ಎಲ್‌ಪಿಜಿ ಇ-ಕೆವೈಸಿ ಮಾಡಿಸದಿದ್ದರೆ ಕೈತಪ್ಪಲಿದೆ ಸಬ್ಸಿಡಿ, 14.2 ಕೆ.ಜಿ. ಗ್ಯಾಸ್ ಸಿಲಿಂಡರ್, ಇಲ್ಲಿದೆ ನೋಡಿ ಮಾಹಿತಿ
LPG: ಕೇಂದ್ರ ಸರ್ಕಾರವು ಗೃಹಬಳಕೆಯ ಎಲ್‌ಪಿಜಿ ಸಬ್ಸಿಡಿ ಗ್ರಾಹಕರಿಗೆ ಮಹತ್ವದ ಆದೇಶವನ್ನು ನೀಡಿದ್ದು, 2026ರ ಅಕ್ಟೋಬರ್ 1ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ಒಂದು ವೇಳೆ ನಿಯಮಿತ ಗಡುವಿನೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಅಂತಹ ಗ್ರಾಹಕರು ಏನೆಲ್ಲಾ ಕಳೆದುಕೊಳ್ಳಲಿದ್ದಾರೆ ಹಾಗೂ ಅವರ ಮುಂದಿನ ಪರಿಸ್ಥಿತಿ ಏನಾಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರು ಸಬ್ಸಿಡಿ ಸೌಲಭ್ಯವನ್ನು ಕಳೆದುಕೊಳ್ಳುವುದಷ್ಟೇ ಅಲ್ಲದೆ, ಎಂದಿನ 14.2 ಕೆ.ಜಿ. ದೊಡ್ಡ ಸಿಲಿಂಡರ್ ಪಡೆಯುವ ಅವಕಾಶವನ್ನೂ ಕಳೆದುಕೊಳ್ಳಲಿದ್ದಾರೆ. ಅಂತಹ ಕುಟುಂಬಗಳಿಗೆ ಸಬ್ಸಿಡಿ ರಹಿತ ಪ್ರಸ್ತುತ ಮಾರುಕಟ್ಟೆ ದರದಲ್ಲಿ ಕೇವಲ 5 ಕೆ.ಜಿ. ಅಥವಾ 10 ಕೆ.ಜಿ. ಸಾಮರ್ಥ್ಯದ ಸಣ್ಣ ಸಿಲಿಂಡರ್‌ಗಳನ್ನು ಮಾತ್ರ ಪೂರೈಸಲು ಪೆಟ್ರೋಲಿಯಂ ಸಚಿವಾಲಯ ತೀರ್ಮಾನ ಮಾಡಿದೆ.

ಎಲ್‌ಪಿಜಿ ಸಬ್ಸಿಡಿ ಯಾವಾಗ ಬಂದ್ ಆಗುತ್ತದೆ?
ಇ-ಕೆವೈಸಿ ಎಂದು ಕರೆಯಲ್ಪಡುವ ಈ ಬಯೋಮೆಟ್ರಿಕ್ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಷ್ಟಪಡದ ಅಥವಾ ಪೂರ್ಣಗೊಳಿಸಲು ಸಾಧ್ಯವಾಗದ ಗ್ರಾಹಕರಿಗೂ ಎಲ್‌ಪಿಜಿ ಪೂರೈಕೆಯನ್ನು ಮುಂದುವರೆಸಲಾಗುವುದು. ಆದರೆ, ಅಂತಹ ಗ್ರಾಹಕರಿಗೆ ಯಾವುದೇ ಸರ್ಕಾರಿ ಸಬ್ಸಿಡಿ ಲಭ್ಯವಿರುವುದಿಲ್ಲ ಮತ್ತು ಅವರು ಚಾಲ್ತಿಯಲ್ಲಿರುವ ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಪಡೆಯಬೇಕಾಗುತ್ತದೆ.
ಇ-ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ?
ಅಷ್ಟೇ ಅಲ್ಲದೆ ಇಂತಹ ಗ್ರಾಹಕರಿಗೆ ನಿಯಮಿತವಾಗಿ ನೀಡಲಾಗುವ 14.2 ಕೆಜಿ ತೂಕದ ದೊಡ್ಡ ಸಿಲಿಂಡರ್‌ಗಳು ಲಭ್ಯವಿರುವುದಿಲ್ಲ. ಬದಲಾಗಿ ತೈಲ ಮಾರುಕಟ್ಟೆ ಕಂಪನಿಗಳಲ್ಲಿ ಲಭ್ಯವಿರುವ ದಾಸ್ತಾನಿಗೆ ಅನುಗುಣವಾಗಿ ಅವರಿಗೆ 5 ಕೆಜಿ ಅಥವಾ 10 ಕೆಜಿ ಸಾಮರ್ಥ್ಯದ ಸಣ್ಣ ಸಿಲಿಂಡರ್‌ಗಳನ್ನು ಮಾತ್ರ ಪೂರೈಸಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ನಕಲಿ ಸಂಪರ್ಕಗಳು ಹಾಗೂ ವಾಣಿಜ್ಯ ಬಳಕೆಯ ಅಕ್ರಮ ದಂಧೆಗೆ ಸಂಪೂರ್ಣ ತಡೆ ಹಾಕಿ, ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ನೆರವು ಸಿಗುವಂತೆ ಮಾಡಲು ಈ ಕುಟ್ಟಿನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಕ್ರಮದ ಉದ್ದೇಶ ಏನು?
ಸಬ್ಸಿಡಿ ಸೋರಿಕೆಯನ್ನು ತಡೆಯುವುದು, ಅರ್ಹ ಫಲಾನುಭವಿಗಳಿಗೆ ಮಾತ್ರ ಆರ್ಥಿಕ ನೆರವು ತಲುಪಿಸುವುದು ಹಾಗೂ ವಾಣಿಜ್ಯ ದುರ್ಬಳಕೆಗೆ ಸಿಲಿಂಡರ್‌ಗಳು ಅಕ್ರಮವಾಗಿ ವರ್ಗಾವಣೆಯಾಗುವುದನ್ನು ತಡೆಯುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರಲಾಗುತ್ತಿದೆ.
ದೃಢೀಕರಣ ಮಾಡಿಸುವ ಸುಲಭ ವಿಧಾನಗಳು
* ಸಿಲಿಂಡರ್ ವಿತರಣೆ ಮಾಡುವ ಡೆಲಿವರಿ ಸಿಬ್ಬಂದಿ ತೈಲ ಕಂಪನಿಗಳ ಮೊಬೈಲ್ ಆ್ಯಪ್ ಬಳಸಿ ಸ್ಥಳದಲ್ಲೇ ಬಯೋಮೆಟ್ರಿಕ್ ವಿವರಗಳನ್ನು ಪರಿಶೀಲಿಸಬಹುದು.
* ಗ್ರಾಹಕರು ತಮ್ಮ ಸಮೀಪದ ಎಲ್‌ಪಿಜಿ ಗ್ಯಾಸ್ ಏಜೆನ್ಸಿಗೆ ಖುದ್ದಾಗಿ ಭೇಟಿ ನೀಡಿ ಬಯೋಮೆಟ್ರಿಕ್ ಇ-ಕೆವೈಸಿ ಪ್ರಕ್ರಿಯೆ ಪೂರೈಸಬಹುದು.
* ಗ್ರಾಹಕರು ಮನೆಯಲ್ಲೇ ಕುಳಿತು ಕಂಪನಿಗಳ ಅಧಿಕೃತ ಆ್ಯಪ್‌ಗಳ ಮೂಲಕ ಸ್ವತಂತ್ರವಾಗಿ ಸೆಲ್ಫ್ ಇ-ಕೆವೈಸಿ ಮಾಡಿಕೊಳ್ಳಬಹುದು. ಇಂಡೇನ್ ಗ್ರಾಹಕರು 'IndianOil ONE', ಭಾರತ್ ಗ್ಯಾಸ್ ಗ್ರಾಹಕರು 'HelloBPCL' ಮತ್ತು ಎಚ್‌ಪಿ ಗ್ಯಾಸ್ ಗ್ರಾಹಕರು 'HP PAY' ಆ್ಯಪ್‌ಗಳನ್ನು ಬಳಸಬಹುದು.
* ಗ್ರಾಹಕರಿಗೆ ಡಿಜಿಟಲ್ ಪರಿಶೀಲನೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಧಿಕೃತ ಪೋರ್ಟಲ್‌ನಲ್ಲಿ ವೀಡಿಯೊ ಟ್ಯುಟೋರಿಯಲ್‌ಗಳನ್ನು ಕೂಡ ಲಭ್ಯವಾಗಿಸಲಾಗಿದೆ.
ಇ-ಕೆವೈಸಿ ಗಡುವು ಹಲವು ಬಾರಿ ವಿಸ್ತರಣೆ
ನಗರ ಮತ್ತು ಗ್ರಾಮೀಣ ಭಾಗಗಳ ಎಲ್ಲಾ ಗ್ರಾಹಕರನ್ನು ಒಳಗೊಳ್ಳುವ ಸಲುವಾಗಿ ಈ ನಿಯಮವನ್ನು ಹಲವು ಬಾರಿ ವಿಸ್ತರಿಸಲಾಗಿತ್ತು. ಆರಂಭದಲ್ಲಿ 2026ರ ಜೂನ್ 30 ಅನ್ನು ಅಂತಿಮ ಗಡುವನ್ನಾಗಿ ನಿಗದಿ ಮಾಡಲಾಗಿತ್ತು. ನಂತರ ಅದನ್ನು ಜುಲೈ 31, ಆಗಸ್ಟ್ 7, ಆಗಸ್ಟ್ 15, ಆಗಸ್ಟ್ 23, ಆಗಸ್ಟ್ 31, ಸೆಪ್ಟೆಂಬರ್ 7 ಮತ್ತು ಸೆಪ್ಟೆಂಬರ್ 14 ರವರೆಗೆ ಹಂತ-ಹಂತವಾಗಿ ವಿಸ್ತರಣೆ ಮಾಡಲಾಗಿತ್ತು.
2023ರ ಅಕ್ಟೋಬರ್‌ನಿಂದಲೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶವ್ಯಾಪಿ ಬೃಹತ್ ಜಾಗೃತಿ ಅಭಿಯಾನವನ್ನು ನಡೆಸಿವೆ. ಈ ಅವಧಿಯಲ್ಲಿ 12 ಕೋಟಿಗೂ ಹೆಚ್ಚು ಎಸ್‌ಎಂಎಸ್ ಮತ್ತು ವಾಟ್ಸಾಪ್ ಸಂದೇಶಗಳನ್ನು ರವಾನಿಸಲಾಗಿದೆ. ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಮತ್ತು ಗ್ಯಾಸ್ ಏಜೆನ್ಸಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.


Click it and Unblock the Notifications
