Varanasi constituency: ಲೋಕಸಭಾ ಚುನಾವಣೆಯ ಫೈನಲ್‌ನಲ್ಲಿ ಪ್ರತಿಷ್ಠೆಯ ಕಣ ವಾರಣಾಸಿ!
ನವದೆಹಲಿ, ಮೇ. 26: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಮೇ 25 ರಂದು ಮುಗಿದಿದೆ. ಇನ್ನು ಕೊನೆಯ ಹಂತ ಮಾತ್ರ ಬಾಕಿಯಿದ್ದು, ಈ ಬಾರಿ ಬಿಜೆಪಿ ಫೈನಲ್‌ನಲ್ಲಿ ವಾರಣಾಸಿಯನ್ನು ಪ್ರಮುಖ ಕ್ಷೇತ್ರ ಮಾಡಿಕೊಂಡಿದೆ. ಇದೆ ಕಾರಣಕ್ಕೆ ಲೋಕಸಭೆ ಚುನಾವಣೆಯ ಏಳನೇ ಹಂತದ ಮತದಾನಕ್ಕೂ ಮುಂಚೆ ಬಿಜೆಪಿ ನಾಯಕರು ವಾರಣಾಸಿಯಲ್ಲಿ ಒಟ್ಟುಗೂಡಲಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಿಂದ ಪಕ್ಷದ ಅಭ್ಯರ್ಥಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಮಪತ್ರ ಸಲ್ಲಿಕೆಗೆಯೇ ಪ್ರಮುಖ ಬಿಜೆಪಿ ನಾಯಕರು ಭಾಗಿಯಾಗಿದ್ದರು. ದೊಡ್ಡ ಮೆರವಣಿಗೆ, ಸಮಾವೇಶ, ಎನ್‌ಡಿಎಯ ಪ್ರಮುಖ ನಾಯಕರು ಸೇರಿ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದರು. ಈಗ ತಮ್ಮ ಕ್ಷೇತ್ರಕ್ಕೆ ಮೋದಿ ಹೆಚ್ಚು ಒತ್ತು ನೀಡಲಿದ್ದಾರೆ. ಮೇ 26 ರಿಂದ ಜೂನ್ 1 ರವರೆಗೆ ವಾರಣಾಸಿ ಕ್ಷೇತ್ರದಲ್ಲಿ ನೆಲೆಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಏಳನೇ ಹಂತದ ಮತದಾನಕ್ಕೂ ಮುನ್ನ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ರ್‍ಯಾಲಿಗಳು ಮತ್ತು ಪ್ರಚಾರಗಳನ್ನು ನಡೆಸಲಿದ್ದಾರೆ. ತಮ್ಮ ವಾರಣಾಸಿ ಕ್ಷೇತ್ರಕ್ಕೂ ಮಹತ್ವ ನೀಡಲಿದ್ದು, ಇತರ ನಾಯಕರೊಂದಿಗೆ ಪ್ರಚಾರ ನಡೆಸಲಿದ್ದಾರೆ.
ಪಿಎಂ ಮೋದಿ 2014 ಮತ್ತು 2019ರಲ್ಲೂ ವಾರಣಾಸಿಯನ್ನು ಪ್ರತಿನಿಧಿಸಿದ್ದಾರೆ. ಆ ಸಮಯದಲ್ಲಿಯೂ ಕೂಡ ಪ್ರಧಾನಿಯವರು ಇದನ್ನೇ ಮಾಡಿದ್ದರು. ಜೂನ್ 1 ರಂದು ಅಂತಿಮ ಹಂತದಲ್ಲಿ ಮತದಾನ ನಡೆಯಲಿರುವ 57 ಸ್ಥಾನಗಳಲ್ಲಿ ವಾರಣಾಸಿ ಸೇರಿ ಉತ್ತರ ಪ್ರದೇಶದ 12 ಕ್ಷೇತ್ರಗಳು ಚುನಾವಣೆ ಎದುರಿಸಲಿವೆ.
ವಾರಣಾಸಿಯಲ್ಲಿ ಪ್ರಧಾನಿಯ ಬೈಠಕ್‌ಗಳು
ಈ ಅವಧಿಯಲ್ಲಿ ವಾರಣಾಸಿಯಲ್ಲಿ ಪ್ರಧಾನಿ ಸಾಂಸ್ಥಿಕ 'ಬೈಠಕ್' ನಡೆಸಲಿದ್ದಾರೆ. ಕಳೆದ ಬಾರಿಯೂ ನರೇಂದ್ರ ಮೋದಿ ಅವರು ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದರು. ಮಂಗಳವಾರಗಳಲ್ಲಿ ಮಹಿಳಾ ಮತದಾರರೊಂದಿಗೆ ಸಭೆ ನಡೆಸಿದ್ದರು. 1,909 ಬೂತ್‌ಗಳಿಂದ ತಲಾ 10 ಮಹಿಳೆಯರನ್ನು ಸಂವಾದಕ್ಕೆ ಕರೆಯಲಾಗಿತ್ತು. ಈ ಬಾರಿ ಕೂಡ ಇವುಗಳನ್ನು ಮಾಡುವ ಸಾಧ್ಯತೆಯಿದೆ.

ಪ್ರಧಾನಿ ಮೋದಿ ಅವರು ಕಳೆದ ಹದಿನೈದು ದಿನಗಳಲ್ಲಿ ವಾರಣಾಸಿಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ಮೇ 14 ರಂದು ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ಅವರು ವಾರಣಾಸಿಯಲ್ಲಿಯೇ ರಾತ್ರಿ ಕಳೆದರು. ಪ್ರಧಾನಿ ಮೋದಿ ತಮ್ಮ ಕ್ಷೇತ್ರದ ಮತಯಾಚನೆಗಾಗಿ ಪ್ರತ್ಯೇಕ ಸಮಯ ಮೀಸಲಿಡುತ್ತಾರೆ. ಜನರ ಬಳಿ ಮತ ಯಾಚಿಸುತ್ತಾರೆ. ಕಳೆದ ದಶಕದಲ್ಲಿ, ಪ್ರಧಾನ ಮಂತ್ರಿ ವಾರಣಾಸಿಯಲ್ಲಿ ಕನಿಷ್ಠ 50 ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಇಲ್ಲಿಯವರೆಗೆ, ಚುನಾವಣಾ ಸಮಯದಲ್ಲಿ ಪ್ರಧಾನಿ ಮೋದಿ ದೇಶಾದ್ಯಂತ 250 ಕ್ಕೂ ಹೆಚ್ಚು ರ್‍ಯಾಲಿಗಳನ್ನು ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 2014 ರ ಸಾರ್ವತ್ರಿಕ ಚುನಾವಣೆಯ ಮೊದಲು ಪ್ರಧಾನಿ ವಾರಣಾಸಿಯಿಂದ ಮೊದಲ ಬಾರಿಗೆ ಚುನಾಯಿತರಾಗುವ ಮೊದಲು ಚುನಾವಣೆಯ ಹಿಂದಿನ ತಿಂಗಳಲ್ಲಿ 437 ರ ್ಯಾಲಿಗಳನ್ನು ನಡೆಸಿದ್ದರು.












Click it and Unblock the Notifications