ಲೋಕಸಭಾ ಚುನಾವಣೆ: ಬಿಜೆಪಿಯ ನಿತ್ಯಾನಂದ ರೈ ಭೇಟಿಯಾದ ಚಿರಾಗ್ ಪಾಸ್ವಾನ್, ಮೈತ್ರಿ ಸಾಧ್ಯತೆ
ನವದೆಹಲಿ, ಜುಲೈ. 09: ಪಾಟ್ನಾದಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ನಿತ್ಯಾನಂದ ರೈ ಅವರನ್ನು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಭೇಟಿಯಾಗಿದ್ದಾರೆ. 2024 ರ ಲೋಕಸಭೆ ಚುನಾವಣೆಗೆ ಎರಡು ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದ್ದು, ಈ ಬಗ್ಗೆ ಚರ್ಚಿಸಲು ಪಾಟ್ನಾದಲ್ಲಿ ಪಕ್ಷದ ಸಭೆಯನ್ನು (ರಾಮ್ ವಿಲಾಸ್ ಪಾಸ್ವಾನ್ ಬಣ) ಕರೆದಿದ್ದಾರೆ.
ಚಿರಾಗ್ ಪಾಸ್ವಾನ್ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಸೇರ್ಪಡೆಯಾಗುತ್ತಾರೆ ಎಂಬ ಬಲವಾದ ವದಂತಿಗಳ ನಡುವೆಯೇ ಬ್ಯಾಕ್ ಟು ಬ್ಯಾಕ್ ಸಭೆಗಳು ನಡೆಯುತ್ತಿವೆ. "ಮುಂಬರುವ 2024 ರ ಲೋಕಸಭೆ ಚುನಾವಣೆ ಮತ್ತು 2025 ರ ಬಿಹಾರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್‌ಜೆಪಿ ಮೈತ್ರಿ ಕುರಿತು ಚರ್ಚಿಸಲು ಇಂದಿನ ಸಭೆ ನಡೆಸಲಾಯಿತು. ಮೈತ್ರಿ ಕುರಿತು ನಿರ್ಧಾರ ತೆಗೆದುಕೊಳ್ಳಲು ಪಕ್ಷದ ನಾಯಕರು ನನಗೆ ಅಧಿಕಾರ ನೀಡಿದ್ದಾರೆ" ಎಂದು ಪಾಟ್ನಾದಲ್ಲಿ ಪಕ್ಷದ ನಾಯಕರನ್ನು ಭೇಟಿ ಮಾಡಿದ ನಂತರ ಎಲ್‌ಜೆಪಿ ಮುಖ್ಯಸ್ಥರು ಹೇಳಿದ್ದಾರೆ.

" ಎರಡು ಪಕ್ಷಗಳ ಮೈತ್ರಿಯ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಸಚಿವರಾಗುವುದು ನನ್ನ ಆದ್ಯತೆಯಲ್ಲ" ಎಂದು ಚಿರಾಗ್ ಪಾಸ್ವಾನ್ ದೆಹಲಿಗೆ ತೆರಳುವ ಮೊದಲು ಹೇಳಿದ್ದರು. ಸಭೆಯಲ್ಲಿ ಪಕ್ಷದ ಅಧಿಕಾರಿಗಳು ಅಧಿಕೃತವಾಗಿ ಚಿರಾಗ್ ಪಾಸ್ವಾನ್ ಅವರಿಗೆ ಮೈತ್ರಿ ಬಗ್ಗೆ ನಿರ್ಧಾರ ಕೈಗೊಳ್ಳಲು ಅಧಿಕಾರ ನೀಡಿದ್ದಾರೆ.
ಎನ್‌ಡಿಎಗೆ ಸೇರ್ಪಡೆಗೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ. ಅಂತಿಮ ನಿರ್ಧಾರಕ್ಕೆ ಮುನ್ನ ಏನನ್ನೂ ಹೇಳುವುದು ಸೂಕ್ತವಲ್ಲ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಇನ್ನು, ಚಿರಾಗ್ ಪಾಸ್ವಾನ್ ಅವರನ್ನು ಕೇಂದ್ರ ಸಂಪುಟಕ್ಕೆ ಬಿಜೆಪಿ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇಂಟಲಿಜೆನ್ಸ್ ಬ್ಯೂರೋ ತನ್ನ ವರದಿಯಲ್ಲಿ ಆತನಿಗೆ ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅವರಿಗೆ ಝಡ್ ಕೆಟಗರಿ ಭದ್ರತೆಯನ್ನು ನೀಡಲಾಗಿದೆ.
ಸಭೆಯ ನಂತರ ಬಿಜೆಪಿ ನಾಯಕ ಹೇಳಿದ್ದೇನು?
ಚಿರಾಗ್ ಪಾಸ್ವಾನ್ ಅವರನ್ನು ಭೇಟಿ ಮಾಡಿದ ನಂತರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ, "ಇದು ನಮ್ಮ ಹಳೆಯ ಮನೆ, ನಾವು ಭೇಟಿಯಾದಾಗ ಯಾವಾಗಲೂ ಒಳ್ಳೆಯದಾಗುತ್ತದೆ. ರಾಮ್ ವಿಲಾಸ್ ಪಾಸ್ವಾನ್ ಮತ್ತು ಬಿಜೆಪಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದೆ. ಪ್ರತಿಪಕ್ಷಗಳ ಒಗ್ಗಟ್ಟಿಗೆ ಪ್ರಧಾನಿ ಮೋದಿ ಜನಪ್ರಿಯತೆಯ ಭಯವೇ ಕಾರಣ.ಪ್ರತಿಪಕ್ಷಗಳಿಗೆ ಯಾವುದೇ ನಾಯಕ ಅಥವಾ ಯಾವುದೇ ನೀತಿ ಇಲ್ಲ. ಅವರು ಪ್ರಧಾನಿ ಮೋದಿಯಿಂದ ನೀತಿಗಳು, ಸೇವೆ ಮತ್ತು ನಾಯಕತ್ವದ ಬಗ್ಗೆ ಕಲಿಯಬೇಕು" ಎಂದಿದ್ದಾರೆ.












Click it and Unblock the Notifications