ಪವನ ಪುತ್ರ ಹನುಮಾನ್ ಗೂ 'ಆಧಾರ್' ಕಾರ್ಡ್
ಸಿಕಾರ್(ರಾಜಸ್ಥಾನ), ಸೆ.11: ಶ್ರೀರಾಮಚಂದ್ರನ ಪರಮಭಕ್ತ ಪವನ ಪುತ್ರ ಹನುಮಾನ್ ಅಸ್ತಿತ್ವಕ್ಕೆ ಈಗ ಆಧಾರ ಸಿಕ್ಕಿದೆ. ಚಿರಂಜೀವಿಗಳಲ್ಲಿ ಒಬ್ಬನೆನಿಸಿರುವ ಭಾಗವತ ಹನುಮಾನ್ ಗೂ ನಮ್ಮ ಘನ ಸರ್ಕಾರ ಆಧಾರ್ ಕಾರ್ಡ್ ವಿತರಿಸಿದೆ. ಆದರೆ, ಯಾರೋ ಕಾರ್ಡ್ ಪಡೆದುಕೊಳ್ಳದ ಕಾರಣ ಬೆಂಗಳೂರಿನ ಕೇಂದ್ರ ಅಂಚೆ ಕಚೇರಿಯತ್ತ ಆಧಾರ್ ಕಾರ್ಡ್ ಮುಖ ಮಾಡಿದೆ.
ಹನುಮಾನ್ ದೇವರ ಭಾವಚಿತ್ರವಿರುವ ಆಧಾರ್ ಕಾರ್ಡ್ ಅಚ್ಚಾಗಿ ಒಂದು ವಿಳಾಸಕ್ಕೂ ರವಾನೆಯಾಗಿ ಅಲ್ಲಿ ಯಾರೋ ಇಲ್ಲದ ಕಾರಣ ವಾಪಸ್ ಅಂಚೆ ಕಚೇರಿ ಕಡೆ ಕಾರ್ಡ್ ಬರುತ್ತಿರುವ ಘಟನೆ ಜರುಗಿದೆ. ಹಿಂದೂಗಳ ಜನಪ್ರಿಯ ದೇವರಾದ ಹನುಮಾನ್ ಹೆಸರಿನಲ್ಲಿ ಅಚ್ಚಾಗಿರುವ ಆಧಾರ್ ಕಾರ್ಡ್ ನಲ್ಲಿ ಹನುಮಾನ್ s/0 ಪವನ್ ಎಂದು ನಮೂದಿಸಲಾಗಿದ್ದು, ಆಧಾರ್ ಕಾರ್ಡ್ ಸಂಖ್ಯೆ 2094705195411 ಎಂದು ನೀಡಲಾಗಿದೆ. ಜೊತೆಗೆ ಮೊಬೈಲ್ ಸಂಖ್ಯೆ, ಹನುಮಾನ್ ಬೆರಳಚ್ಚು ಕೂಡಾ ಇದೆ.

ಆಸ್ತಿಕರ ಕೈಗೆ ಈ ಆಧಾರ್ ಕಾರ್ಡ್ ಸಿಕ್ಕಿದ್ದರೆ ದೊಡ್ಡ ದೇಗುಲವೇ ನಿರ್ಮಾಣ ಮಾಡುತ್ತಿದ್ದರೋ ಏನೋ ಆದರೆ, ದಂತರಾಮ್ ಘರ್ ಎಂಬ ಊರು ತಲುಪಿದ ಕಾರ್ಡ್ ಪಡೆದುಕೊಳ್ಳಲು ಯಾರೋ ಇಲ್ಲದ ಕಾರಣ ಬೆಂಗಳೂರಿಗೆ ಸೆ.6ರಂದು ವಾಪಸ್ ಕಳಿಸಲಾಗಿದೆ.
ಹೀರಾ ಲಾಲ್ ಎಂಬ ಪೋಸ್ಟ್ ಮ್ಯಾನ್ ಹೀಗೊಂದು ಕಾರ್ಡ್ ನೋಡಿ ಅವಕ್ಕಾಗಿದ್ದಾರೆ. ನಂತರ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಾರ್ಡ್ ನಲ್ಲಿದ್ದ ಅಡ್ರೆಸ್ ನಲ್ಲಿ ಯಾರೂ ಇಲ್ಲದ ಕಾರಣ ಕೊನೆ ಪ್ರಯತ್ನ ಎಂಬಂತೆ ಅದರಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿದ್ದಾರೆ. ಅದರೆ, ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕಂಡು ಬಂದಿದೆ. ಹೀಗೆ ತನಿಖೆ ಮುಂದುವರೆಸಿದಾಗ ವಿಕಾಸ್ ಎಂಬುವವರು ಈ ಕಾರ್ಡ್ ತಯಾರಿಸಿದ್ದು ಎಂದು ತಿಳಿದು ಬಂದಿದೆ.












Click it and Unblock the Notifications