ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ; ಸಂಸತ್ ನಲ್ಲಿ ಕೈಜೋಡಿಸಿ ಮನವಿ ಮಾಡಿದ ಹೆಚ್ ಡಿ ದೇವೇಗೌಡ
ನವದೆಹಲಿ, ಫೆಬ್ರವರಿ 07: ಕರ್ನಾಟಕದಲ್ಲಿ ಆಗುತ್ತಿರುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭೆ ಸದಸ್ಯರಾದ ಹೆಚ್ ಡಿ ದೇವೇಗೌಡ್ರು ಧ್ವನಿ ಎತ್ತಿದ್ದಾರೆ. ಮೇಕೆದಾಟು ಯೋಜನೆಯ ವಿಷಯವನ್ನು ಪ್ರಸ್ತಾಪ ಮಾಡಿದ ದೇವೇಗೌಡ್ರು, ರಾಜ್ಯದ ಕುಡಿಯುವ ನೀರಿನ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಹೌದು, ರಾಜ್ಯಸಭೆಯಲ್ಲಿ ಮಂಗಳವಾರ ಹೆಚ್ ಡಿ ದೇವೇಗೌಡ್ರು ಮಾತನಾಡಿ, ಕೇಂದ್ರ ಸರಕಾರವು 30 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಕು ಸಂಸತ್ ನಲ್ಲಿ ಕೈ ಮುಗಿದು ದೇವೇಗೌಡ್ರು ಮನವಿ ಮಾಡಿದರು.

ಸುಪ್ರೀಂ ಕೋರ್ಟ್ʼನಲ್ಲಿ ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ವಕೀಲರೇ ಮೆಟ್ಟೂರು ಜಲಾಶಯಕ್ಕೆ ಮೇಲ್ಭಾಗದಲ್ಲಿ ಕರ್ನಾಟಕ ಜಲಾಶಯ ನಿರ್ಮಾಣ ಮಾಡಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ದಯಮಾಡಿ ಪ್ರಧಾನಿಗಳು ಮಧ್ಯಪ್ರವೇಶ ಮಾಡಬೇಕು, ಕರ್ನಾಟಕದ ಕುಡಿಯುವ ನೀರಿನ ಸಂಕಷ್ಟವನ್ನು ಪರಿಹಾರ ಮಾಡಬೇಕು. ಇದಷ್ಟೇ ಎಲ್ಲರಿಗೂ ನನ್ನ ಪ್ರಾರ್ಥನೆ ಎಂದು ಕೈ ಜೋಡಿಸಿ ಮನವಿಕೊಂಡರು.
ಇನ್ನೂ ಸದನದಲ್ಲಿ ಮಂಡಸಲಾಗಿದ್ದ ಮಾಲಿನ್ಯ ನಿಯಂತ್ರಣ ಮಸೂದೆಯನ್ನು ಸ್ವಾಗತ, ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ಕರ್ನಾಟಕವೂ ಸೇರಿದಂತೆ ಎಲ್ಲೆಡೆ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ನನಗೆ ಗೊತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತಮ್ಮ ಸ್ವಾರ್ಥಕ್ಕಾಗಿ, ಸ್ವಹಿತಕ್ಕಾಗಿ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಮುಖ್ಯಮಂತ್ರಿ ಆಗಿದ್ದ ನನಗೆ ಚನ್ನಾಗಿ ಗೊತ್ತಿದೆ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿಗಳಾಗಿ ಹತ್ತು ವರ್ಷ ಪೂರೈಸಿದ್ದಾರೆ. ನಾನು ಕೇವಲ ಹತ್ತು ತಿಂಗಳು ಮಾತ್ರ ಆ ಹುದ್ದೆಯಲ್ಲಿದ್ದೆ. ಆದರೆ, ನಾನು ಅವರಿಗೆ ಹೋಲಿಕೆ ಮಾಡಿಕೊಳ್ಳುತ್ತಿಲ್ಲ. ನನ್ನ ಅರವತ್ತು ವರ್ಷಗಳ ಸಾರ್ವಜನಿಕ ಜೀವನದ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ, ಅಷ್ಟೇ. ಕರ್ನಾಟಕದಲ್ಲಿ ಕಳೆದ ಏಳು ತಿಂಗಳಿಂದ ರಾಜ್ಯ ಸರಕಾರ ಹಲವಾರು ವಿಚಾರಗಳನ್ನು ಮುಂಚೂಣಿಗೆ ತಂದಿದೆ. ಮೀಸಲಾತಿ ಬಗ್ಗೆ ನಾನು ಯಾರನ್ನೂ ದೂರುವುದಿಲ್ಲ. ಆನೇಕ ಮೀಸಲಾತಿ ವರದಿಗಳ ಬಗ್ಗೆ ನನಗೆ ಗೊತ್ತಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಕಾಂತರಾಜು ಸಮಿತಿ ವರದಿ ಬಗ್ಗೆ ಚರ್ಚೆ ನಡೆಯುತ್ತಿದೆ.

ರಾಜ್ಯದಲ್ಲಿ ಕಾಡುಗೊಲ್ಲ ಸಮುದಾಯ ಮೀಸಲು ಸೌಲಭ್ಯದಿಂದ ವಂಚಿತರಾಗಿ ಅನ್ಯಾಯಕ್ಕಾಗಿ ತುತ್ತಾಗಿದೆ. 2014ರಿಂದಲೂ ಇವರನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸುವ ಪ್ರಸ್ತಾವನೆ ಇತ್ತು. ಈಗ 2024. ಪ್ರಧಾನಮಂತ್ರಿಗಳು ನಾಳೆ ಸದನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಅವರ ಗಮನ ಸೆಳೆಯುವುದಕ್ಕಾಗಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ ಎಂದು ದೇವೇಗೌಡರು ಹೇಳಿದರು.
ಈ ಸಮುದಾಯದ ಪರವಾಗಿ ನೂತನ ಸಂಸತ್ ಭವನದಲ್ಲಿ ಪ್ರಧಾನಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದೆ. ನನ್ನ ಬಗ್ಗೆ ಅವರು ಅತೀವ ಪ್ರೀತಿ ವಾತ್ಸಲ್ಯ ತೋರಿದರು. ನನಗೀಗ 91 ವರ್ಷ ವಯಸ್ಸು. ಹಿಂದೆ ಅನೇಕ ಪ್ರಧಾನಿಗಳನ್ನು ನೋಡಿದ್ದೇನೆ, ಭೇಟಿಯಾಗಿದ್ದೇನೆ. ಯಾರೂ ನನ್ನ ಬಗ್ಗೆ ಇಷ್ಟೊಂದು ಪ್ರೀತಿ ತೋರಿಸಿರಲಿಲ್ಲ. ಅಂದು ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಪ್ರವರ್ಗಕ್ಕೆ ಸೇರಿಸಬೇಕು ಎಂದು ಅವರಲ್ಲಿ ಮನವಿ ಮಾಡಿದ್ದೆ. ತಕ್ಷಣವೇ ಅವರು ಹೇಳಿದರು.
ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು. 2022-2023ರಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವೂ ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಕರ್ನಾಟಕದ 13 ಜಿಲ್ಲೆಗಳಲ್ಲಿರುವ ಕಾಡುಗೊಲ್ಲ ಸಮುದಾಯದ ಹಿತಕ್ಕಾಗಿ ಪ್ರಧಾನಿಗಳು ನಿರ್ಧಾರ ಪ್ರಕಟಿಸಬೇಕು ಎಂದು ಸದನದ ಮೂಲಕ ಮನವಿ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಹೇಳಿದರು.












Click it and Unblock the Notifications