ಯುವತಿಗೆ ಆ್ಯಸಿಡ್ ಕುಡಿಸಿ, ಸಮುದ್ರಕ್ಕೆ ತಳ್ಳಿದ ಪದವೀಧರ

ಜಿತೇಂದ್ರ ಸಖ್ ಪಾಲ್ (21) ಎಂಬ ಪಾಗಲ್ ಪ್ರೇಮಿ 17 ವರ್ಷದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ದಹಿಸರ್ ಉಪನಗರದ ನಿವಾಸಿಗಳಾದ ಈ ಪ್ರೇಮಿಗಳಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯುವತಿಯು ಜಿತೇಂದ್ರನನ್ನು ತೊರೆದಿದ್ದಳು. ಜಿತೇಂದ್ರ ಹೋಟೆಲ್ ಮ್ಯಾನೇಜ್ ಮೆಂಟ್ ಪದವೀಧರ.
ಜಿತೇಂದ್ರ ಹಲವು ಬಾರಿ ತನ್ನ ಪ್ರಿಯತಮೆಯನ್ನು ಪ್ರೇಮ ಭಿಕ್ಷೆ ಕೇಳಿದ್ದಾನೆ. ಆದರೆ ಮನೆಯವರಿಗಂಜಿದ ಆಕೆ ಜಿತೇಂದ್ರನ ಪ್ರೀತಿಯಿಂದ ವಿಮುಖಳಾಗಿದ್ದಾಳೆ. ಇದರಿಂದ ನೊಂದ ಜಿತೇಂದ್ರ, ಆಕೆಯನ್ನು ಹೊರವಲಯ ಬೊರಿವಿಲಿಯಲ್ಲಿ ಗೋರೆ ಜೆಟ್ಟಿ ಬಳಿ ಶನಿವಾರ ಸಂಜೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾನೆ.
ಅಲ್ಲಿ ಸಮುದ್ರತಟದಲ್ಲಿ ಇಬ್ಬರ ನಡುವೆ ಮಾತಿನ ಘರ್ಷಣೆ ನಡೆದಿದೆ. ಆಗ ಜಿತೇಂದ್ರ ಯುವತಿಯ ಬಾಯಿಗೆ ಬಲವಂತವಾಗಿ ಆ್ಯಸಿಡ್ ಹಾಕಿ, ಸಮುದ್ರಕ್ಕೆ ತಳ್ಳಿದ್ದಾನೆ. ಆಗ ಯುವತಿ ಕೂಗಿಕೊಂಡಿದ್ದಾಳೆ. ಅದನ್ನು ಕೇಳಿದ ಹಾದಿಹೋಕರು ಯುವತಿಯನ್ನು ಸಮುದ್ರದಿಂದ ಹೊರತೆಗೆದು, ಸಮೀಪದ ತುಂಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಿತೇಂದ್ರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಆಕೆಯ ಮುಖ, ತುಟಿ, ಬಾಯಿಗೆ ಗಾಯಗಳಾಗಿವೆ. ಜಿತೇಂದ್ರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications