ಕೋರ್ಟ್‌ನ 3 ಮಹತ್ವದ ತೀರ್ಪು: ಲಿವ್-ಇನ್ ಮದುವೆಗೆ ಸಮಾನ, ಪೋಷಕರನ್ನು ನೋಡಿಕೊಳ್ಳದಿದ್ದರೆ ಮನೆಯಿಂದಲೇ ಔಟ್
ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಕೌಟುಂಬಿಕ ಸಂಬಂಧಗಳು, ವಿವಾಹ, ಹಾಗೂ ವಯೋವೃದ್ಧರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಮೂರು ಮಹತ್ವದ ಕೋರ್ಟ್ ಆದೇಶಗಳನ್ನು ಹೊರಡಿಸಿದೆ. ದೆಹಲಿ ಹೈಕೋರ್ಟ್, ಬಾಂಬೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಈ ಪ್ರತ್ಯೇಕ ತೀರ್ಪುಗಳು ಸಮಾಜದ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲಿದ್ದು, ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳನ್ನ ಎತ್ತಿಹಿಡಿದಿವೆ.
ಲಿವ್-ಇನ್ ಸಂಬಂಧ ಮದುವೆಗೆ ಸಮಾನ: ದೆಹಲಿ ಹೈಕೋರ್ಟ್
ವಯಸ್ಕ ಜೋಡಿಯೊಂದು ಪರಸ್ಪರ ಒಪ್ಪಿಗೆಯಿಂದ ನಡೆಸುವ ಲಿವ್-ಇನ್ (Live-in) ಸಂಬಂಧವು ಕಾನೂನಿನ ದೃಷ್ಟಿಯಲ್ಲಿ ಮದುವೆಗೆ ಸಮಾನವಾಗಿರುತ್ತದೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜಾತಿ , ಧರ್ಮ , ಅಥವಾ ಕಟ್ಟುಪಾಡುಗಳ ಹೆಸರಿನಲ್ಲಿ ಇಂತಹ ಸಂಬಂಧಗಳಲ್ಲಿ ಪೋಷಕರು, ಸಂಬಂಧಿಕರು ಅಥವಾ ಸ್ನೇಹಿತರು ಹಸ್ತಕ್ಷೇಪ ಮಾಡುವಂತಿಲ್ಲ.
30 ವರ್ಷದ ಜೋಡಿಯೊಂದು ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರಿದ್ದ ಪೀಠ, ಸಂವಿಧಾನಬದ್ಧವಾಗಿ ವಯಸ್ಕರಿಗೆ ತಮ್ಮಿಷ್ಟದ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕಿದೆ.

ಸಮಾಜದ ಪೂರ್ವಾಗ್ರಹಗಳಿಗಾಗಿ ಜೀವ ಬೆದರಿಕೆ ಹಾಕುವುದು ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟಪಡಿಸಿ , ಆ ಯುವ ಜೋಡಿಗೆ ಪೊಲೀಸ್ ರಕ್ಷಣೆ ಒದಗಿಸುವಂತೆ ಸೂಚಿಸಿದೆ.
ಸಣ್ಣಪುಟ್ಟ ಜಗಳಗಳು ವಿಚ್ಛೇದನಕ್ಕೆ ಆಧಾರವಲ್ಲ: ಬಾಂಬೆ ಹೈಕೋರ್ಟ್
ಸಂಸಾರ ಎಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ, ಜಗಳಗಳು ಸಾಮಾನ್ಯ. ಆದರೆ ಇವುಗಳನ್ನೇ ಮುಂದಿಟ್ಟುಕೊಂಡು ವಿಚ್ಛೇದನ ನಿಯಮಗಳ ಅಡಿ ಡಿವೋರ್ಸ್ ಕೋರುವುದು ಸರಿಯಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಪತ್ನಿ ಸದಾ ತನ್ನ ಹಾಗೂ ತನ್ನ ತಾಯಿಯ ಜೊತೆ ಜಗಳವಾಡುತ್ತಾಳೆ ಎಂದು ಆರೋಪಿಸಿ ಪತಿಯೊಬ್ಬ ವಿಚ್ಛೇದನ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಊರ್ಮಿಳಾ ಜೋಶಿ ಫಾಲ್ಕೆ ಮತ್ತು ರಾಜ್ ವಾಖೋಡೆ ಅವರಿದ್ದ ವಿಭಾಗೀಯ ಪೀಠ, ಗಂಡ-ಹೆಂಡತಿಯ ನಡುವಿನ ಸಾಮಾನ್ಯ ಕಿರಿಕಿರಿಗಳು ಮಾನಸಿಕ ಹಿಂಸೆ ಅಥವಾ ಕ್ರೌರ್ಯ ಎನಿಸಿಕೊಳ್ಳುವುದಿಲ್ಲ. ದಂಪತಿಗೆ ಒಟ್ಟಾಗಿ ವಾಸಿಸಲು ಅಸಾಧ್ಯವಾದಂತಹ ಕಠಿಣ ಪರಿಸ್ಥಿತಿ ಇದ್ದರಷ್ಟೇ ಅದನ್ನು ವಿಚ್ಛೇದನಕ್ಕೆ ತಕ್ಕ ಆಧಾರವಾಗಿ ಪರಿಗಣಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪೋಷಕರನ್ನು ನೋಡಿಕೊಳ್ಳದಿದ್ದರೆ ಮನೆ ಖಾಲಿ: ಸುಪ್ರೀಂ ಕೋರ್ಟ್
ವೃದ್ಧಾಪ್ಯದಲ್ಲಿ ಪೋಷಕರನ್ನ ಸರಿಯಾಗಿ ನೋಡಿಕೊಳ್ಳದ ಮಕ್ಕಳು ಅಥವಾ ಸಂಬಂಧಿಕರನ್ನ ಮನೆಯಿಂದ ಹೊರಹಾಕುವ ಸಂಪೂರ್ಣ ಅಧಿಕಾರ ನ್ಯಾಯಾಧಿಕರಣಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. 'ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ- 2007' ರ ಅನ್ವಯ ಹಿರಿಯ ನಾಗರಿಕರ ರಕ್ಷಣೆ, ಭದ್ರತೆ ಮತ್ತು ಗೌರವಯುತ ಜೀವನವನ್ನ ಖಚಿತಪಡಿಸಿಕೊಳ್ಳಲು ಈ ಕ್ರಮ ಅತ್ಯಗತ್ಯ ಎಂದು ಕೋರ್ಟ್ ಹೇಳಿದೆ.
ಲಖನೌ ಮೂಲದ ಪ್ರಕರಣವೊಂದರಲ್ಲಿ, ವಯೋವೃದ್ಧ ತಾಯಿಯನ್ನ ವೃದ್ಧಾಶ್ರಮಕ್ಕೆ ಕಳುಹಿಸಿದ್ದ ಮಗ ಮತ್ತು ಸೊಸೆಗೆ ಮನೆ ಖಾಲಿ ಮಾಡುವಂತೆ ಸ್ಥಳೀಯ ನ್ಯಾಯಾಧಿಕರಣ ಆದೇಶಿಸಿತ್ತು. ಆದರೆ ಅಲಹಾಬಾದ್ ಹೈಕೋರ್ಟ್ ಇದನ್ನು ರದ್ದುಪಡಿಸಿತ್ತು. ಇದೀಗ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾ. ಅಲೋಕ್ ಆರಾಧೆ ಅವರಿದ್ದ ಪೀಠ ಹೈಕೋರ್ಟ್ ತೀರ್ಪನ್ನ ವಜಾಗೊಳಿಸಿದೆ.
ಕಾಯಿದೆಯಲ್ಲಿ 'ತೆರವು' ಎಂಬ ನಿರ್ದಿಷ್ಟ ಪದವಿಲ್ಲದಿದ್ದರೂ, ಹಿರಿಯರ ಆಸ್ತಿ ಹಾಗೂ ಜೀವದ ರಕ್ಷಣೆಗೆ ತೆರವು ಆದೇಶವು ಒಂದು ಸೂಕ್ತ ಕಾನೂನು ಕ್ರಮ ಎಂದು ಸ್ಪಷ್ಟಪಡಿಸುವ ಮೂಲಕ ಸುಪ್ರೀಂ ಕೋರ್ಟ್ ಹಿರಿಯರ ಬೆನ್ನಿಗೆ ನಿಂತಿದೆ.


Click it and Unblock the Notifications
