ಜೈಲಿನಲ್ಲಿ ಲಾಲು ರಾಜ್ಯಶಾಸ್ತ್ರ ಮೇಷ್ಟ್ರು!
ಬಿಹಾರ, ಅ.5 : ಮೇವು ಹಗರಣದಲ್ಲಿ ದೋಷಿಯಾಗಿ ಜೈಲು ಸೇರಿರುವ ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿ ಏನು ಮಾಡುತ್ತಾರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಲಾಲು, ಕೈದಿಗಳಿಗೆ ರಾಜ್ಯಶಾಸ್ತ್ರ ಮತ್ತು ಆಡಳಿತದ ಬಗ್ಗೆ ಪಾಠ ಹೇಳಿಕೊಡಲಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯದಿಂದ ಐದು ವರ್ಷ ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್ ಯಾದವ್, ರಾಂಚಿಯ ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಅವರು ಸದ್ಯ ಕೈದಿಗಳಿಗೆ ಪಾಠ ಮಾಡಲಿದ್ದು, ಅದಕ್ಕಾಗಿ ದಿನಕ್ಕೆ 25 ರೂ.ಸಂಬಳ ಪಡೆಯಲಿದ್ದಾರೆ.

ಲಾಲುಗೆ ಆಗಿರುವ ವಯಸ್ಸು, ಆರೋಗ್ಯ ಸಮಸ್ಯೆ ಮತ್ತು ರಾಜಕೀಯ ಪ್ರತಿಷ್ಠೆಯನ್ನು ಗಮನದಲ್ಲಿಟ್ಟುಕೊಂಡು ಇತರ ಕೈದಿಗಳಂತೆ ಕಠಿಣ ಕೆಲಸ ನೀಡುತ್ತಿಲ್ಲ. ಅದರ ಬದಲು ಕೈದಿಗಳಿಗೆ ಪಾಠ ಹೇಳಿಕೊಡುವಂತೆ ಸೂಚಿಸಲಾಗಿದೆ ಎಂದು ಜೈಲಿನ ಉಸ್ತುವಾರಿ ವಿರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಲಾಲು ರಾಜ್ಯಶಾಸ್ತ್ರ ಪದವೀಧರರು, ಅಲ್ಲದೇ ಅಪಾರ ರಾಜಕೀಯ ಅನುಭವ ಅವರ ತಲೆಯಲ್ಲಿದೆ. ರೈಲ್ವೆ ಸಚಿವರಾಗಿದ್ದಾಗ ಹಾರ್ವರ್ಡ್ ಬಿಸ್ನೆಸ್ ಸ್ಕೂಲ್ ಮತ್ತು ಅಹಮದಾಬಾದ್‌ನಲ್ಲಿರುವ ಐಐಎಂನಲ್ಲಿ ರೈಲ್ವೆ ಆಡಳಿತದ ಕುರಿತು ಉಪನ್ಯಾಸ ನೀಡಿದ್ದರು. (ಲಾಲೂ ಕೈದಿ ನಂ.3312 )
ಆದ್ದರಿಂದ ಜೈಲಿನಲ್ಲೂ ಅವರಿಗೆ ಉಪನ್ಯಾಸಕರ ಕೆಲಸ ನೀಡಲಾಗಿದೆ. ಪ್ರತಿದಿನ ಕೈದಿಗಳಿಗೆ ಲಾಲು ರಾಜ್ಯಶಾಸ್ತ್ರ ಮತ್ತು ಆಡಳಿತದ ಬಗ್ಗೆ ಪಾಠ ಮಾಡಲಿದ್ದಾರೆ. ಜೈಲಿನಲ್ಲಿ ಸುಮಾರು 3,000 ಕೈದಿಗಳಿದ್ದಾರೆ. ಜೊತೆಗೆ ಕೈದಿಗಳಲ್ಲಿ ಸಾಕ್ಷರತೆ ಮೂಡಿಸುವ ಕಾರ್ಯಕ್ರಮದಲ್ಲಿಯೂ ಲಾಲು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಅವರಲ್ಲಿ 100 ಮಂದಿ ಪದವಿ, 50 ಕೈದಿಗಳು ಸ್ನಾತಕೋತ್ತರ ಪದವಿಗೆ ಮತ್ತು 200 ಕೈದಿಗಳು ಪಿಯುಸಿ ಪರೀಕ್ಷೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸದ್ಯ ಲಾಲು ಇವರಿಗೆ ಪಾಠ ಮಾಡಲಿದ್ದಾರೆ. ಜೈಲಿನಲ್ಲಿ ಅಧ್ಯಯನ ಕೇಂದ್ರವೂ ಇದ್ದು, ಅಲ್ಲಿ ಉಪನ್ಯಾಸ ನೀಡುವ ವ್ಯವಸ್ಥೆ ಒದಗಿಸಲಾಗಿದೆ.












Click it and Unblock the Notifications