ಗೋಧಿ ಹಿಟ್ಟು, ಮೈದಾ, ರವೆ ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದ್ಯಾಕೆ?
ನವದೆಹಲಿ, ಆಗಸ್ಟ್ 28: ಜಾಗತಿಕ ವಿದ್ಯಮಾನಗಳ ಕಾರಣದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ ಭೀತಿಯಿಂದ ಭಾರತ ಸರ್ಕಾರ ಗೋಧಿ ಹಿಟ್ಟು, ಮೈದಾ, ರವೆ ರಫ್ತು ಮಾಡುವುದಕ್ಕೆ ನಿರ್ಬಂಧ ವಿಧಿಸಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳ ಬೆಲೆ ಏರಿಕೆಗೆ ಬೀಳುವ ಸಾಧ್ಯತೆ ಇದೆ.
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಸೂಚಿಸಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಭಾರತ ಸರ್ಕಾರದ ಅನುಮತಿಗೆ ಒಳಪಟ್ಟು ಈ ವಸ್ತುಗಳನ್ನು ರಫ್ತು ಮಾಡಲು ಅನುಮತಿ ನೀಡಲಾಗುವುದು ಎಂದು ಹೇಳಿದೆ.
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಅಧಿಸೂಚನೆಯ ಪ್ರಕಾರ, "ಐಟಂಗಳ ರಫ್ತು ನೀತಿ (ಗೋಧಿ ಅಥವಾ ಮೆಸ್ಲಿನ್ ಹಿಟ್ಟು, ಮೈದಾ, ರವೆ) ಯನ್ನು ನಿಷೇಧಿಸಲಾಗಿದೆ" ಎಂದು ತಿದ್ದುಪಡಿ ಮಾಡಲಾಗಿದೆ.
ವಿದೇಶಿ ವ್ಯಾಪಾರ ನೀತಿ 2015-20 ರ ಅಡಿಯಲ್ಲಿನ ನಿಬಂಧನೆಗಳು, ಪರಿವರ್ತನೆಯ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ, ಈ ಅಧಿಸೂಚನೆಯ ಅಡಿಯಲ್ಲಿ "ಅನ್ವಯಿಸುವುದಿಲ್ಲ" ಎಂದು ಹೇಳಿದೆ. ನಿರ್ಬಂಧಿತ ವರ್ಗದ ಅಡಿಯಲ್ಲಿ ಸರಕುಗಳನ್ನು ರಫ್ತುಮಾಡಲು ರಫ್ತುದಾರನಿಗೆ ಪರವಾನಗಿ ಅಥವಾ ಅನುಮತಿಯ ಅಗತ್ಯವಿರುತ್ತದೆ.

ತಿದ್ದುಪಡಿ ಪ್ರಸ್ತಾವನೆಗೆ ಕೇಂದ್ರ ಅನುಮೋದನೆ
ಆಗಸ್ಟ್ 25 ರಂದು, ಸರಕುಗಳ ಏರುತ್ತಿರುವ ಬೆಲೆಗಳನ್ನು ತಡೆಯಲು ಗೋಧಿ ಅಥವಾ ಮೆಸ್ಲಿನ್ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧ ಹಾಕಲು ಸರ್ಕಾರ ನಿರ್ಧರಿಸಿತು. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
"ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು. ರಫ್ತು ನಿರ್ಬಂಧಗಳು/ನಿಷೇಧದಿಂದ ಗೋಧಿ ಅಥವಾ ಮೆಸ್ಲಿನ್ ಹಿಟ್ಟಿನ ವಿನಾಯಿತಿ ನೀತಿಯ ತಿದ್ದುಪಡಿಯ ಪ್ರಸ್ತಾಪವನ್ನು ಅನುಮೋದಿಸಿದೆ" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ರಫ್ತಿನ ಮೇಲೆ ಭಾರತ ನಿರ್ಬಂಧ ವಿಧಿಸಿದ್ಯಾಕೆ?
ರಷ್ಯಾ ಮತ್ತು ಉಕ್ರೇನ್ ಗೋಧಿಯ ಪ್ರಮುಖ ರಫ್ತುದಾರರಾಗಿದ್ದು, ಜಾಗತಿಕ ಗೋಧಿ ವ್ಯಾಪಾರದ ಸುಮಾರು ನಾಲ್ಕನೇ ಒಂದು ಭಾಗವನ್ನು ಹೊಂದಿದೆ. ಉಭಯ ದೇಶಗಳ ನಡುವಿನ ಯುದ್ಧವು ಜಾಗತಿಕ ಗೋಧಿ ಪೂರೈಕೆ ಸರಪಳಿ ಅಡೆತಡೆಗಳಿಗೆ ಕಾರಣವಾಗಿದೆ, ಹೀಗಾಗಿ ಭಾರತೀಯ ಗೋಧಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಏರಿಕೆಯಾಗಿದೆ.
ದೇಶದ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಸಲುವಾಗಿ, ಸರ್ಕಾರವು ಮೇ ತಿಂಗಳಲ್ಲಿ ಗೋಧಿ ರಫ್ತು ನಿಷೇಧಿಸಿತು. ಆದಾಗ್ಯೂ, ಇದು ಗೋಧಿ ಹಿಟ್ಟಿನ ಸಾಗರೋತ್ತರ ಬೇಡಿಕೆಯಲ್ಲಿ ಜಿಗಿತವನ್ನು ಉಂಟುಮಾಡಿತು. 2021 ರ ಇದೇ ಅವಧಿಗೆ ಹೋಲಿಸಿದರೆ 2022 ರ ಏಪ್ರಿಲ್-ಜುಲೈ ಅವಧಿಯಲ್ಲಿ ಭಾರತದಿಂದ ಗೋಧಿ ಹಿಟ್ಟು ರಫ್ತು ಶೇಕಡಾ 200 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ
ಸಾಗರೋತ್ತರದಲ್ಲಿ ಗೋಧಿ ಹಿಟ್ಟಿಗೆ ಹೆಚ್ಚಿದ ಬೇಡಿಕೆಯು ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಗಮನಾರ್ಹ ಬೆಲೆ ಏರಿಕೆಗೆ ಕಾರಣವಾಯಿತು. 2021-22ರಲ್ಲಿ ಭಾರತವು 246 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಗೋಧಿ ಹಿಟ್ಟನ್ನು ರಫ್ತು ಮಾಡಿದೆ. ಈ ಆರ್ಥಿಕ ವರ್ಷದಲ್ಲಿ ಏಪ್ರಿಲ್-ಜೂನ್ ಅವಧಿಯಲ್ಲಿ ರಫ್ತು ಸುಮಾರು 128 ಮಿಲಿಯನ್ ಡಾಲರ್ ಇತ್ತು.
ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿರ್ವಹಿಸಿದ ಅಂಕಿಅಂಶಗಳ ಪ್ರಕಾರ, ಗೋಧಿಯ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆಯು ಆಗಸ್ಟ್ 22 ರ ವೇಳೆಗೆ ಪ್ರತಿ ಕೆಜಿಗೆ 25.41 ರೂ.ಗೆ ಹೋಲಿಸಿದರೆ 22 ಪ್ರತಿಶತದಷ್ಟು ಏರಿಕೆಯಾಗಿದ್ದು, ಪ್ರತಿ ಕೆಜಿಗೆ 31.04 ಆಗಿದೆ.
ಗೋಧಿ ಹಿಟ್ಟಿನ ಸರಾಸರಿ ಚಿಲ್ಲರೆ ದರವು ಈ ಹಿಂದೆ 30.04 ರೂ.ಗೆ ಹೋಲಿಸಿದರೆ ಶೇಕಡಾ 17 ಕ್ಕಿಂತ ಹೆಚ್ಚಾಗಿ ಕೆಜಿಗೆ 35.17 ರೂ.ಗೆ ಏರಿಕೆಯಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ.

ಗೋಧಿ ರಫ್ತಿಗೆ ನಿರ್ಬಂಧ ವಿಧಿಸಿದ್ದ ಕೇಂದ್ರ
ಕಡಿಮೆ ಗೋಧಿ ಇಳುವರಿ ಮತ್ತು ಸಂಗ್ರಹಣೆ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡ ಪರಿಣಾಮವಾಗಿ ಮಾರ್ಚ್ ತಿಂಗಳಿನಿಂದ ಗೋಧಿ ಬೆಲೆಗಳಲ್ಲಿ ದೇಶೀಯವಾಗಿ ಏರಿಕೆಯಾಗುತ್ತಿದೆ. ಮತ್ತಷ್ಟು ಬೆಲೆ ಏರಿಕೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಶಾಖದ ಅಲೆಯ ಪರಿಣಾಮದಿಂದ ಗೋಧಿ ಇಳುವರಿಯಲ್ಲಿ ಕುಸಿತ ಕಾಣಬಹುದು ಎಂಬ ಆತಂಕದ ನಡುವೆ, ಬೆಲೆಗಳನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ಭಾರತವು ಮೇ ತಿಂಗಳಲ್ಲಿ ಗೋಧಿ ರಫ್ತುಗಳನ್ನು ನಿಷೇಧಿಸಿತು.












Click it and Unblock the Notifications