Tirupati Tirumala: ತಿರುಪತಿ ಲಡ್ಡು ವಿತರಣೆ ಸುಲಭ- ರಮ್ಮಿ ಆಡಿದ ಪೊಲೀಸ್- ಹೋಟೆಲ್ ಲೈಸೆನ್ಸ್ ರದ್ದು!
ಆಂಧ್ರಪ್ರದೇಶದ ವಿಶ್ವವಿಖ್ಯಾತ ತಿರುಪತಿ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರತಿಯೊಬ್ಬರೂ ಪ್ರಸಿದ್ಧ ಲಡ್ಡು ಪ್ರಸಾದವನ್ನು ಸ್ವೀಕರಿಸುತ್ತಾರೆ. ದರ್ಶನದ ಬಳಿಕ ಭಕ್ತರು ಲಡ್ಡು ಪ್ರಸಾದ ಪಡೆಯಲು ಸಾಲುಗಟ್ಟಿ ನಿಲ್ಲುವುದು ನಿತ್ಯ ಕಂಡು ಬರುವ ದೃಶ್ಯ. ಆದರೆ ಲಡ್ಡು ಪ್ರಸಾದ ಸ್ವೀಕರಿಸಲು ಭಕ್ತರ ಕಾಯುವಿಕೆಯ ಸಮಯವನ್ನು ಕಡಿಮೆ ಮಾಡಲು ಟಿಟಿಡಿ ಹೊಸ ಯೋಜನೆಯನ್ನು ತಂದಿದೆ.
ಹೌದು... ತಿರುಮಲ ತಿರುಪತಿಯಲ್ಲಿ ಯಂತ್ರದ ಮೂಲಕ ಲಡ್ಡು ವಿತರಣೆ ಮಾಡಲು ತಿರುಮಲ ತಿರುಪತಿ ದೇವಸ್ಥಾನಂ (ಟಿಡಿಡಿ) ನಿರ್ಧರಿಸಿದೆ. ಲಡ್ಡು ಕೌಂಟರ್ ಗಳಲ್ಲಿ ವಿಶೇಷ ಯಂತ್ರಗಳನ್ನು ಇಟ್ಟು ಸ್ಕ್ಯಾನಿಂಗ್ ಮೂಲಕ ಭಕ್ತರಿಗೆ ಲಡ್ಡು ನೀಡಲಾಗುತ್ತದೆ. ಈ ಯಂತ್ರ ಲಡ್ಡುಗಳನ್ನು ವೇಗವಾಗಿ ತಲುಪಿಸಲು ಅನುವು ಮಾಡಿಕೊಡುತ್ತದೆ. ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ದಲ್ಲಾಳಿಗಳ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಟಿಟಿಡಿ ಹೇಳಿದೆ.

ಲಡ್ಡು ಪ್ರಸಾದ
ತಿರುಪತಿ ದೇವಸ್ಥಾನದಲ್ಲಿ ದಿನದ 24 ಗಂಟೆಯೂ ಭಕ್ತರಿಗೆ ಲಡ್ಡು ಪ್ರಸಾದವನ್ನು ನೀಡಲಾಗುತ್ತದೆ. ಈ ಲಡ್ಡುವನ್ನು 3 ವಿಧಗಳಲ್ಲಿ ತಯಾರಿಸಲಾಗುತ್ತದೆ. ಇದರಲ್ಲಿ 2ನೇ ಲಡ್ಡು 175 ಗ್ರಾಂ ತೂಕದ್ದಾಗಿರುತ್ತದೆ. ಈ 2ನೇ ಲಡ್ಡು ಭಕ್ತರಿಗೆ ಇಷ್ಟವಾದ ದೊಡ್ಡ ಲಡ್ಡುವಾಗಿದೆ. ಒಂದು ವಾರಕ್ಕಿಂತ ಹೆಚ್ಚು ಕಾಲ ಕೆಡದಂತೆ ಈ ಲಡ್ಡುಗಳನ್ನು ಇಡಬಹುದು.
ಇದನ್ನು ಪಡೆಯಲು ದೇವಸ್ಥಾನದಲ್ಲಿ ವಿಶೇಷ ಕೌಂಟರ್‌ಗಳಿವೆ. ಭಕ್ತರು 10, 50, 200 ರೂಪಾಯಿ ನೀಡಿ ಸಣ್ಣ ಲಡ್ಡುಗಳನ್ನು ಖರೀದಿಸುವುದು ಇದೆ. ಪ್ರತಿ ಟೋಕನ್ ಕಾರ್ಡ್‌ಗೆ 2 ಲಡ್ಡುಗಳನ್ನು ಖರೀದಿಸಲು ಭಕ್ತರಿಗೆ ಅವಕಾಶವಿದೆ. ಹೀಗೆ ನಿತ್ಯ ಭಕ್ತರು ದೇವಸ್ಥಾನಕ್ಕೆ ತೆರಳಿ ಲಡ್ಡು ಪ್ರಸಾದ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.

ದೇವರ ದರ್ಶನದಂತೆ ಲಡ್ಡು ಪ್ರಸಾದ ಖರೀದಿಗೂ ಭಕ್ತರು ಕಾಯಬೇಕು. ಇದನ್ನು ತಪ್ಪಿಸಲು ಲಡ್ಡು ಕೌಂಟರ್ ಗಳಲ್ಲಿ ವಿಶೇಷ ಯಂತ್ರಗಳನ್ನು ಇಟ್ಟು ಸ್ಕ್ಯಾನಿಂಗ್ ಮೂಲಕ ಭಕ್ತರಿಗೆ ಲಡ್ಡು ನೀಡಲಾಗುತ್ತದೆ. ಇದೀಗ ಕೇವಲ 6 ಕೌಂಟರ್‌ಗಳಲ್ಲಿ ಮಾತ್ರ ಸ್ಕ್ಯಾನಿಂಗ್ ಯಂತ್ರಗಳಿದ್ದು, ಪ್ರತಿಕ್ರಿಯೆ ಆಧರಿಸಿ, ಎಲ್ಲಾ ಕೌಂಟರ್‌ಗಳಲ್ಲಿ ಅವುಗಳನ್ನು ಸ್ಥಾಪಿಸಲು ದೇವಸ್ತಾನವು ನಿರ್ಧರಿಸಿದೆ.
ಆನ್‌ಲೈನ್ ರಮ್ಮಿ ಆಡಿದ ಪೊಲೀಸ್:
ಈ ನಡುವೆ ಮತ್ತೊಂದು ತಿರುಪತಿ ವಿಚಾರ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಅದೇನೆಂದರೆ ತಿರುಪತಿ ದೇಗುಲದ ಕೆಲಸಕ್ಕೆ ಬಂದಿದ್ದ ಪೊಲೀಸ್ ಪೇದೆಯೊಬ್ಬರು ಆನ್‌ಲೈನ್‌ನಲ್ಲಿ ರಮ್ಮಿ ಆಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬ್ರಹ್ಮೋತ್ಸವ ನಡೆಯುತ್ತಿದ್ದಂತೆ ವಿವಿಧ ಜಿಲ್ಲೆಗಳಿಂದ ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ಕರೆಸಲಾಗಿದೆ. ಭದ್ರತಾ ಕಾರ್ಯಕ್ಕೆ ಬಂದಿದ್ದ ಒಬ್ಬ ಪೊಲೀಸ್ ಕರ್ತವ್ಯದ ಬದಲು ಸೆಲ್ ಫೋನ್‌ನಲ್ಲಿ ಆನ್‌ಲೈನ್‌ನಲ್ಲಿ ರಮ್ಮಿ ಆಡುತ್ತಿದ್ದದ್ದು ಕಂಡುಬಂದಿದೆ.
ಇದನ್ನು ನೋಡಿದ ಭಕ್ತರು ಬೆಚ್ಚಿಬಿದ್ದಿದ್ದಾರೆ. ಕೆಲ ಭಕ್ತರು ಪೊಲೀಸರು ರಮ್ಮಿ ಆಡುತ್ತಿರುವುದನ್ನು ವಿಡಿಯೋ ಮಾಡಿ ಅಂತರ್ಜಾಲದಲ್ಲಿ ಹಾಕಿದ್ದಾರೆ. ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಪ್ರತಿನಿತ್ಯ ಈ ರೀತಿಯ ಘಟನೆ ತಿರುಪತಿ ದೇವಸ್ಥಾನದ ಗಮನ ಸೆಳೆಯುತ್ತಿದೆ.
ತಿರುಮಲದಲ್ಲಿ ಹೋಟೆಲ್ ಗಳ ಜಪ್ತಿ, ಲೈಸೆನ್ಸ್ ರದ್ದು..
ತಿರುಮಲದಲ್ಲಿ ನಿಯಮಗಳನ್ನು ಪಾಲಿಸದ ಹೋಟೆಲ್‌ಗಳು ಮತ್ತು ವಾಹನಗಳ ವಿರುದ್ಧ ಟಿಟಿಡಿ ಕ್ರಮ ಕೈಗೊಂಡಿದೆ. ತಿರುಮಲದಲ್ಲಿ ಟಿಟಿಡಿ ಎಸ್ಟೇಟ್ ಅಧಿಕಾರಿ ದಿಢೀರ್ ತಪಾಸಣೆ ನಡೆಸಿ ಅನೈರ್ಮಲ್ಯದಿಂದ ಕೂಡಿರುವ ಹಲವು ಫಾಸ್ಟ್ ಫುಡ್ ಸೆಂಟರ್ ಗಳು ಹಾಗೂ ಭಕ್ತರಿಗೆ ಹೆಚ್ಚಿನ ಬೆಲೆಗೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳನ್ನು ವಶಪಡಿಸಿಕೊಂಡಿದ್ದಾರೆ. ತಿರುಮಲ ಶ್ರೀವಾರಿಯ ವಾರ್ಷಿಕ ಬ್ರಹ್ಮೋತ್ಸವಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದರಿಂದ ತಪಾಸಣೆ ನಡೆಸಲಾಯಿತು.
ವರಾಹ ಸ್ವಾಮಿ ಅತಿಥಿ ಗೃಹದ ಬಳಿ ಇರುವ ಅಂಗಡಿಗಳು ಮತ್ತು ಫಾಸ್ಟ್ ಫುಡ್ ಆಪರೇಟರ್‌ಗಳು ಶುಚಿತ್ವವನ್ನು ಕಾಪಾಡಿಕೊಳ್ಳಲು ಮತ್ತು ನಿಗದಿಪಡಿಸಿದ ಮಿತಿಗಳ ಪ್ರಕಾರ ವ್ಯಾಪಾರ ನಡೆಸಲು ಸೂಚಿಸಲಾಗಿದೆ.












Click it and Unblock the Notifications