ಕೈ ತುಂಬಾ ಸ್ಯಾಲರಿ ಬರೋ MNC ಕೆಲಸಕ್ಕೆ ಗುಡ್‌ಬೈ ಹೇಳಿ 3 ಬಾರಿ UPSC ಪಾಸ್ ಮಾಡಿದ ಸಾನಿಯಾ: IPS ಕನಸಿನ ಬೆನ್ನೇರಿದ ಹುಡುಗಿ ಕಥೆ
ಯಶಸ್ಸು ಎನ್ನುವುದು ಯಾರಿಗೂ ಒಂದು ಗಂಟೆಯಲ್ಲಿ ಅಥವಾ ಒಂದು ದಿನದಲ್ಲಿ ಸುಲಭವಾಗಿ ಒಲಿಯುವಂತದಲ್ಲ. ಅದರ ಹಿಂದೆ ಕಠಿಣ ಪರಿಶ್ರಮ, ಛಲ ಹಾಗೂ ಎಷ್ಟೇ ಬಾರಿ ಸೋತರೂ ಮತ್ತೆ ಎದ್ದು ನಿಲ್ಲುವ ಮನೋಭಾವ ಇರಬೇಕಾಗುತ್ತದೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಒಮ್ಮೆ ಫೇಲ್ ಆದ್ರೆ ಕೈ ಚೆಲ್ಲಿ ತಲೆ ಮೇಲೆ ಕೈ ಹೊತ್ತು ಕೂರುವವರ ಮಧ್ಯೆ, ಸತತ ಎರಡು ಬಾರಿ ಪ್ರಿಲಿಮಿನರಿ ಪರೀಕ್ಷೆಯಲ್ಲಿಯೇ ಫೇಲ್ ಆಗಿದ್ದ ಯುವತಿಯೊಬ್ಬರು, ಆ ಬಳಿಕ ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನ ಪಾಸ್ ಮಾಡುವ ಮೂಲಕ ಐಪಿಎಸ್ ಅಧಿಕಾರಿ ಸಾನಿಯಾ ಸೀರ್ವಿ ಆಗಿ ರೂಪುಗೊಂಡಿರುವ ಕಥೆ ಇಂದಿನ ಯುವಪೀಳಿಗೆಗೆ ನಿಜಕ್ಕೂ ಸ್ಫೂರ್ತಿ.

ಐಐಟಿ ಬಾಂಬೆ ಪದವಿ ಮತ್ತು ಎಂಎನ್‌ಸಿ ಕೆಲಸಕ್ಕೆ ವಿದಾಯ
ಸಾನಿಯಾ ಸೀರ್ವಿ ಶೈಕ್ಷಣಿಕವಾಗಿ ಮೊದಲಿನಿಂದಲೂ ಅತ್ಯಂತ ಚಾಣಾಕ್ಷ ವಿದ್ಯಾರ್ಥಿನಿಯಾಗಿದ್ದರು. ಕಠಿಣ ಪ್ರವೇಶ ಪರೀಕ್ಷೆಯನ್ನ ಪಾಸ್ ಮಾಡುವ ಮೂಲಕ, ದೇಶದ ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಅವರು ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಪದವಿಗೆ ಪ್ರವೇಶ ಪಡೆದರು.
ರಾಜಸ್ಥಾನದ ಮಾರ್ವಾಡ್ ಪ್ರದೇಶದ ಸೀರ್ವಿ ಸಮುದಾಯದಿಂದ ಐಐಟಿಯಂತಹ ಉನ್ನತ ಸಂಸ್ಥೆಗೆ ಆಯ್ಕೆಯಾಗಿ ಪದವಿ ಪಡೆದ ಮೊದಲ ಹುಡುಗಿ ಎಂಬ ಹೆಗ್ಗಳಿಕೆಗೂ ಸಾನಿಯಾ ಪಾತ್ರರಾಗಿದ್ದಾರೆ ಎಂದು ಅವರ ತಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಐಐಟಿಯಲ್ಲಿ ಉತ್ತಮ ಅಂಕಗಳೊಂದಿಗೆ ಪದವಿ ಮುಗಿಸಿದ ನಂತರ ಸಾನಿಯಾ ಅವರು ಬಹುರಾಷ್ಟ್ರೀಯ ಕಂಪನಿ ಅಂದರೆ ಎಮ್‌ಎನ್‌ಸಿ ಕಂಪನಿಯೊಂದರಲ್ಲಿ ಕೈತುಂಬಾ ಸಂಬಳ ತರುವ ಕೆಲಸಕ್ಕೆ ಸೇರಿಕೊಂಡರು.
ಆದರೆ, ಕಂಪ್ಯೂಟರ್ ಮುಂದಿನ ಕಾರ್ಪೊರೇಟ್ ಜಗತ್ತಿನ ಆ ಐಷಾರಾಮಿ ಕೆಲಸ ಅವರಿಗೆ ಯಾಕೋ ತೃಪ್ತಿ ನೀಡಲಿಲ್ಲ. ಸಮಾಜಕ್ಕೆ ನೇರವಾಗಿ ಸೇವೆ ಸಲ್ಲಿಸಲು ಮತ್ತು ತಾನು ಪೊಲೀಸ್ ಅಧಿಕಾರಿಯಾಗಬೇಕು ಎಂದು ಕಂಡ ಕನಸನ್ನ ನನಸು ಮಾಡಿಕೊಳ್ಳಲು ಅವರು ದಿಟ್ಟ ನಿರ್ಧಾರವೊಂದನ್ನ ತೆಗೆದುಕೊಂಡರು.
ತಮ್ಮ ಪ್ರತಿಷ್ಠಿತ ಎಂಎನ್‌ಸಿ ಕೆಲಸಕ್ಕೆ ರಾಜೀನಾಮೆ ನೀಡಿ ಯುಪಿಎಸ್‌ಸಿ ಪರೀಕ್ಷೆಯ ಕಠಿಣ ಸಿದ್ಧತೆಯಲ್ಲಿ ತೊಡಗಿಕೊಂಡರು.
ಆರಂಭಿಕ ವೈಫಲ್ಯ, ಅನಾರೋಗ್ಯ ಮತ್ತು ಐಪಿಎಸ್ ಕನಸು
ಕೆಲಸ ಬಿಟ್ಟು ಪೂರ್ಣಾವಧಿಯಾಗಿ ಐಎಎಸ್/ಐಪಿಎಸ್ ಓದಲು ಶುರು ಮಾಡಿದ ಸಾನಿಯಾಗೆ ಆರಂಭದಲ್ಲೇ ಯಶಸ್ಸು ಒಲಿಯಲಿಲ್ಲ. ಅವರ ಈ ಯುಪಿಎಸ್‌ಸಿ ಜರ್ನಿ ಹೂವಿನ ಹಾಸಿಗೆಯಾಗಿರಲಿಲ್ಲ. ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ಅವರು ಕನಿಷ್ಠ ಪ್ರಿಲಿಮಿನರಿ ಹಂತವನ್ನ ಕೂಡ ದಾಟಲು ವಿಫಲರಾದರು.
ಸತತ ಸೋಲುಗಳು ಯಾವುದೇ ಅಭ್ಯರ್ಥಿಯನ್ನಾದರೂ ಮಾನಸಿಕವಾಗಿ ಕುಗ್ಗಿಸುತ್ತವೆ. ಇದರ ಜೊತೆಗೆ ಸಾನಿಯಾ ಅವರು ಇದೇ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೂ ತುತ್ತಾಗಿದ್ದರು. ಇದು ಅವರ ಓದಿನ ಏಕಾಗ್ರತೆಗೆ ಮತ್ತು ದೈಹಿಕ ಸಾಮರ್ಥ್ಯಕ್ಕೆ ಭಾರಿ ಪೆಟ್ಟು ನೀಡಿತ್ತು. ಆದರೂ ಅವರು ಎದೆಗುಂದಲಿಲ್ಲ.
ಸತತ ವೈಫಲ್ಯಗಳ ನಡುವೆಯೂ ಛಲ ಬಿಡದೆ ತಮ್ಮ ಗುರಿಯತ್ತ ಗಮನಹರಿಸಿದರು. ತಮ್ಮ ಆರಂಭಿಕ ತಪ್ಪುಗಳನ್ನ ತಿದ್ದಿಕೊಂಡು, ಹೊಸ ಕಾರ್ಯತಂತ್ರದೊಂದಿಗೆ ಮತ್ತಷ್ಟು ಕಠಿಣ ಶ್ರಮ ಹಾಕಿದರು.
ಅಜ್ಜನಿಂದ ಸ್ಫೂರ್ತಿ
ಸಾನಿಯಾಗೆ ಐಪಿಎಸ್ ಅಧಿಕಾರಿಯಾಗಲು ಮತ್ತು ಖಾಕಿ ಸಮವಸ್ತ್ರದತ್ತ ಆಕರ್ಷಿತರಾಗಲು ಪ್ರಮುಖ ಸ್ಫೂರ್ತಿ ಅವರ ತಾಯಿಯ ತಂದೆ (ಅಜ್ಜ) ಪುಖರಾಜ್ ಸೀರ್ವಿ. ಅವರು 2004ರಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (IGP) ಆಗಿ ನಿವೃತ್ತರಾಗಿದ್ದು, ಬಳಿಕ ರಾಜಸ್ಥಾನ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇನ್ನೊಂದೆಡೆ ಅವರ ತಂದೆಯ ತಂದೆ ಶೇರಾರಾಮ್ ಪನ್ವಾರ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಹಾಗೂ ಅತ್ಬಾರಾ ಗ್ರಾಮದ ಸರಪಂಚ್ ಆಗಿ ಜನಸೇವೆ ಮಾಡಿದ್ದರು. ಅಜ್ಜನ ಖಾಕಿ ಸಮವಸ್ತ್ರ ಮತ್ತು ಸಮಾಜ ಸೇವೆಯೇ ಸಾನಿಯಾಗೆ ಅತಿ ದೊಡ್ಡ ಪ್ರೇರಣೆಯಾಗಿತ್ತು.
ಈ ಪ್ರಬಲ ಪ್ರೇರಣೆಯ ಬಲದಿಂದ ಸಾನಿಯಾ ತಮ್ಮ 3ನೇ ಪ್ರಯತ್ನದಲ್ಲಿ ಅಂದರೆ 2023ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 171ನೇ ರ‍್ಯಾಂಕ್ ಗಳಿಸಿ ಐಪಿಎಸ್ ಹುದ್ದೆ ಗಿಟ್ಟಿಸಿಕೊಂಡರು.
ಐಪಿಎಸ್ ಅಧಿಕಾರಿಯಾದರೂ ತಮ್ಮ ಪ್ರಯತ್ನವನ್ನ ನಿಲ್ಲಿಸದ ಅವರು, 2024ರಲ್ಲಿ ಮತ್ತೆ ಪರೀಕ್ಷೆ ಬರೆದು 210ನೇ ರ‍್ಯಾಂಕ್, ಹಾಗೂ 2025ರಲ್ಲಿ 450ನೇ ರ‍್ಯಾಂಕ್ ಪಡೆದು ಸತತ ಮೂರು ಬಾರಿ ಯುಪಿಎಸ್‌ಸಿ ಪಾಸ್ ಮಾಡಿದ ಅಪರೂಪದ ಹಾಗೂ ಅಸಾಮಾನ್ಯ ಸಾಧನೆ ಮೆರೆದರು.
ರ‍್ಯಾಂಕ್ ಬದಲಾದರೂ ಅವರು ಐಪಿಎಸ್ ಅಧಿಕಾರಿಯಾಗಿಯೇ ಮುಂದುವರಿದಿದ್ದಾರೆ. ಸೀರ್ವಿ ಸಮಾಜದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿರುವ ಸಾನಿಯಾ, ಸದ್ಯ ಮಹಾರಾಷ್ಟ್ರದಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ನಿಜವಾದ ರೋಲ್ ಮಾಡೆಲ್ ಆಗಿದ್ದಾರೆ.


Click it and Unblock the Notifications
