ಉ.ಪ್ರ. ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಎಸ್ ಪಿ ಮುನ್ನಡೆ, ಗದ್ದಲ
ಗೋರಖ್ ಪುರ್ (ಉತ್ತರ ಪ್ರದೇಶ), ಮಾರ್ಚ್ 14: ಇಲ್ಲಿನ ಗೋರಖ್ ಪುರ್ ಹಾಗೂ ಫುಲ್ ಪುರ್ ಲೋಕಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆ ಮತ ಎಣಿಕೆ ವೇಳೆ ಬುಧವಾರ ಭಾರೀ ಗದ್ದಲ ಎದ್ದಿದೆ. ಫಲಿತಾಂಶ ಪ್ರಕಟ ಆಗುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಮುನ್ನಡೆಯಲ್ಲಿದೆ.
ಈ ಕ್ಷೇತ್ರಗಳಲ್ಲಿ ಯೋಗಿ ಆದಿತ್ಯನಾಥ್ ಮತ್ತು ಕೇಶವ ಪ್ರಸಾದ್ ಮೌರ್ಯ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಚುನಾವಣೆ ಅಧಿಕಾರಿಗಳು ಮಾಧ್ಯಮಗಳನ್ನು ಮತ ಎಣಿಕೆ ಕೇಂದ್ರದ ಒಳಗೆ ಬಿಡುತ್ತಿಲ್ಲ ಎಂಬ ಕಾರಣಕ್ಕೆ ವಾಗ್ವಾದ ಏರ್ಪಟ್ಟಿದ್ದು, ಇದೇ ವಿಚಾರ ಲೋಕಸಭೆಯಲ್ಲಿ ಕೂಡ ಗದ್ದಲ ಎಬ್ಬಿಸಿದೆ.

ಮತ ಎಣಿಕೆ ಕೇಂದ್ರದೊಳಗೆ ಮಾಧ್ಯಮದವರನ್ನು ನಿಷೇಧಿಸಿದ ಕ್ರಮದ ವಿರುದ್ಧ ಸಮಾಜವಾದಿ ಪಕ್ಷದಿಂದ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಗೋರಖ್ ಪುರ್. ಅಲ್ಲಿ ಕೇಸರಿ ಪಕ್ಷಕ್ಕೆ ಹಿನ್ನಡೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ಕ್ಷೇತ್ರದಿಂದ ಸತತ ಐದು ಬಾರಿ ಯೋಗಿ ಆದಿತ್ಯನಾಥ್ ಸಂಸತ್ ಗೆ ಆಯ್ಕೆಯಾಗಿದ್ದರು.












Click it and Unblock the Notifications