Khushbu Sundar: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಖುಷ್ಬೂ ಸುಂದರ್ ನಾಮನಿರ್ದೇಶನ
ಬಿಜೆಪಿಯ ತಮಿಳುನಾಡು ಅಧ್ಯಕ್ಷ ಕೆ. ಅಣ್ಣಾಮಲೈ ಅವರು ತಮ್ಮ ಪಕ್ಷದ ಪರವಾಗಿ ಖುಷ್ಬೂ ಸುಂದರ್ ಅವರನ್ನು ಅಭಿನಂದಿಸಿದ್ದಾರೆ
ನವದೆಹಲಿ, ಫೆಬ್ರವರಿ. 27: ತಮಿಳುನಾಡಿನ ರಾಜಕಾರಣಿ, ನಟಿ ಖುಷ್ಬೂ ಸುಂದರ್ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಅವರು ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಂತಸ ಹಂಚಿಕೊಂಡಿರುವ ಅವರು, ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
I thank our H'ble PM @narendramodi ji and the government of India for entrusting me with such a huge responsibility. I shall strive hard to protect, preserve & nourish Nari Shakthi which is growing leaps & bounds under your leadership. Looking forward eagerly. #JaiHind@NCWIndia pic.twitter.com/Tm5GTJPEDe
— KhushbuSundar (@khushsundar) February 27, 2023
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿರುವ ಖುಷ್ಬೂ ಸುಂದರ್ ಅವರಿಗೆ ಇದೀಗ ಶಾಸನಬದ್ಧ ಹುದ್ದೆಯನ್ನು ನಿಭಾಯಿಸುವ ಅವಕಾಶ ಸಿಕ್ಕಿದೆ. ಅವರನ್ನು ಮೋದಿ ಸರ್ಕಾರವು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನಾಮನಿರ್ದೇಶನ ಮಾಡಿದ್ದು, ಆಕೆಯ ಅಧಿಕಾರಾವಧಿ ಮೂರು ವರ್ಷಗಳಾಗಿರುತ್ತದೆ. ಹಲವು ವರ್ಷಗಳಿಂದ ರಾಜಕಾರಣಿಯಾಗಿರುವ ಹಿರಿಯ ಸಿನಿ ಕಲಾವಿದೆ ಮಮತಾ ಕುಮಾರಿ ಮತ್ತು ಡೆಲಿನಾ ಖೊಂಗ್ಡುಪ್ ಅವರು ಕೂಡ ನಾಮನಿರ್ದೇಶನಗೊಂಡಿದ್ದಾರೆ.

ಬಿಜೆಪಿಯ ತಮಿಳುನಾಡು ಅಧ್ಯಕ್ಷ ಕೆ. ಅಣ್ಣಾಮಲೈ ಅವರು ತಮ್ಮ ಪಕ್ಷದ ಪರವಾಗಿ ಖುಷ್ಬೂ ಸುಂದರ್ ಅವರನ್ನು ಅಭಿನಂದಿಸಿದ್ದಾರೆ. ಇದು ಅವರು ನಿರಂತರವಾಗಿ ಮಹಿಳಾ ಹಕ್ಕುಗಳಿಗಾಗಿ ನಡೆಸಿದ ಹೋರಾಟಕ್ಕೆ ಸಿಕ್ಕ ಮನ್ನಣೆಯಾಗಿದೆ ಎಂದು ಹೇಳಿದ್ದಾರೆ.
"ಇಂತಹ ಬಹುದೊಡ್ಡ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ನಾನು ನಮ್ಮ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ನಿಮ್ಮ ನಾಯಕತ್ವದಲ್ಲಿ ಬೆಳೆಯುತ್ತಿರುವ ನಾರಿ ಶಕ್ತಿಯನ್ನು ರಕ್ಷಿಸಲು, ಸಂರಕ್ಷಿಸಲು ನಾನು ಶ್ರಮಿಸುತ್ತೇನೆ" ಎಂದು ನಟಿ ಖುಷ್ಬೂ ಸುಂದರ್ ಟ್ವೀಟ್ ಮಾಡಿದ್ದಾರೆ.
ಚಲನಚಿತ್ರ ನಿರ್ಮಾಪಕಿ ಮತ್ತು ದೂರದರ್ಶನ ನಿರೂಪಕಿರೂ ಆಗಿರುವ ನಟಿ ಖುಷ್ಬೂ ಸುಂದರ್, ಆರಂಭದಲ್ಲಿ ಡಿಎಂಕೆ ಮೂಲಕ ರಾಜಕಾರಣಕ್ಕೆ ಪದಾರ್ಪಣೆ ಮಾಡಿದರು. ಬಳಿಕ ಕಾಂಗ್ರೆಸ್‌ಗೆ ತೆರಳಿ ಅಲ್ಲಿ ರಾಷ್ಟ್ರೀಯ ಪಕ್ಷದ ವಕ್ತಾರರಾಗಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಗೊಂಡು 2021 ರಲ್ಲಿ ಥೌಸಂಡ್ ಲೈಟ್ಸ್ ಅಸೆಂಬ್ಲಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಮತ್ತು ಡಿಎಂಕೆಯ ಎನ್. ಎಜಿಲನ್ ವಿರುದ್ಧ ಸೋಲು ಕಂಡಿದ್ದಾರೆ.












Click it and Unblock the Notifications