ಮಾಯಾವತಿ ಪ್ರಕರಣ: ಬಿಜೆಪಿ ದಲಿತ ವಿರೋಧಿ ಎಂದು ಕಿಡಿಕಾರಿದ ಲಾಲು
ರಾಜ್ಯಸಭಾ ಸದಸ್ಯತ್ವಕ್ಕೆ ಮಾಯಾವತಿ ರಾಜಿನಾಮೆ ಸಲ್ಲಿಸಿದ್ದಕ್ಕೆ ಲಾಲು ಪ್ರತಿಕ್ರಿಯೆ. ಬಿಜೆಪಿ ದಲಿತ ವಿರೋಧಿ ಎಂದು ಕಿಡಿ ಕಾರಿದ ಆರ್ ಜೆಡಿ ನಾಯಕ.
ಪಾಟ್ನಾ, ಜುಲೈ 18: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜವಾದಿ ಪಕ್ಷದ (ಬಿಎಸ್ ಪಿ) ನಾಯಕಿ ಮಾಯಾವತಿ ಅವರಿಗೆ ರಾಜ್ಯಸಭೆಯಲ್ಲಿ ಮಾತನಾಡಲು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ಬಿಜೆಪಿ ಪಕ್ಷವು ದಲಿತ ವಿರೋಧಿ ಎಂದು ಕಿಡಿಕಾರಿದ್ದಾರೆ.
ರಾಜ್ಯಸಭೆಯಲ್ಲಿ ಇಂದು (ಜುಲೈ 18) ಮಾಯಾವತಿ ಅವರು, ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತಂತೆ ಮಾತನಾಡಲು ಎದ್ದು ನಿಂತಾಗ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದನ್ನು ಪ್ರತಿಭಟಿಸಿದ್ದ ಮಾಯಾವತಿ, ತಮಗೆ ಮಾತನಾಡಲು ಅನುಮತಿ ನಿರಾಕರಿಸಿದರೆ ತಾವು ತಮ್ಮ ಸಂಸತ್ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದಾಗಿ ಆರ್ಭಟಿಸಿದ್ದರು.

ಅದರಂತೆ, ಜುಲೈ 18ರ ಸಂಜೆ ವೇಳೆ ಅವರು, ತಮ್ಮ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಾಲು, ''ಸದನದಲ್ಲಿ ಮಾಯಾವತಿಯವರು ದಲಿತರ ಸಮಸ್ಯೆಗಳನ್ನು ಹೇಳಲು ಮುಂದಾದಾಗ ಅವರಿಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ. ಇದು ಬಿಜೆಪಿಯು ದಲಿತ ವಿರೋಧಿಯೆಂಬುದನ್ನು ಸಾಬೀತುಪಡಿಸಿದೆ'' ಎಂದಿದ್ದಾರೆ.
ತಮ್ಮ ಮಾತನ್ನು ಮುಂದುವರಿಸಿದ ಅವರು, ''ಮಾಯಾವತಿಯವರು ಕೋಪದಿಂದ ಸಂಸತ್ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರಬಹುದು. ಆದರೆ, ಅವರು ಬಯಸಿದರೆ ನಾವು ಪುನಃ ಅವರನ್ನು ಮತ್ತೆ ರಾಜ್ಯಸಭೆಗೆ ಆರಿಸಿ ಕಳುಹಿಸುತ್ತೇವೆ'' ಎಂದರು.












Click it and Unblock the Notifications