ಬಿಜೆಪಿ ಕೇಂದ್ರ ಪದಾಧಿಕಾರಿಗಳ ತಂಡ, ಯುಪಿ ಮುಸ್ಲಿಮರ ಓಲೈಕೆ!
ನವದೆಹಲಿ, ಜುಲೈ 30; ಮುಂಬರುವ ಲೋಕಸಭೆ ಚುನಾವಣೆ ಮತ್ತು 5 ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಭಾರೀ ಬದಲಾವಣೆ ಮಾಡಿದೆ. ಪಕ್ಷದ ಕೇಂದ್ರ ಪದಾಧಿಕಾರಿಗಳ ತಂಡವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಶನಿವಾರ ಪುನರ್ ರಚನೆ ಮಾಡಿದ್ದಾರೆ. ಪಕ್ಷದ ಈ ನಡೆ ಉತ್ತರ ಪ್ರದೇಶದ ರಾಜಕೀಯದ ಮೇಲೆ ಹೇಗೆ ಪ್ರಭಾವ ಬೀರಲಿದೆ? ಎಂಬುದು ಎಲ್ಲರ ಪ್ರಶ್ನೆ.
2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಪದಾಧಿಕಾರಿಗಳ ತಂಡವನ್ನು ರಚನೆ ಮಾಡಿದೆ. 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದ ಹಲವು ಮುಸ್ಲಿಂ ನಾಯಕರನ್ನು ತಂಡಕ್ಕೆ ಸೇರಿಸಲಾಗಿದೆ. ಇದು ಮುಂದಿನ ಚುನಾವಣೆಯ ಲೆಕ್ಕಾಚಾರದ ಭಾಗವಾಗಿದೆ ಎಂಬುದು ವಿಶ್ಲೇಷಣೆಯಾಗಿದೆ.

ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಕುಲಪತಿ ತಾರಿಕ್ ಮುನ್ಸೂರ್ ಅವರು ಬಿಜೆಪಿ ಕೇಂದ್ರ ಪದಾಧಿಕಾರಿಗಳ ತಂಡವನ್ನು ಸೇರಿದ್ದಾರೆ. ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದು ಮುಸ್ಲಿಂಮರನ್ನು ಓಲೈಕೆ ಮಾಡುವ ತಂತ್ರವಾಗಿದೆ. ಅದರಲ್ಲೂ ಪ್ರಮುಖವಾಗಿ ಆಕರ್ಷಕ ವೋಟ್ ಬ್ಯಾಂಕ್ ಆಗಿರುವ ಪಸ್ಮಾಂಡ ಮುಸ್ಲಿಂಮರನ್ನು ಸೆಳೆಯಲು ಸಹಾಯಕವಾಗಿದೆ.
ಶೈಕ್ಷಣಿಕ ತಜ್ಞರು ಆಗಿರುವ ತಾರಿಕ್ ಮನ್ಸೂರ್ ಬಿಜೆಪಿಗೆ ಬಲ ತುಂಬುವ ನಿರೀಕ್ಷೆ ಇದೆ. ಅದರಲ್ಲೂ ಪಕ್ಷ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಪ್ರಯತ್ನ ನಡೆಸಯತ್ತಿರುವಾಗ ತಾರಿಕ್ ಮನ್ಸೂರ್ ಉಪಾಧ್ಯಕ್ಷರಾಗಿ ನೇಮಕಗೊಂಡಿರುವುದು ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ವಿಧಾನ ಪರಿಷತ್‌ಗೆ ನಾಮ ನಿರ್ದೇಶನ; ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾರಿಕ್ ಮನ್ಸೂರ್ ಕುಲಪತಿ ರಾಜೀನಾಮೆ ನೀಡಿದ ಬಳಿಕ ಅವರನ್ನು ವಿಧಾನ ಪರಿಷತ್‌ನೆ ನಾಮ ನಿರ್ದೇಶನ ಮಾಡಿದ್ದರು.
ಲಕ್ನೋ ಮೂಲದ ಮಾಧ್ಯಮ ವಿಶ್ಲೇಷಕ ಜೆ. ಪಿ. ಶುಕ್ಲಾ ಮಾತನಾಡಿ,"ತಾರಿಕ್ ಮನ್ಸೂರ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಸೇರಿಸಿಕೊಳ್ಳುವುದು ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಮೇಲೆ ನಂಬಿಕೆ ಇದೆ ಮತ್ತು ಪಕ್ಷ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಇಲ್ಲ ಎಂಬ ಭರವಸೆ ನೀಡುವ ಪ್ರಯತ್ನವಾಗಿದೆ" ಎಂದು ಹೇಳಿದ್ದಾರೆ.
"ಉತ್ತರ ಪ್ರದೇಶ ರಾಜ್ಯ ಬಿಜೆಪಿಗೆ ಬಹಳ ಪ್ರಮುಖವಾಗಿದ್ದು ಎಂಬುದರಲ್ಲಿ ಎರಡು ಮಾತಿಲ್ಲ. 2024ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುತ್ತಿರುವ ಬಿಜೆಪಿ ರಾಜ್ಯದಲ್ಲಿ 80 ಸ್ಥಾನಗಳಲ್ಲಿಯೂ ಜಯಗಳಿಸುವ ಗುರಿ ಹೊಂದಿದೆ. ಆದ್ದರಿಂದ ಮುಸ್ಲಿಂ ಸಮುದಾಯದ ಬೆಂಬಲ ಅಗತ್ಯವಾಗಿದೆ" ಎಂದು ತಿಳಿಸಿದ್ದಾರೆ.
ಮುಸ್ಲಿಮರನ್ನು ಹೊರತುಪಡಿಸಿ ಬೇರೆ ಬೇರೆ ರಾಜ್ಯಗಳ ವಿವಿಧ ಸಮುದಾಯಗಳ ನಾಯಕರನ್ನು ಕೇಂದ್ರ ಪದಾಧಿಕಾರಿಗಳ ತಂಡಕ್ಕೆ ಬಿಜೆಪಿ ಸೇರಿಸಿಕೊಂಡಿದೆ. ಈ ಮೂಲಕ 2024ರಲ್ಲಿ ಎಲ್ಲಾ ಸಮುದಾಯಗಳ ಬೆಂಬಲ ಪಡೆಯುವ ಪ್ರಯತ್ನ ನಡೆಸಿದೆ.
ಸಮುದಾಯದ ಚುನಾವಣಾ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸಂಸದೆ, 'ಕುರ್ಮಿ' ರೇಖಾ ವರ್ಮಾ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಒಬ್ಬರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಪಕ್ಷದ ಮತ್ತೊಬ್ಬ ಪ್ರಮುಖ ಬ್ರಾಹ್ಮಣ ಸಮುದಾಯದ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಲಕ್ಷ್ಮೀಕಾಂತ ಬಾಜಪೇಯಿ ಸಹ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.












Click it and Unblock the Notifications