ಲಿವ್ ಇನ್ ರಿಲೇಶನ್‌ಶಿಪ್ ಅಪಾಯಕಾರಿ ಕಾಯಿಲೆ ಇದ್ದಂತೆ: ಬಿಜೆಪಿ ಸಂಸದ ಧರಂಬೀರ್ ಸಿಂಗ್
ನವದೆಹಲಿ, ಡಿಸೆಂಬರ್ 7: ಲಿವ್-ಇನ್ ಸಂಬಂಧಗಳು ಭಾರತೀಯ ಸಮಾಜದಿಂದ ನಿರ್ಮೂಲನೆ ಮಾಡಬೇಕಾದ ಅಪಾಯಕಾರಿ ಕಾಯಿಲೆಯಾಗಿದೆ. ಇಂತಹ ವ್ಯವಸ್ಥೆಗಳ ವಿರುದ್ಧ ಕಾನೂನನ್ನು ಜಾರಿಗೊಳಿಸಬೇಕೆಂದು ಬಿಜೆಪಿ ಸಂಸದ ಧರಂಬೀರ್ ಸಿಂಗ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಹರಿಯಾಣದ ಬಿಜೆಪಿ ಸಂಸದ ಧರಂಬೀರ್ ಸಿಂಗ್ ಈ ಆಗ್ರಹ ಮಾಡಿದ್ದಾರೆ.

ತಮ್ಮ ಭಾಷಣದಲ್ಲಿ ಧರಂಭೀರ್ ಸಿಂಗ್ ಅವರು, ಭಾರತೀಯ ಸಂಸ್ಕೃತಿಯ ವಿಶಿಷ್ಟವಾದುದು. ಅದರ ತತ್ವವಾದ 'ವಸುಧೈವ ಕುಟುಂಬಕಮ್' (ಜಗತ್ತು ಒಂದೇ ಕುಟುಂಬ) ಮತ್ತು ವಿವಿಧತೆಯಲ್ಲಿ ಏಕತೆಗೆ ಹೆಸರಾದ ದೇಶವಾಗಿದೆ. ಭಾರತದಲ್ಲಿ ಅರೇಂಜ್ಡ್ ಮ್ಯಾರೇಜ್‌ಗಳು ದೀರ್ಘಕಾಲ ಉಳಿಯುತ್ತವೆ. ಸಮಾಜದ ಬಹುತೇಕರು ಪೋಷಕರು ಅಥವಾ ಸಂಬಂಧಿಕರು ಏರ್ಪಡಿಸಿದ ಮದುವೆಗಳಿಗೆ ಆದ್ಯತೆ ನೀಡುತ್ತದೆ ಎಂದು ಪ್ರತಿಪಾದಿಸಿದರು.
ಸಾಮಾಜಿಕ ಮೌಲ್ಯಗಳು, ವೈಯಕ್ತಿಕ ಆದ್ಯತೆಗಳು ಮತ್ತು ಕೌಟುಂಬಿಕ ಹಿನ್ನೆಲೆಗಳಂತಹ ಅಂಶಗಳ ಆಧಾರದ ಮೇಲೆ ಈ ಮದುವೆಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇವು ಏಳು ತಲೆಮಾರುಗಳವರೆಗೆ ಬಾಳಿಕೆ ಬರುತ್ತದೆ. ಭಾರತದಲ್ಲಿ ವಿಚ್ಛೇದನದ ಪ್ರಮಾಣವು ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಈ ವ್ಯವಸ್ಥೆಗೆ ಅರೇಂಜ್ಡ್ ಮ್ಯಾರೇಜ್‌ಗಳ ಪ್ರಭುತ್ವ ಕಾರಣವಾಗಿದೆ ಎಂದರು.
ಪ್ರೇಮ ವಿವಾಹಗಳಲ್ಲಿ ವಿಚ್ಛೇದನ ಸಂಖ್ಯೆ ಹೆಚ್ಚುತ್ತಿದೆ. ಅಂತಹ ಒಪ್ಪಂದಗಳಿಗೆ ವಧು ಮತ್ತು ವರನ ಪೋಷಕರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು. ಪ್ರೇಮ ವಿವಾಹಗಳಿಂದ ಉಂಟಾಗುವ ಘರ್ಷಣೆಗಳು, ವಿಶೇಷವಾಗಿ ಮದುವೆಗಳು ಹೆಚ್ಚಾಗಿ ಗೋತ್ರ ಗಡಿಗಳನ್ನು ದಾಟುವ ಹಳ್ಳಿಗಳಲ್ಲಿ ಕುಟುಂಬಗಳನ್ನು ಛಿದ್ರಗೊಳಿಸುತ್ತಿವೆ ಎಂದು ಅವರು ವಾದಿಸಿದರು.
ಲಿವ್ ಇನ್ ರಿಲೇಶನ್‌ಶಿಫ್ ಪ್ರವೃತ್ತಿ ಮಾರಕವಾಗಿದೆ. ಇದು ಭಾರತೀಯ ಸಮಾಜವನ್ನು ನುಸುಳುವ ಹೊಸ ಕಾಯಿಲೆ. ಶ್ರದ್ಧಾ ವಾಕರ್ ಮತ್ತು ಅಫ್ತಾಬ್ ಪೂನಾವಾಲಾ ಪ್ರಕರಣವನ್ನು ಸೂಚಿಸಿದ ಅವರು, ಹಿಂಸೆ ಮತ್ತು ಭಯಾನಕ ಘಟನೆಗಳು ಸೇರಿದಂತೆ ಅಂತಹ ಸಂಬಂಧಗಳ ಸಂಭಾವ್ಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಈ ಅಪಾಯಕಾರಿ ಕಾಯಿಲೆಯನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಕಾನೂನನ್ನು ಜಾರಿಗೊಳಿಸುವ ಮೂಲಕ ಲಿವ್-ಇನ್ ಸಂಬಂಧಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಸಂಬಂಧಗಳಿಗೆ ಅವಕಾಶ ನೀಡುವುದರಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆಯಾಗುವುದಲ್ಲದೆ ದ್ವೇಷ ಮತ್ತು ಸಾಮಾಜಿಕ ಅನಿಷ್ಟಗಳನ್ನು ಬೆಳೆಸುತ್ತದೆ. ಭಾರತದ ಸಾಂಸ್ಕೃತಿಕ ರಚನೆಯನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.












Click it and Unblock the Notifications