ಕೋಲ್ಕತ್ತಾ ಡಾಕ್ಟರ್ ಅತ್ಯಾಚಾರ-ಕೊಲೆ ಪ್ರಕರಣ; ಬೇಕಾದರೆ ಗಲ್ಲಿಗೆ ಹಾಕಿ ಎಂದ ಆರೋಪಿ!
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲೇ 31 ವರ್ಷದ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣ, ದೇಶಾದ್ಯಂತ ವ್ಯಾಪಕ ಸುದ್ದಿಯಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ಅಲ್ಲಿನ ವೈದ್ಯರನ್ನು ಕೆರಳಿಸಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಬಂಧನದ ಸಂದರ್ಭದಲ್ಲಿ ಆರೋಪಿ ನಡೆದುಕೊಂಡ ರೀತಿಗೆ ಪೊಲೀಸರು ಕೂಡ ಶಾಕ್ ಆಗಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಆರೋಪಿಯನ್ನು ಸಂಜಯ್ ರಾಯ್ ಎಂದು ಗುರುತಿಸಲಾಗಿದೆ. ಈತ ಆಸ್ಪತ್ರೆಯ ಉದ್ಯೋಗಿಯಲ್ಲ, ಆದರೂ ಕ್ಯಾಂಪಸ್‌ನ ಕಟ್ಟಡಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಕೋಲ್ಕತ್ತಾ ಪೊಲೀಸರೊಂದಿಗೆ ನಾಗರಿಕ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದ ಈತ ಟ್ರಾಫಿಕ್ ನಿರ್ವಹಣೆಯಲ್ಲಿ ಸಹಾಯ ಮಾಡುತ್ತಿದ್ದ. ಇವರಿಗೆ ಪೊಲೀಸ್ ಸಿಬ್ಬಂದಿಗೆ ಸಿಗುವ ಸೌಲಭ್ಯ ಸಿಗುವುದಿಲ್ಲ, ತಿಂಗಳಿಗೆ ₹12,000 ಸಂಬಳ ಪಡೆಯುತ್ತಾರೆ.

ಸಂಜಯ್ ರಾಯ್ 2019ರಲ್ಲಿ ಕೋಲ್ಕತ್ತಾ ಪೊಲೀಸರ ವಿಪತ್ತು ನಿರ್ವಹಣಾ ತಂಡಕ್ಕೆ ಸ್ವಯಂಸೇವಕನಾಗಿ ಸೇರಿಕೊಂಡಿದ್ದ, ಬಳಿಕ ಪೊಲೀಸ್ ಕಲ್ಯಾಣ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿಂದ ಆತ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೊಲೀಸ್ ಹೊರಠಾಣೆಯಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದ.
ಆಸ್ಪತ್ರೆಯಲ್ಲೇ ದಂಧೆ
ಸಂಜಯ್ ರಾಯ್ ಒಬ್ಬ ಲಂಚಕೋರ ಕೂಡ ಆಗಿದ್ದ. ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಲು ಈತನಿಗೆ ಸಂಬಂಧಿಕರು ಹಣ ಕೊಡಬೇಕಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲದೇ ಇದ್ದಾಗ ಹತ್ತಿರದ ನರ್ಸಿಂಗ್ ಹೋಂಗಳಲ್ಲಿ ಬೆಡ್ ಸಿಗುತ್ತದೆ ಎಂದು ರೋಗಿಗಳ ಸಂಬಂಧಿಕರ ಬಳ ಹಣ ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಪೊಲೀಸ್ ಅಲ್ಲದೇ ಇದ್ದರೂ, ನಿಜವಾದ ಪೊಲೀಸ್ ಅಧಿಕಾರಿಯಂತೆ ವರ್ತಿಸುತ್ತಿದ್ದ. ಕೆಪಿ ಪೋಲಿಸ್ ಎಂದು ಟೀ ಶರ್ಟ್ ಮೇಲೆ ಹಾಕಿಕೊಂಡಿದ್ದ. ತನ್ನ ಬೈಕ್ ಮೇಲೂ ಕೋಲ್ಕತ್ತಾ ಪೊಲೀಸ್ ಎಂದು ಹಾಕಿಸಿಕೊಂಡಿದ್ದ.
ಗಲ್ಲಿಗೆ ಹಾಕಿ ಎಂದ ಸಂಜಯ್ ರಾಯ್
ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ ಚುರುಕುಗೊಳಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿ ಸಂಜಯ್ ರಾಯ್‌ನನ್ನು ಬಂಧಿಸಿದ್ದರು. ಪೊಲೀಸರು ಪ್ರಶ್ನಿಸಲು ಆರಂಭಿಸುತ್ತಿದ್ದಂತೆ ಆತ ನಿಜ ಒಪ್ಪಿಕೊಂಡಿದ್ದಾನೆ. ತನ್ನ ಕೃತ್ಯಕ್ಕೆ ಯಾವುದೇ ಪಶ್ಚಾತಾಪ ಪಡದ ಆತ, ನೀವು ಬೇಕಾದರೆ ನನ್ನನ್ನು ಗಲ್ಲಿಗೆ ಹಾಕಿ ಎಂದು ಅಸಡ್ಡೆಯಿಂದ ಹೇಳಿದ್ದಾನೆ. ಆತನ ವರ್ತನೆ ನೋಡಿ ಪೊಲೀಸರು ಕೂಡ ಶಾಕ್ ಆಗಿದ್ದಾರೆ.
ಆತನ ಮೊಬೈಲ್ ಪರಿಶೀಲನೆ ಮಾಡಿದಾಗ ಆತನೊಬ್ಬ ಸೈಕೋ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಮೊಬೈಲ್ ತುಂಬಾ ಅಶ್ಲೀಲ ವಿಡಿಯೋಗಳೇ ಇದ್ದವು ಎಂದು ಪೊಲೀಸರು ಹೇಳಿದ್ದಾರೆ. ಸಂಜಯ್ ರಾಯ್ ನಾಲ್ಕು ಮದುವೆಯಾಗಿದ್ದು, ಈತನ ಕಾಟಕ್ಕೆ ಮೊದಲ ಮೂವರು ಹೆಂಡತಿಯರು ಇವನಿಂದ ದೂರವಾಗಿದ್ದರೆ, ನಾಲ್ಕನೇ ಹೆಂಡತಿ ಕ್ಯಾನ್ಸರ್ ಕಾಯಿಲೆಯಿಂದ ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.












Click it and Unblock the Notifications