Rahul Gandhi: ಕರ್ನಾಟಕದ ಲೋಕಸಭಾ ಚುನಾವಣೆಯಲ್ಲೂ ಕಳ್ಳಾಟ : ರಾಹುಲ್ ಗಾಂಧಿ ಹೇಳಿದ ಆ ಕ್ಷೇತ್ರ ಯಾವುದು?
ನವದೆಹಲಿ, ಜುಲೈ 23: 2024 ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಂತೆ ಕರ್ನಾಟಕದ ಚುನಾವಣೆಯಲ್ಲೂ ಕಳ್ಳತನ ನಡೆದಿದೆ. ಇದನ್ನ ನಮ್ಮ ಕಾಂಗ್ರೆಸ್ ಟೀಂ ಚುನಾವಣಾ ಆಯೋಗದ ಕಳ್ಳಾಟವನ್ನು ಬಯಲು ಮಾಡಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು(ಬುಧವಾರ) ಸಂಸತ್ ಬಳಿ ಬಿಹಾರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ವಿರುದ್ಧ ಪ್ರತಿಭಟನೆ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ರಾಹುಲ್ ಗಾಂಧಿ ಅವರು ಉತ್ತರಿಸಿದ್ದು, ಇದು ಕೇವಲ ಬಿಹಾರ ಪ್ರಕರಣಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಮಹಾರಾಷ್ಟ್ರದಲ್ಲೂ ಚುನಾವಣೆ ವಂಚನೆ ನಡೆಸಿದೆ. ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿ ಮತ್ತು ವಿಡಿಯೋ ದಾಖಲೆ ನೀಡಲು ನಿರಾಕರಿಸಿತ್ತು. ಈ ಬಗ್ಗೆ ಕಾಂಗ್ರೆಸ್ ಪತ್ತೆಹಚ್ಚಿದ ಕಾರ್ಯವಿಧಾನವೇ ಚುನಾವಣಾ ಆಯೋಗವನ್ನು ಬಿಹಾರದಲ್ಲಿ ಅದನ್ನು ಬದಲಾಯಿಸಲು ಪ್ರೇರೇಪಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ.

ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲೂ ಚುನಾವಣೆ ಕಳ್ಳಾಟ ನಡೆದಿದೆ. ಸದ್ಯದಲ್ಲೇ ಬ್ಲ್ಯಾಕ್ ಎಂಡ್ ವೈಟ್ ಆಗಿ ಮಾಧ್ಯಮ ಮತ್ತು ಕೇಂದ್ರ ಚುನಾವಣಾ ಆಯೋಗದ ಮುಂದೆ ಸತ್ಯವನ್ನು ತೆರೆದಿಡುತ್ತೇನೆ ಎನ್ನುವ ಹೊಸ ಬಾಂಬ್ ಅನ್ನು ಸಿಡಿಸಿದ್ದಾರೆ. ಹಿಂದೂಸ್ಥಾನದಲ್ಲಿ ಚುನಾವಣೆಯಲ್ಲಿ ಕಳ್ಳಾಟ ನಡೆಯುತ್ತಿದೆ. ಮಹಾರಾಷ್ಟ್ರದ ವಿಚಾರದಲ್ಲಿ ನಾವು ಗಂಭೀರ ಆರೋಪವನ್ನು ಮಾಡಿದ್ದೆವು. ವೋಟರ್ ಲಿಸ್ಟ್ ತೋರಿಸುವಂತೆ ನಾವು ಮನವಿ ಮಾಡಿದ್ದೆವು, ನಮ್ಮ ಮನವಿಗೆ ಚುನಾವಣಾ ಆಯೋಗ ಕಿವಿಗೊಡಲಿಲ್ಲ ಎಂದು ಆರೋಪಿಸಿದ್ದಾರೆ.
ಇದು ಬರೀ ಮಹಾರಾಷ್ಟ್ರದ ವಿಷಯ ಮಾತ್ರವಲ್ಲ, ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಚುನಾವಣಾ ಅಕ್ರಮ ನಡೆದಿದೆ. ಒಂದು ಕ್ಷೇತ್ರದಲ್ಲಿ ನಾವು ನಡೆಸಿದ ರಿಸರ್ಚ್ ಪ್ರಕಾರ, ಯಾವ ರೀತಿ ಕಳ್ಳಾಟ ಆಡಬೇಕು, ಹೇಗೆ ಆಡಬೇಕು ಎನ್ನುವುದನ್ನು ಕರ್ನಾಟಕದ ಕ್ಷೇತ್ರದ ಮೂಲಕ ಜನರ ಮತ್ತು ಕೇಂದ್ರ ಚುನಾವಣಾ ಆಯೋಗದ ಮುಂದೆ ಇಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಚುನಾವಣಾ ಪ್ರಕ್ರಿಯೆ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಿದ್ದೆವು. ಬೋಗಸ್ ವೋಟಿಂಗ್ ಬಗ್ಗೆ ಹೆಜ್ಜೆಹೆಜ್ಜೆಯ ಮಾಹಿತಿ ನಮಗೆ ಲಭ್ಯವಾಗಿದೆ. ಎಲ್ಲಾ ವಿಚಾರಗಳನ್ನು ಸದ್ಯದಲ್ಲೇ ಜನರ ಮುಂದೆ ಇಡಲಿದ್ದೇವೆ. ಎಲ್ಲಾ ಕಳ್ಳಾಟ ಸದ್ಯದಲ್ಲೇ ಹೊರಬರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.












Click it and Unblock the Notifications