2008ರಲ್ಲಿ ಧ್ರುವ ನಾರಾಯಣ್ ಸಿಂಗ್ ಕ್ಷೇತ್ರದಲ್ಲಿ ಗೆದ್ದಿದ್ದರು. ಆದರೆ 2013ರಲ್ಲಿ ಟಿಕೆಟ್ ಕೈ ತಪ್ಪಿತ್ತು. ಕಾಂಗ್ರೆಸ್‌ನ ಆರಿಫ್ ಮಸೂದ್ ಎದುರಾಳಿ.
ದೀಪಕ್ ಜೋಶಿ (ಕಾಂಗ್ರೆಸ್). 2023ರಲ್ಲಿ ಕಾಂಗ್ರೆಸ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ದೀಪಕ್ ಜೋಶಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕೈಲಾಶ್ ಜೋಶಿ ಪುತ್ರ. ತಂದೆ 1977 ರಿಂದ 1978ರ ತನಕ ಮುಖ್ಯಮಂತ್ರಿಯಾಗಿದ್ದರು. ಕಾಟೇಗಾಂವ್ ಕ್ಷೇತ್ರದಲ್ಲಿ ಬಿಜೆಪಿಯ ಎರಡು ಬಾರಿಯ ಶಾಸಕ ಆಶಿಶ್ ಗೋವಿಂದ್ ಶರ್ಮಾರನ್ನು ಎದುರಿಸುತ್ತಿದ್ದಾರೆ. ಬಾಗ್ಲಿ ಕ್ಷೇತ್ರದಲ್ಲಿ 2003ರಲ್ಲಿ ಬಿಜೆಪಿ ಟಿಕೆಟ್‌ನಿಂದ ಗೆಲ್ಲುವ ಮೂಲಕ ದೀಪಕ್ ಜೋಶಿ ರಾಜಕೀಯಕ್ಕೆ ಬಂದರು.
ಅಜಯ್ ಸಿಂಗ್ (ಕಾಂಗ್ರೆಸ್). ರಾಜ್ಯದ ಮಾಜಿ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಪುತ್ರ ಅಜಯ್ ಸಿಂಗ್. ವಿಂದ್ಯ ಪ್ರದೇಶ ಭಾಗದ ಚೌರಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. 1985ರಲ್ಲಿ ಅಜಯ್ ಸಿಂಗ್ ರಾಜಕೀಯಕ್ಕೆ ಬಂದರು. ತಂದೆ ಸಂಸತ್ ಸದಸ್ಯರಾದ ಬಳಿಕ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೆದ್ದರು. 1991, 1993 ಮತ್ತು 1998ರಲ್ಲಿ ಕ್ಷೇತ್ರದಲ್ಲಿ ಗೆದ್ದರು. 2003, 2003, 2013ರಲ್ಲಿ ಗೆದ್ದರು. 2018ರಲ್ಲಿ ಬಿಜೆಪಿಯ ಶರಮೇಂದ್ರು ತಿವಾರಿ 6402 ಮತಗಳಲ್ಲಿ ಅಜಯ್ ಸಿಂಗ್ ಸೋಲಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಘಟಾನುಘಟಿ ನಾಯಕರು ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದ ಒಟ್ಟು ಮತದಾರರು 5,60,60,925. ಇವರಲ್ಲಿ ಪುರುಷರು 2,88,25,607. ಮಹಿಳೆಯರು 2,72,33,945 ಮತ್ತು ಇತರ ಮತದಾರರು 1,373.
ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿವೆ. ರಾಹುಲ್ ಗಾಂಧಿ ಪಕ್ಷಕ್ಕೆ 150 ಸೀಟುಗಳನ್ನು ನೀಡುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ಜನರಿಗೆ ನೀಡಿವೆ.
ರಾಜ್ಯದ ಹಾಳಿ ಆಡಳಿತ ಪಕ್ಷ ಬಿಜೆಪಿ. ಶಿವರಾಜ್ ಸಿಂಗ್ ಚೌವ್ಹಾಣ್ ಮುಖ್ಯಮಂತ್ರಿಗಳು. ಆದರೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ ರಾಜ್ಯದಲ್ಲಿ ಆಡಳಿತ ವಿರೋಧದಿ ಅಲೆ ಜೋರಾಗಿದೆ. ಬಿಜೆಪಿ ಸಹ ಸಂಸದರು, ಕೇಂದ್ರ ಸಚಿವರನ್ನು ಚುನಾವಣಾ ಕಣಕ್ಕೆ ಇಳಿಸಿ ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಘೋಷಣೆ ಮಾಡದೇ ಬಿಜೆಪಿ ಚುನಾವಣೆಯನ್ನು ಎದುರಿಸುತ್ತಿದೆ.












Click it and Unblock the Notifications