ಶ್ರಮೇವ ಜಯತೆ ಯೋಜನೆ ವಿಶೇಷವೇನು?
'ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ. ಶ್ರಮಿಕರು ಈ ದೇಶದ ಅಮೂಲ್ಯ ಆಸ್ತಿ. ಅವರ ಬಗೆಗಿನ ನಮ್ಮ ಭಾವನೆ ಬದಲಾಗಬೇಕಿದೆ. ಬದಲಾವಣೆ ಮಾಡಲೇಬೇಕಾದ ಸಮಯ ಇದೀಗ ಬಂದಿದೆ. ಎಲ್ಲ ಶ್ರಮಿಕರ ಜೀವನ ಸುಧಾರಿಸಬೇಕಿದೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 'ಶ್ರಮೇವ ಜಯತೆ' ಯೋಜನೆ ಜಾರಿಗೆ ತಂದಿದೆ' ಎಂದು ಪ್ರಧಾನಿ ಅವರು ಯೋಜನೆಗೆ ಚಾಲನೆ ನೀಡಿ ಹೇಳಿದ್ದಾರೆ.
ಎನ್ ಡಿಎ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಗೆ ಪ್ರಧಾನಿ ಮೋದಿ ಅವರು ಗುರುವಾರ ದೆಹಲಿಯ ವಿಜ್ಞಾನ ಭವನದಲ್ಲಿ ಚಾಲನೆ ನೀಡಿದ್ದಾರೆ. ಶ್ರಮೇವ ಜಯತೆ ಯೋಜನೆ ಬಗ್ಗೆ ವಿವರಣೆ ಮುಂದಿದೆ.
ಶ್ರಮೇವ ಜಯತೆ ಅಥವಾ ಶ್ರಮಿಕಾ ಸುವಿಧಾ ಯೋಜನೆ ಅಂದರೇನು?
* ಶ್ರಮೇವ ಜಯತೆ ಯೋಜನೆ ಪೂರ್ಣ ಹೆಸರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಶ್ರಮಮೇವ ಜಯತೆ ಕಾರ್ಯಕ್ರಮ. [ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಭಾರತೀಯ ಜನತಾ ಸಂಘದ ಮುಖಂಡರಾಗಿದ್ದವರು. ಏಕಾತ್ಮ ಮಾನವತಾವಾದ ಎಂಬ ಪ್ರಬಂಧ ಮಂಡಿಸಿ ಸಾಮ್ಯವಾದ ಮತ್ತು ಬಂಡವಾಳ ಶಾಹಿ ತತ್ವಗಳನ್ನು, ವಿಮರ್ಶಿಸಿ, ಅದಕ್ಕೆ ಬದಲಾಗಿ ರಾಜಕೀಯ ಮತ್ತು ಆಡಳಿತ ಪದ್ಧತಿಗೆ ಪ್ರಕೃತಿ ಮತ್ತು ಸೃಷ್ಟಿಯ ನಿಯಮಗಳಿಗೆ ಪೂರಕವಾದ ಮಾರ್ಗಗಳನ್ನು ಸೂಚಿಸಿದ್ದರು.]
* ಈ ಕಾರ್ಯಕ್ರಮದ ಅಡಿಯಲ್ಲಿ ಪ್ರತಿಯೊಬ್ಬ ಕಾರ್ಮಿಕರು ವಿಶಿಷ್ಟ ಕಾರ್ಮಿಕ ಗುರುತಿನ ಸಂಖ್ಯೆ(LIN) ಪಡೆಯಲಿದ್ದಾರೆ. ಇದಕ್ಕಾಗಿ ಆನ್ ಲೈನ್ ನೋಂದಣಿ ಕಡ್ಡಾಯ.
* ಕಾರ್ಮಿಕ ಸ್ನೇಹಿ ವಾತಾವರಣ ಸೃಷ್ಟಿ ಮುಖ್ಯ ಆದ್ಯತೆಯಾಗಿದ್ದು, ಕೈಗಾರಿಕಾ ಅಭಿವೃದ್ಧಿ ಹಾಗೂ ವ್ಯಾಪಾರ ಸುಸೂತ್ರವಾಗಿ ನಡೆಯಲು ಯೋಜನೆ ಸಹಕಾರಿಯಾಗಲಿದೆ.
* ಈ ಯೋಜನೆಯಿಂದ ಸುಮಾರು 4 ಕೋಟಿ ಗೂ ಅಧಿಕ ಕಾರ್ಮಿಕರು ಲಾಭ ಪಡೆಯುವ ನಿರೀಕ್ಷೆಯಿದೆ. [ಇನ್ಸ್ ಪೆಕ್ಟರ್ ರಾಜ್ ಬಲಿ ಹಾಕಲು ಮೋದಿ ಯೋಜನೆ]

ಯೋಜನೆಯ ಇನ್ನಷ್ಟು ಉಪಯೋಗಗಳು:
* ಪ್ರಧಾನಿ ಮೋದಿ ಅವರು ಏಕೀಕೃತ ಕಾರ್ಮಿಕ ವೆಬ್ ಪೋರ್ಟಲ್ ಶ್ರಮ ಸುವಿಧಾ ಲೋಕಾರ್ಪಣೆ ಮಾಡಿದ್ದಾರೆ.
* ಉದ್ಯೋಗಿಗಳ ಭವಿಷ್ಯ ನಿಧಿ ಬಗ್ಗೆ ಸುಲಭದಲ್ಲಿ ಮಾಹಿತಿ ಪಡೆಯ ಲು ಜಾಗತಿಕ ಖಾತೆ ಸಂಖ್ಯೆ (Universal Account Number) ಜಾರಿಗೆ ತಂದಿದ್ದಾರೆ.
* ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗಳ ಬಗ್ಗೆ ವಿವರಗಳನ್ನು ಒಂದೇ ಕಡೆ ಸುಲಭವಾಗಿ ಪಡೆಯಲು UAN ಸಹಕಾರಿ.
* ಒಂದು ವೇಳೆ ಕಾರ್ಮಿಕರು ಒಂದು ಸಂಸ್ಥೆ ತೊರೆದು ಮತ್ತೊಂದು ಸಂಸ್ಥೆ ಸೇರಿದರೂ UAN ಬದಲಾಗುವುದಿಲ್ಲ. UAN ಸಂಸ್ಥೆಯಿಂದ ಸಂಸ್ಥೆಗೆ ವರ್ಗಾವಣೆ ಸುಲಭ ನಿಮ್ಮ ವೃತ್ತಿ ಬದುಕಿನುದ್ದಕ್ಕೂ ಇದು ಸಾಧ್ಯವಿದೆ.
* ಸುಮಾರು 1 ಲಕ್ಷಕ್ಕೂ ಅಧಿಕ ಅಪ್ರೆಂಟಿಸ್ ಗಳ ಏಳಿಗೆಗಾಗಿ ಅಪ್ರೆಂಟಿಸ್ ಪ್ರೋತ್ಸಾಹನ ಯೋಜನೆಯನ್ನು ಕೂಡಾ ಜಾರಿಗೊಳಿಸಲಾಗಿದೆ.
* ಕೈಗಾರಿಕೆಗಳಲ್ಲಿ ದಾಖಲಾತಿ ಇಲ್ಲದೆ ದುಡಿಯುವ ಕಾರ್ಮಿಕರು ಮತ್ತು ಖಾಯಂ ಉದ್ಯೋಗಿಗಳ ಮಾಹಿತಿಯನ್ನು ಕಟ್ಟುನಿಟ್ಟಾಗಿ ದಾಖಲಿಸಲಾಗುತ್ತದೆ ಮತ್ತು ಪ್ರತಿ ತಿಂಗಳು ಅದನ್ನು ಪರಾಮರ್ಶಿಸಿ ಬದಲಾವಣೆಯಾಗಿದ್ದಲ್ಲಿ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡುವಂತಹ ವ್ಯವಸ್ಥೆಯೂ ಇದರಲ್ಲಿದೆ.
* ಕಾರ್ಮಿಕ ಇನ್ಸ್ ಪೆಕ್ಟರ್ ಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಿಕೊಡುವ ಜವಾಬ್ದಾರಿ ನೀಡಲಾಗಿದೆ. ನಾಲ್ಕು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಜೊತೆಗೆ ಕಾರ್ಮಿಕ ಪರಿಶೀಲನಾ ಯೋಜನೆ ಜಾರಿಗೆ ಬರಲಿದೆ.
ಯಾರು ಯಾರು ಭಾಗವಹಿಸಿದ್ದರು?
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 35 ರಾಜ್ಯ ಸರ್ಕಾರಿ ಕಾರ್ಮಿಕರು, ಆರೋಗ್ಯ ಮತ್ತು ವೃತ್ತಿಪರ ತರಬೇತಿ ಖಾತೆ ಸಚಿವರು ಹಾಗೂ ಇದೇ ಇಲಾಖೆಯ 60ಕ್ಕೂ ಅಧಿಕ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.
ಮೇಕ್ ಇನ್ ಇಂಡಿಯಾ ಯಶಸ್ಸಿಗೆ ಈ ಯೋಜನೆ
ಮೇಕ್ ಇನ್ ಇಂಡಿಯಾ ಯಶಸ್ಸಿಗೆ ನಾವು ಈಗಿನಿಂದಲೇ ಪ್ರಯಾಸ ಪಡಬೇಕು. ಇದರ ಮೂಲಕ ವ್ಯವಹಾರಿಕವಾಗಿ ನಾವು ವಿಶ್ವದಲ್ಲೇ ಮುಂದೆ ಬರಲು ಸಾಧ್ಯ ಎಂದು ಹೇಳಿದರು. ಬಹಳ ವರ್ಷಗಳಿಂದ ಕೈಗಾರಿಕಾ ವಲಯವನ್ನು ಕಾಡುತ್ತಿರುವ ಶ್ರಮಿಕರ ಮೇಲಿನ ದರ್ಬಾರು, ದಬ್ಬಾಳಿಕೆ ಕಾರ್ಯವನ್ನು ದಮನಗೊಳಿಸಲು ಈ ಹೊಸ ಯೋಜನೆ ನೆರವಾಗಲಿದೆ. ಕಾರ್ಮಿಕ ಸ್ನೇಹಿ ವಾತಾವರಣ ಸೃಷ್ಟಿಯಾಗಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications