ನಾನು ನಂದಿನಿ ದೆಹಲಿಗೆ ಬಂದೀನಿ: ನ. 21ರಿಂದ ದೆಹಲಿಯಲ್ಲಿ ನಂದಿನಿ ಕಲರವ!
ಬೆಂಗಳೂರು, ನವೆಂಬರ್ 20: ಕರ್ನಾಟಕದಲ್ಲಿ ಮನೆ ಮಾತಾಗಿರುವ ಕೆಎಂಎಫ್‌ನ 'ನಂದಿನಿ' ಬ್ರಾಂಡ್ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿ ನವದೆಹಲಿಗೆ ಹೊರಟಿವೆ. ಕೆಎಂಎಫ್ ಈ ತಿಂಗಳು ಇಡ್ಲಿ ಮತ್ತು ದೋಸೆ ಹಿಟ್ಟು ಮತ್ತು ನವದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆಯನ್ನು ನೀಡಲಿದೆ. ನವೆಂಬರ್ 21ರಿಂದ ದೆಹಲಿಯಲ್ಲಿ ನಂದಿನಿ ಉತ್ಪನ್ನಗಳು ಜನರಿಗೆ ಲಭ್ಯವಾಗಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 21ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಂದಿನಿ ಬ್ರಾಂಡ್‌ನ ಹಾಲು, ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಹೊರ ರಾಜ್ಯದಲ್ಲಿಯೂ ನಂದಿನಿ ತನ್ನ ಮಾರುಕಟ್ಟೆಯನ್ನು ವಿಸ್ತರಣೆ ಮಾಡಲಿದೆ.

ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಎಂ. ಕೆ. ಜಗದೀಶ್ ಮಾತನಾಡಿ, "ನವದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 21ರಂದು ಚಾಲನೆ ನೀಡಲಿದ್ದಾರೆ. ಬೆಂಗಳೂರು ನಗರದಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟಕ್ಕೆ ನವೆಂಬರ್ 26ರಂದು ಚಾಲನೆ ಸಿಗಲಿದೆ" ಎಂದು ಹೇಳಿದ್ದಾರೆ.
ಬೇರೆ ಬೇರೆ ರಾಜ್ಯದಲ್ಲಿ ಔಟ್‌ಲೆಟ್: ಈಗಾಗಲೇ ಕೆಎಂಎಫ್‌ನ ನಂದಿನಿ ಉತ್ಪನ್ನಗಳು ಮಹಾರಾಷ್ಟ್ರದಲ್ಲಿ ಮುಂಬೈ, ನಾಗ್ಪುರ, ಪುಣೆ, ಸೊಲ್ಹಾಪುರ, ಗೋವಾ, ಹೈದರಾಬಾದ್, ಚೆನ್ನೈ ಮತ್ತು ಕೇರಳದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಲಾಗುತ್ತಿದೆ.
ದೆಹಲಿಯಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭಿಸುವ ಮೂಲಕ ಕೆಎಂಎಫ್ ಉತ್ತರ ಭಾರತದ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈಗಾಗಲೇ ಈ ಭಾಗದಲ್ಲಿ ಗುಜರಾತ್‌ನ ಅಮುಲ್ ಉತ್ಪನ್ನಗಳು ಪ್ರಸಿದ್ಧಿಯಾಗಿದ್ದು, ಇವುಗಳ ಜೊತೆ ನಂದಿನಿ ಸ್ಪರ್ಧೆ ಮಾಡಲಿದೆ.
ಕೆಲವು ತಿಂಗಳ ಹಿಂದೆ ದೆಹಲಿಗೆ ಹಸುವಿನ ಹಾಲು ಪೂರೈಕೆ ಮಾಡಲು ಕೆಎಂಎಫ್‌ಗೆ ದೆಹಲಿ ಸರ್ಕಾರ ಬೇಡಿಕೆಯನ್ನು ಸಲ್ಲಿಕೆ ಮಾಡಿತ್ತು. ಆರಂಭಿಕ ಹಂತದಲ್ಲಿ ನಿತ್ಯ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಕೆ ಮಾಡಲು ಕೆಎಂಎಫ್ ಮುಂದಾಗಿದೆ. ಕೆಎಂಎಫ್ ಜೊತೆ ಸುಮಾರು ನಾಲ್ಕೈದು ತಿಂಗಳಿನಿಂದ ದೆಹಲಿ ಸರ್ಕಾರ ಮಾತುಕತೆ ನಡೆಸುತ್ತಿದ್ದು, ಈಗ ಔಟ್‌ಲೆಟ್ ತೆರೆಯಲಾಗುತ್ತಿದೆ.
ಸ್ಥಗಿತಗೊಂಡಿದ್ದ ಹಾಲು ಪೂರೈಕೆ: ನವದೆಹಲಿಗೆ 29 ವರ್ಷಗಳ ಹಿಂದೆ ನಂದಿನಿ ಹಾಲು ಪೂರೈಕೆಯಾಗುತ್ತಿತ್ತು. ಆದರೆ ಬಳಿಕ ಅದು ಕೆಲವು ಕಾರಣಗಳಿಗೆ ಸ್ಥಗಿತಗೊಂಡಿತ್ತು. ದೆಹಲಿಯಲ್ಲಿ ಸದ್ಯ ಅಮೂಲ್, ಮದರ್ ಡೈರಿಯ ಹಾಲು ಮತ್ತು ಇತರ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಈಗ ದೆಹಲಿ ಮಾರುಕಟ್ಟೆಗೆ ನಂದಿನಿ ಸಹ ಲಗ್ಗೆ ಇಡುವ ಮೂಲಕ ಪೈಪೋಟಿಯನ್ನು ನೀಡಲಿದೆ.
ಕೆಎಂಎಫ್ ಮಂಡ್ಯ ಹಾಲು ಒಕ್ಕೂಟದ ಮೂಲಕ ದೆಹಲಿಗೆ ಹಾಲನ್ನು ಪೂರೈಕೆ ಮಾಡಲಿದೆ. ಇದಕ್ಕಾಗಿ ಈಗಾಗಲೇ ಹಾಲು ಸಾಗಣೆ ಮಾಡಲು ಕೆಎಂಎಫ್ ಟೆಂಡರ್ ಕರೆದಿದೆ. ಮಂಡ್ಯದಿಂದ ದೆಹಲಿಗೆ ರಸ್ತೆ ಮಾರ್ಗದ ಮೂಲಕ ಹಾಲು ಸಾಗಣೆ ಮಾಡಲು 54 ಗಂಟೆ ಬೇಕಾಗುತ್ತದೆ. ಈ ಕುರಿತು ಪ್ರಾಯೋಗಿಕ ಸಂಚಾರವನ್ನು ಸಹ ನಡೆಸಲಾಗಿದೆ.
2,190 ಟ್ಯಾಂಕರ್‌ಗಳ ಮೂಲಕ ಮಂಡ್ಯದಿಂದ ದೆಹಲಿಗೆ ಹಾಲನ್ನು ಸಾಗಣೆ ಮಾಡಲಿದೆ. ದೆಹಲಿ ಮತ್ತು ಹರ್ಯಾಣದ ವಿವಿಧ ಪ್ರದೇಶಗಳಿಗೆ ಹಾಲನ್ನು ಸರಬರಾಜು ಮಾಡಲಾಗುತ್ತದೆ. ಟ್ಯಾಂಕರ್‌ಗಳು 2400 ರಿಂದ 2500 ಕಿ. ಮೀ. ಸಂಚಾರ ನಡೆಸಬೇಕಿದೆ.
ಕೆಎಂಎಫ್ ಕರ್ನಾಟಕದಲ್ಲಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಡ್ಲಿ, ದೋಸೆ ಹಿಟ್ಟು ಮಾರಾಟ ಆರಂಭಿಸಲಾಗುತ್ತದೆ ಎಂದು ಈಗಾಗಲೇ ಘೋಷಣೆ ಮಾಡಿದೆ. ಇದಕ್ಕಾಗಿ ಜಯನಗರದಲ್ಲಿ ಘಕವೊಂದನ್ನು ಆರಂಭಿಸಿದೆ. ನವೆಂಬರ್ 26ರಂದು ಈ ಮಾರಾಟವನ್ನು ಆರಂಭಿಸಲಿದೆ.












Click it and Unblock the Notifications