ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣಕ್ಕೆ ಒಂದೇ ಹಂತ, ಛತ್ತೀಸ್‌ಗಢದಲ್ಲಿ 2 ಹಂತದ ಚುನಾವಣೆ ಸಾಧ್ಯತೆ
ನವದೆಹಲಿ, ಅಕ್ಟೋಬರ್ 06: ದೇಶದ ಐದು ರಾಜ್ಯಗಳಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ ವಿಧಾನಸಭೆಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ದತೆ ನಡೆಸಿದೆ. ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಸಲು ಆಯೋಗ ಯೋಜಿಸುತ್ತಿದೆ. ಡಿಸೆಂಬರ್ 10 ರಿಂದ 15ರ ನಡುವೆ ಮತ ಎಣಿಕೆ ನಡೆಯಲಿದೆ ಎಂದು ವರದಿಯಾಗಿದೆ.
ಛತ್ತೀಸ್‌ಗಢದಲ್ಲಿ ಎರಡು ಹಂತದ ಮತದಾನವನ್ನು ನಡೆಸಲಿದ್ದು, ಇತರ ನಾಲ್ಕು ರಾಜ್ಯಗಳಾದ ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಮತ್ತು ಮಿಜೋರಾಂಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಚುನಾವಣಾ ಆಯೋಗ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ.
ಈ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ಮೂಲಗಳು ಹೇಳಿವೆ.
ಶೀಘ್ರದಲ್ಲೇ ಅಧಿಕೃತ ಘೋಷಣೆಯನ್ನು ಮಾಡುವ ನಿರೀಕ್ಷೆ ಇದೆ. ಈ ವಿಚಾರವಾಗಿ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು ಮತ್ತು ಐದು ರಾಜ್ಯಗಳ ವೀಕ್ಷಕರ ನಡುವೆ ಸಭೆ ನಡೆಯುತ್ತಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಅಭ್ಯರ್ಥಿಗಳು ಉಚಿತ ಕೊಡುಗೆಗಳನ್ನು ಘೋಷಿಸುವುದನ್ನು ತಡೆಯುವ ಮಾರ್ಗಸೂಚಿಯನ್ನು ಸಹ ಚುನಾವಣಾ ಆಯೋಗವು ಚರ್ಚಿಸುತ್ತಿದೆ.
ಶುಕ್ರವಾರ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಭಟ್ತುಲಾಲ್ ಜೈನ್ ಅವರ ಮನವಿಗೆ ಪ್ರತಿಕ್ರಿಯೆಯಾಗಿ ಈ ನೋಟಿಸ್ ನೀಡಲಾಗಿದೆ. ಭಟ್ತುಲಾಲ್ ಜೈನ್ ಅವರು ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಚುನಾವಣೆಗೆ ಮುನ್ನ ನಗದು ಮತ್ತು ಉಚಿತ ವಸ್ತುಗಳನ್ನು ಹಂಚುವುದಕ್ಕಿಂತ ಕ್ರೂರವಾದ ನಡೆ ಮತ್ತೊಂದಿಲ್ಲ ಎಂದು ಹೇಳಿದ್ದರು. ಇದು ಪ್ರತಿ ಚುನಾವಣೆಗೂ ಮುನ್ನ ನಡೆಯುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಹಣಬಲ, ಉಚಿತ ಹಂಚುವಿಕೆಯ ಮೇಲೆ ಚುನಾವಣಾ ಆಯೋಗ ತೀವ್ರ ನಿಗಾವಹಿಸಲಿದೆ.
ದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗ ಸಂಪೂರ್ಣ ಬದ್ಧವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಗುರುವಾರ ತೆಲಂಗಾಣದಲ್ಲಿ ಚುನಾವಣಾ ಸಿದ್ಧತೆಯ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ತೆಲಂಗಾಣದಲ್ಲಿ ಚುನಾವಣಾ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಲು ಚುನಾವಣಾ ಆಯೋಗದ 17 ಸದಸ್ಯರ ತಂಡವು ಹೈದರಾಬಾದ್‌ಗೆ ಭೇಟಿ ನೀಡಿದೆ. ತೆಲಂಗಾಣದಲ್ಲಿ ಒಟ್ಟು 3.17 ಕೋಟಿ ಮತದಾರರಿದ್ದು, ಪುರುಷರು ಮತ್ತು ಮಹಿಳೆಯರು ಸಮಾನ ಸಂಖ್ಯೆಯಲ್ಲಿದ್ದಾರೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ. ನಗರ ಪ್ರದೇಶಗಳಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವಂತೆ ರಾಜೀವ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.












Click it and Unblock the Notifications