Maharashtra opinion poll: ಎನ್‌ಡಿಎಗೆ 'ಮಹಾ' ಆಘಾತ- ಚುನಾವಣಾ ಪೂರ್ವ ಸಮೀಕ್ಷೆಯ ಅಂಕಿಅಂಶ, ವಿವರ
2024ರ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲಾ ಪ್ರಮುಖ ಪಕ್ಷಗಳು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆಡಳಿತಾರೂಢ ಎನ್‌ಡಿಎ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದು, ಈ ಬಾರಿ ಆಘಾತ ಎದುರಾಗುವ ಸೂಚನೆ ಸಿಕ್ಕಿದೆ. ಲೋಕ್‌ಪೋಲ್ ಚುನಾವಣಾ ಪೂರ್ವ ಸಮೀಕ್ಷೆ ಇಂದು ಪ್ರಕಟವಾಗಿದ್ದು, ಎನ್‌ಡಿಎಗೆ ಹಿನ್ನಡೆಯಾಗಲಿದೆ ಎಂದು ಹೇಳಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಲೋಕ್‌ಪೋಲ್ ಬಹುತೇಕ ನಿಖರ ಅಂಕಿ ಅಂಶಗಳನ್ನು ನೀಡಿತ್ತು. ಲೋಕ್ ಪೋಲ್ ಸಮೀಕ್ಷೆಯಲ್ಲಿ ಹೇಳಿದ ಅಂಕಿಗಳಲ್ಲಿ ಅಲ್ಪ ವ್ಯತ್ಯಾಸವಾಗಿದ್ದರೂ, ಬೇರೆ ಸಮೀಕ್ಷೆಗಳಿಗಿಂತ ನಿಖರವಾಗಿತ್ತು. ಇದೇ ಕಾರಣಕ್ಕೆ ಇದೀಗ ಮಹಾರಾಷ್ಟ್ರ ವಿಧಾನಸಭೆ ಚುನಾವಣ ಪೂರ್ವ ಸಮೀಕ್ಷೆಯಲ್ಲಿ ಅವರು ನೀಡಿರುವ ಅಂಕಿ ಅಂಶ ಮಹತ್ವ ಪಡೆದುಕೊಂಡಿದೆ.

ಲೋಕ್ ಪೋಲ್ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿ 141 ರಿಂದ 154 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಅಂದಾಜಿಸಿದೆ. ಇನ್ನು ಆಡಳಿತಾರೂಢ ಎನ್‌ಡಿಎ 115 ರಿಂದ 128 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿದೆ. ಇತರೆ ಅಥವಾ ಸ್ವತಂತ್ರ ಅಭ್ಯರ್ಥಿಗಳು 5 ರಿಂದ 18 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದೆ.
288 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲು 145 ಸದಸ್ಯರ ಬಲ ಬೇಕಾಗಿದೆ. ಈ ಲೆಕ್ಕಾಚಾರದಲ್ಲಿ ಮಹಾ ವಿಕಾಸ ಅಘಾಡಿ ಸರಳ ಬಹುಮತ ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ. ಆದರೆ ಇಷ್ಟು ಸ್ಥಾನ ಪಡೆದರೆ ಸುಭದ್ರ ಸರ್ಕಾರ ರಚನೆ ಮಾಡುವುದು ಕಷ್ಟವಾಗುತ್ತದೆ. ಮತ್ತೊಮ್ಮೆ ರಾಜಕೀಯ ಹೈಡ್ರಾಮ ನಡೆಯುವ ಸಾಧ್ಯತೆ ಕೂಡ ಅಲ್ಲಗಳೆಯುವಂತಿಲ್ಲ.
ಲೋಕ್‌ಪೋಲ್ ಮಹಾರಾಷ್ಟ್ರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 500 ಮಾದರಿಗಳಂತೆ ಒಟ್ಟು 1.50 ಲಕ್ಷ ಜನರ ಅಭಿಪ್ರಾಯ ಸಂಗ್ರಹಿಸಿದೆ. ಚುನಾವಣೆಗೆ ಇನ್ನೂ ಎರಡು ತಿಂಗಳು ಬಾಕಿ ಇರುವ ಕಾರಣ ಜನಾಭಿಪ್ರಾಯ ಎತ್ತ ಕಡೆ ಬೇಕಾದರೂ ವಾಲಬಹುದಾಗಿದೆ. ಏಕನಾಥ್ ಶಿಂಧೆ ಅವರ ಸರ್ಕಾರ ಮಹಾರಾಷ್ಟ್ರದ ಜನರ ಮನಸ್ಸು ಗೆಲ್ಲುವಲ್ಲಿ ವಿಫಲವಾಗಿದೆ ಎನ್ನುವುದು ಮಾತ್ರ ಈ ಸಮೀಕ್ಷೆಯಿಂದ ಸಾಬೀತಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಲವು ಪ್ರಮುಖ ಬಿಜೆಪಿ ನಾಯಕರು ಈಗಾಗಲೇ ಮಹಾರಾಷ್ಟ್ರ ಚುನಾವಣೆಯತ್ತ ಗಮನ ಹರಿಸಿದ್ದಾರೆ. ಕಾಂಗ್ರೆಸ್ ಕೂಡ ಚುನಾವಣಾ ಅಖಾಡಕ್ಕೆ ಧುಮುಕಲಿದೆ.












Click it and Unblock the Notifications