ಕೇರಳದ ಪುತ್ತುಪ್ಪಲ್ಲಿ ಉಪಚುನಾವಣೆಯಲ್ಲಿ ಚಾಂಡಿ ಉಮ್ಮನ್ ಗೆಲುವು: ಬರಿಗಾಲಲ್ಲಿ ಪಾದಯಾತ್ರೆ ಆರಂಭಿಸಿದ ಮಾಜಿ ಸಿಎಂ ಪುತ್ರ
ಕೊಟ್ಟಾಯಂ, ಸೆಪ್ಟೆಂಬರ್ 09: ಕೇರಳದ ಪುತ್ತುಪ್ಪಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಾಂಡಿ ಉಮ್ಮನ್ ಭಾರಿ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಂಡಿ ಉಮ್ಮನ್ ಅವರು ಶನಿವಾರ ಬೆಳಗ್ಗೆ ತಮ್ಮ ಕ್ಷೇತ್ರದಲ್ಲಿ ಬರಿಗಾಲಿನ ಪಾದಯಾತ್ರೆ ಆರಂಭಿಸಿದ್ದಾರೆ. ಸೋಮವಾರ ಕೇರಳ ವಿಧಾನಸಭೆಯಲ್ಲಿ ಉಮ್ಮನ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಉಮ್ಮನ್ ಅವರು ತಮ್ಮ ಮತದಾರರಿಗೆ ವೈಯಕ್ತಿಕವಾಗಿ ಧನ್ಯವಾದ ಅರ್ಪಿಸಲು ಬೆಳಗ್ಗೆ 9 ಗಂಟೆಗೆ ಪಾದಯಾತ್ರೆ ಆರಂಭಿಸಿದ್ದಾರೆ. ವಾಕಥಾನಂನಿಂದ ಅಕಲಕುನ್ನಂ ವರೆಗೆ ಪಾದಯಾತ್ರೆ ನಡೆಯಲಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಚಾಂಡಿ ಉಮ್ಮನ್ ಅವರು ಬರಿಗಾಲಲ್ಲೇ ಭಾಗವಹಿಸಿದ್ದರು. ಈ ಪಾದಯಾತ್ರೆಯ ಸಂದರ್ಭದಲ್ಲೂ ಬರಿಗಾಲಿನಲ್ಲಿ ನಡೆಯುತ್ತಿದ್ದಾರೆ.
ಚಾಂಡಿ ಉಮ್ಮನ್ ಅವರು 37,719 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವಿಜಯೋತ್ಸವದ ಘೋಷಣೆಯ ನಂತರ ಮಾತನಾಡಿದ ಉಮ್ಮನ್, ಇದು ತಮ್ಮ ತಂದೆಯ 13 ನೇ ಗೆಲುವು ಎಂದು ಹೇಳಿದ್ದಾರೆ.

ಅವರ ತಂದೆ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಸಲಾಯಿತು. ಮಾಜಿ ಸಿಎಂ 53 ವರ್ಷಗಳ ಕಾಲ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಕೇರಳ ಇತಿಹಾಸದಲ್ಲಿ ದಾಖಲೆ ಬರೆದಿದ್ದಾರೆ.
ತಮ್ಮ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರೊಂದಿಗೆ ಪುತ್ತುಪ್ಪಳ್ಳಿ ಹೊಂದಿದ್ದ ಭಾವನಾತ್ಮಕ ಬಾಂಧವ್ಯದ ಮೇಲೆ ಈ ಚುನಾವಣೆ ನಡೆದಿದೆ ಎಂದು ಚಾಂಡಿ ಉಮ್ಮನ್ ಹೇಳಿದ್ದಾರೆ. ಪಿಣರಾಯಿ ವಿಜಯನ್ ಸರ್ಕಾರದ ವಿರೋಧಿ ಅಲೆಯು ಇಲ್ಲಿ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ. 37 ವರ್ಷ ವಯಸ್ಸಿ ಉಮ್ಮನ್ ಅವರು ಶೇ 61.38 ಮತಗಳನ್ನು ಪಡೆದಿದ್ದಾರೆ. ಅವರ ಗೆಲುವಿನ ಅಂತರ 37,719 ಮತಗಳಾಗಿವೆ. 2011 ರ ವಿಧಾನಸಭಾ ಚುನಾವಣೆಯಲ್ಲಿ ಉಮ್ಮನ್ ಚಾಂಡಿ ಅವರು ಸಾರ್ವಕಾಲಿಕ ಗರಿಷ್ಠ 33,255 ಮತಗಳಿಂದ ಗೆಲುವು ಸಾಧಿಸಿದ್ದರು.
2016 ಮತ್ತು 2021 ರಲ್ಲಿ ಉಮ್ಮನ್ ಚಾಂಡಿ ವಿರುದ್ಧ ಸ್ಪರ್ಧಿಸಿದ್ದ ಸಿಪಿಐ(ಎಂ) ಅಭ್ಯರ್ಥಿ ಜೈಕ್ ಸಿ ಥಾಮಸ್ ಅವರು ಶೇ 32.49 ಮತಗಳನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ. ಬಿಜೆಪಿಯ ಜಿ ಲಿಜಿನ್ ಲಾಲ್ ಅವರು ಕೇವಲ ಶೇ 5.02 ಮತಗಳನ್ನು ಗಳಿಸುವುದರೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
37ರ ಹರೆಯದ ಯುವ ಕಾಂಗ್ರೆಸ್ ನಾಯಕ ಸೋಮವಾರ ವಿಧಾನಸಭೆಯಲ್ಲಿ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಭಾ ಟಿವಿಯಲ್ಲಿ ಕಲಾಪ ನೇರ ಪ್ರಸಾರವಾಗಲಿದೆ. ಪುತ್ತುಪ್ಪಳ್ಳಿ ಉಪಚುನಾವಣೆಯಿಂದಾಗಿ ಮೊಟಕುಗೊಂಡ ವಿಧಾನಸಭೆ ಅಧಿವೇಶನ ಸೋಮವಾರ ಪುನರಾರಂಭವಾಗಲಿದೆ.












Click it and Unblock the Notifications