KSRTC Tour Packages: ಕೆಎಸ್‌ಆರ್‌ಟಿಸಿಯಿಂದ ಲಕ್ಷದ್ವೀಪ ಹಾಗೂ ಹೈದರಾಬಾದ್ ಟೂರ್ ಪ್ಯಾಕೇಜ್.. ಆನ್‌ಲೈನ್ ಬುಕಿಂಗ್ ವಿವರ
KSRTC Tour Package: ಕೆಎಸ್‌ಆರ್‌ಟಿಸಿಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಕೈಗೆಟಕುವ ದರದಲ್ಲಿ ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಹಾಗೆಯೇ ಇದೀಗ ಲಕ್ಷದ್ವೀಪ ಹಾಗೂ ಹೈದರಾಬಾದ್ ಪ್ರವಾಸ ಪ್ಯಾಕೇಜ್‌ಗಳನ್ನು ಸೆಪ್ಟೆಂಬರ್ 22 ರಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದೆ. ಅಷ್ಟಕ್ಕೂ ಇದು ಕರ್ನಾಟಕ ಸಾರಿಗೆಯಿಂದಲ್ಲ, ಕೇರಳದ್ದು. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ತನ್ನ 'ಬಜೆಟ್ ಟೂರಿಸಂ ಸೆಲ್' ವತಿಯಿಂದ ಬಹುನಿರೀಕ್ಷಿತ ಲಕ್ಷದ್ವೀಪ ಮತ್ತು ಹೈದರಾಬಾದ್ ಪ್ರವಾಸ ಪ್ಯಾಕೇಜ್‌ಗಳಿಗೆ ಸೆಪ್ಟೆಂಬರ್ 22ರಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ. ಜೊತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಮತ್ತು ಭಾರತೀಯ ರೈಲ್ವೆ ಮಾದರಿಯ 'ವೇಟಿಂಗ್-ಲಿಸ್ಟ್' ಸೌಲಭ್ಯವನ್ನು ಸಹ ಪರಿಚಯಿಸಲಿದೆ.

ತಿರುವನಂತಪುರಂನಲ್ಲಿ ಹೊಸ ಯೋಜನೆಗಳಿಗೆ ಚಾಲನೆ
ತಿರುವನಂತಪುರಂನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಸಿ.ಪಿ.ಜಾನ್ ಅವರು ಈ ಹೊಸ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಅವರು ಮೊದಲ ಲಕ್ಷದ್ವೀಪ ಪ್ರವಾಸಕ್ಕೆ ಆಯ್ಕೆಯಾದ 10 ಪ್ರಯಾಣಿಕರನ್ನು ಸನ್ಮಾನಿಸಲಿದ್ದಾರೆ ಹಾಗೂ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಿಬ್ಬಂದಿ ಮತ್ತು ಘಟಕಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೊಸ ಸಾಫ್ಟ್‌ವೇರ್ ಮೂಲಕ ಪ್ರಯಾಣಿಕರು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.
ಪ್ರವಾಸ ಪ್ಯಾಕೇಜ್‌ಗಳ ವಿವರ
* ಹೈದರಾಬಾದ್ ಪ್ರವಾಸ: 3 ದಿನ ಹಾಗೂ 2 ರಾತ್ರಿಗಳು ಮತ್ತು 2 ದಿನ ಹಾಗೂ 1 ರಾತ್ರಿ ಹೀಗೆ ಎರಡು ಮಾದರಿಯ ಪ್ಯಾಕೇಜ್‌ಗಳಿದ್ದು, ವಸತಿ, ಊಟ ಮತ್ತು ಪ್ರವಾಸಿ ತಾಣಗಳ ಪ್ರವೇಶ ಶುಲ್ಕಗಳು ಒಳಗೊಂಡಿರುತ್ತವೆ.
* ಲಕ್ಷದ್ವೀಪ ಪ್ರವಾಸ: ಇದು 3 ರಾತ್ರಿ ಹಾಗೂ 4 ದಿನಗಳ ಬಜೆಟ್ ಸ್ನೇಹಿ ಪ್ರವಾಸವಾಗಿದೆ. ಈ ಪ್ರವಾಸವು ಕೊಚ್ಚಿಯಿಂದ ವಿಮಾನ ಪ್ರಯಾಣದ ಮೂಲಕ ಪ್ರಾರಂಭವಾಗಲಿದ್ದು, ಇದು ಅಗತ್ತಿ ಮತ್ತು ಕಲ್ಪಟ್ಟಿ ದ್ವೀಪಗಳನ್ನು ಒಳಗೊಂಡಿರಲಿದೆ. ಪ್ರಯಾಣಿಕರು ಹೋಮ್‌ಸ್ಟೇ ಅಥವಾ ರೆಸಾರ್ಟ್ ವಸತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದರಲ್ಲಿ ಪ್ರವೇಶ ಪರವಾನಗಿ, ಏರ್‌ಪೋರ್ಟ್ ಟ್ರಾನ್ಸ್‌ಫರ್, ಇಬ್ಬರಿಗೆ ಒಂದು ಕೊಠಡಿಯಂತೆ ವಸತಿ, ಊಟ, ವೈ-ಫೈ ಮತ್ತು ವಿಮಾ ಸೌಲಭ್ಯ ಲಭ್ಯವಿರುತ್ತದೆ. ಹೊಸ ಸಾಫ್ಟ್‌ವೇರ್ ಮೂಲಕ ಮನೆಯಲ್ಲೇ ಕುಳಿತು ಸುಲಭವಾಗಿ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.


Click it and Unblock the Notifications
