ಪತಿಯ ವಿರುದ್ಧ ಅಪಹರಣ ಪ್ರಕರಣ: ಇಂದೋರ್ ಹೈಕೋರ್ಟ್ ಮೊರೆ ಹೋದ ಕುಂಭಮೇಳ ವೈರಲ್ ಬೆಡಗಿ ಮೊನಾಲಿಸಾ ಭೋಸ್ಲೆ
ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುವ ವಿಡಿಯೋಗಳ ಮೂಲಕ ವೈರಲ್ ಆಗಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಮೊನಾಲಿಸಾ ಭೋಸ್ಲೆ, ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತನ್ನ ಪತಿಯ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣವನ್ನು ಪ್ರಶ್ನಿಸಿ, ಈ ವೈರಲ್ ಬೆಡಗಿ ಇಂದೋರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಧಿಕೃತ ದಾಖಲೆಗಳಲ್ಲಿ ತನ್ನ ಜನ್ಮ ವರ್ಷವನ್ನು 2009 ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. ದಾಖಲೆಗಳಲ್ಲಿ ತಾನು ಅಪ್ರಾಪ್ತೆ ಎಂದು ಬಿಂಬಿಸಲಾಗಿದ್ದು, ತನ್ನ ನಿಜವಾದ ಜನ್ಮ ದಿನಾಂಕ ಜನವರಿ 1, 2008 ಎಂದು ತಿಳಿಸಿದ್ದಾರೆ.
ಮೊನಾಲಿಸಾ ಜನನ ದಾಖಲೆಗಳಲ್ಲಿನ ದೋಷವು ಅವರ ವಿವಾಹದ ನಂತರ ಕಾನೂನು ತೊಡಕನ್ನು ಉಂಟು ಮಾಡಿತ್ತು. ಇಬ್ಬರೂ ಚಲನಚಿತ್ರ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದವರು. ಇಬ್ಬರ ನಡುವೆ ಪ್ರೀತಿ ಮೂಡಿ ಮಾರ್ಚ್ 2026 ರಲ್ಲಿ ಕೇರಳದ ದೇವಸ್ಥಾನದಲ್ಲಿ ಸ್ಥಳೀಯ ನಾಯಕರು ಮತ್ತು ಪೊಲೀಸರ ಸಮ್ಮುಖದಲ್ಲಿ ವಿವಾಹವಾಗಿದ್ದರು.

ಮದುವೆಯ ನಂತರ, ಫರ್ಮಾನ್ ಖಾನ್ ತನ್ನ ಅಪ್ರಾಪ್ತ ಮಗಳನ್ನು ಅಪಹರಿಸಿದ್ದಾನೆ ಎಂದು ಮೊನಾಲಿಸಾ ತಂದೆ, ಮಹೇಶ್ವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಂದೆ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಫರ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆದರೆ ಮೊನಾಲಿಸಾ ಈಗ ನ್ಯಾಯಾಲಯದ ಮುಂದೆ ತನ್ನ ಪತಿಯ ಪರವಾಗಿ ವಾದ ಮಂಡಿಸಿದ್ದಾರೆ. ತಾನು ಅಪ್ರಾಪ್ತಳಲ್ಲ ಕಾನೂನುಬದ್ಧವಾಗಿ ವಯಸ್ಕಳು ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ತನ್ನ ವಾದವನ್ನು ಪುಷ್ಟೀಕರಿಸಲು ತಮ್ಮ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ.
ಅವರ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಮೊನಾಲಿಸಾ ಅವರ ಸಾಮಾಜಿಕ ಮಾಧ್ಯಮ ಜನಪ್ರಿಯತೆ ಮತ್ತು ಅವರ ವಿವಾಹದ ಸುತ್ತಲಿನ ವಿವಾದವನ್ನು ಪರಿಗಣಿಸಿ, ಪ್ರಕರಣವು ವ್ಯಾಪಕ ಸಾರ್ವಜನಿಕ ಗಮನವನ್ನು ಸೆಳೆದಿದೆ. ಪ್ರಕರಣ ಇದೀಗ ಇಂದೋರ್ ಹೈಕೋರ್ಟ್ ಮುಂದಿದೆ.
ಇದಕ್ಕೂ ಮೊದಲು, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (ಎನ್‌ಸಿಎಸ್‌ಟಿ) ತನಿಖೆಯ ನಂತರ ಮೊನಾಲಿಯಾ ಭೋಸ್ಲೆ ಅವರನ್ನು ಅಪ್ರಾಪ್ತೆ ಎಂದು ಪರಿಗಣಿಸಿತ್ತು. ಇದು ಅವರ ಪತಿ ಫರ್ಮಾನ್ ಖಾನ್ ಅನ್ನು ಕಾನೂನಿನ ಕುಣಿಕೆಯಲ್ಲಿ ಸಿಲುಕಿಸಿತ್ತು. ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪೋಕ್ಸೊ ಅಡಿಯಲ್ಲಿ ಕೂಡಾ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಈ ನಡುವೆ ಮಹೇಶ್ವರ ಮುನ್ಸಿಪಲ್ ಕೌನ್ಸಿಲ್ ಮೊನಾಲಿಸಾ ಅವರಿಗೆ ನೀಡಿದ ಜನನ ಪ್ರಮಾಣಪತ್ರವು ತಪ್ಪಾಗಿದೆ ಎಂದು ತನಿಖಾ ತಂಡ ಹೇಳಿದೆ. ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಮೊನಾಲಿಸಾ ಡಿಸೆಂಬರ್ 30, 2009 ರಂದು ಸಂಜೆ 5:50 ಕ್ಕೆ ಜನಿಸಿದ್ದರು ಎನ್ನಲಾಗಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications