ಲೈಂಗಿಕ ಅಪರಾಧಗಳ ವಿಚಾರದಲ್ಲಿ ಪುರುಷರಿಗೆ ತಾರತಮ್ಯ ಮಾಡುತ್ತಿರುವ ಕಾನೂನು: ಅಲಹಾಬಾದ್ ಹೈಕೋರ್ಟ್ ಮಹತ್ವದ ಹೇಳಿಕೆ
ಅಲಹಾಬಾದ್, ಆಗಸ್ಟ್ 02: ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಕಾನೂನು ಪುರುಷರಿಗೆ ತಾರತಮ್ಯ ಮಾಡುತ್ತಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. ಪುರುಷರ ವಿರುದ್ಧದ ನಿಜವಾದ ಲೈಂಗಿಕ ಪ್ರಕರಣಗಳು ಕಡಿಮೆ ಆಗಿದ್ದು, ಸುಳ್ಳು ಆರೋಪಗಳನ್ನು ಹೊಂದಿರುವ ಪ್ರಕರಣಗಳೇ ಹೆಚ್ಚಾಗಿವೆ ಎಂದು ಕೋರ್ಟ್ ತಿಳಿಸಿದೆ.
ಸುದೀರ್ಘ ದೈಹಿಕ ಸಂಬಂಧದಲ್ಲಿ ತೊಡಗಿದ ಹುಡುಗಿಯರು ಅಥವಾ ಮಹಿಳೆಯರು ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಕೆಲವರು ಲಾಭದ ಆಸೆಯಿಂದ ಆರೋಪಿಗಳೊಂದಿಗೆ ಸಂಬಂಧ ಹೊಂದಿರುವುದು ಕಂಡುಬರುತ್ತಿದೆ ಎಂದು ಕೋರ್ಟ್ ಹೇಳಿದೆ.

ಈ ಹಿನ್ನೆಲೆಯಲ್ಲಿ ಅನಗತ್ಯ ಎಫ್‌ಐಆರ್ ದಾಖಲಿಸುವ ಘಟನೆಗಳು ಗಮನಾರ್ಹ ಸಂಖ್ಯೆಯಲ್ಲಿ ದಾಖಲಾಗುತ್ತಿವೆ ಎಂದು ನ್ಯಾಯಾಲಯವು ತಿಳಿಸಿದೆ.
ಏಕಸದಸ್ಯ ಪೀಠದ ನ್ಯಾಯಮೂರ್ತಿ ಸಿದ್ಧಾರ್ಥ್ ಅವರು, ಕಾನೂನು ಪುರುಷರ ವಿರುದ್ಧ ಹೆಚ್ಚು ಪಕ್ಷಪಾತವನ್ನು ಹೊಂದಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ವಿಚಾರಿಸುವ ಸಂದರ್ಭದಲ್ಲಿ ನ್ಯಾಯಾಲಯಗಳು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.
'ಲೈಂಗಿಕ ದೌರ್ಜನ್ಯ ಪ್ರಕರಣಗಳ ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ ನ್ಯಾಯಾಲಯಗಳು ಬಹಳ ಎಚ್ಚರಿಕೆಯಿಂದ ಇರಬೇಕಾದ ಸಮಯ ಬಂದಿದೆ. ಕಾನೂನು ಪುರುಷ ವಿರುದ್ಧ ಹೆಚ್ಚು ಪಕ್ಷಪಾತ ಹೊಂದಿದೆ. ಆರೋಪಗಳನ್ನು ಮಾಡುವುದು, ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಎಫ್‌ಐಆರ್ ದಾಖಲಿಸುವುದು ಸುಲಭವಾಗಿ ಬಿಟ್ಟಿದೆ' ಎಂದು ನ್ಯಾಯಾಲಯ ಹೇಳಿಕೆ ನೀಡಿದೆ.
ಸಾಮಾಜಿಕ ಮಾಧ್ಯಮಗಳು, ಸಿನಿಮಾಗಳು ಮತ್ತು ಟಿವಿ ಕಾರ್ಯಕ್ರಮಗಳ ಪ್ರಭಾವವು ಯುವ ಹುಡುಗರು ಮತ್ತು ಹುಡುಗಿಯರ ಮೇಲೆ ಹೆಚ್ಚುತ್ತಿದೆ. ಅವರು ಅಳವಡಿಸಿಕೊಳ್ಳುತ್ತಿರುವ ಮುಕ್ತ ಸಂಸ್ಕೃತಿ ಲೈಂಗಿಕ ದೌರ್ಜನ್ಯದಂತಹ ಆರೋಪಗಳಿಗೆ ಕಾರಣವಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಅದೇನೇ ಇದ್ದರೂ, ಇಂತಹ ನಡವಳಿಕೆಯು ಭಾರತೀಯ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳ ಪರಿಣಾಮ ಬೀರುತ್ತದೆ. ಮಹಿಳೆಯರ ಗೌರವದ ರಕ್ಷಣೆ ವಿಚಾರದಲ್ಲಿ ಕೆಲವೊಮ್ಮೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ನ್ಯಾಯಾಲಯವು ತಿಳಿಸಿದೆ.
'ಕೆಲವೊಮ್ಮೆ ದೀರ್ಘಕಾಲದವರೆಗೆ ಲಿವ್-ಇನ್-ರಿಲೇಶನ್‌ಶಿಪ್‌ನಲ್ಲಿ ಹುಡುಗ-ಹುಡುಗಿಯರು ಇರುತ್ತಾರೆ. ಆ ನಂತರ, ಯಾವುದೇ ವಿಚಾರದ ಕುರಿತು ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಹುಡುಗನಿಗೆ ಪಾಠ ಕಲಿಸಬೇಕೆಂದು ಹುಡುಗಿಯು ಪ್ರಕರಣ ದಾಖಲಿಸುತ್ತಾಳೆ' ಎಂದು ನ್ಯಾಯಾಲಯ ಹೇಳಿದೆ.
ಕಾನೂನಿನ ರಕ್ಷಣೆಯ ವಿಷಯದಲ್ಲಿ ಹುಡುಗಿಯರು ಅಥವಾ ಮಹಿಳೆಯರು ಮೇಲುಗೈ ಸಾಧಿಸುತ್ತಾರೆ. ಹುಡುಗ ಅಥವಾ ಪುರುಷನನ್ನು ಸುಲಭವಾಗಿ ಕಾನೂನಿನ ಕುಣಿಕೆಗೆ ಸಿಲುಕಿಕೊಳ್ಳುತ್ತಾನೆ ಎಂದು ನ್ಯಾಯಾಲಯ ಹೇಳಿದೆ.
ಲೈಂಗಿಕ ದೌರ್ಜನ್ಯ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ಅಲಹಾಬಾದ್ ಹೈಕೋರ್ಟ್ ಈ ಹೇಳಿಕೆಗಳನ್ನು ನೀಡಿದೆ.












Click it and Unblock the Notifications